ಕಾಂಗ್ರೆಸ್-ಜೆಡಿಎಸ್ ಒಳಜಗಳ: ಮೈಸೂರು ಪಾಲಿಕೆಯಲ್ಲಿ ಮೊದಲ ಬಾರಿ ಅರಳಿದ ‘ಕಮಲ’

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಳಜಗಳದ ಲಾಭ ಪಡೆದುಕೊಂಡ ಬಿಜೆಪಿ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪಟ್ಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.

Written by - Puttaraj K Alur | Last Updated : Aug 25, 2021, 01:46 PM IST
  • ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಳಜಗಳದಲ್ಲಿ ಬಿಜೆಪಿ ಭರ್ಜರಿ ಲಾಭ ಮಾಡಿಕೊಂಡಿದೆ
  • ಬಿಜೆಪಿಯ ಅಭ್ಯರ್ಥಿ ಸುನಂದಾ ಪಾಲನೇತ್ರ ಅರಮನೆ ನಗರಿಯ ನೂತನ ಮೇಯರ್ ಆಗಿ ಆಯ್ಕೆ
  • ನೂತನ ಮೇಯರ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‍ವೈ ಅಭಿನಂದನೆ
ಕಾಂಗ್ರೆಸ್-ಜೆಡಿಎಸ್ ಒಳಜಗಳ: ಮೈಸೂರು ಪಾಲಿಕೆಯಲ್ಲಿ ಮೊದಲ ಬಾರಿ ಅರಳಿದ ‘ಕಮಲ’   title=
ಮೈಸೂರು ಪಾಲಿಕೆಯಲ್ಲಿ ಅರಳಿದ ‘ಕಮಲ’ (Photo Courtesy: @Zee News)

ಮೈಸೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಜಗಳದಲ್ಲಿ ಬಿಜೆಪಿ ಭರ್ಜರಿ ಲಾಭ ಮಾಡಿಕೊಂಡಿದೆ. ಎರಡೂ ಪಕ್ಷಗಳ ನಡುವಿನ ಒಳಜಗಳದ ಲಾಭ ಪಡೆದುಕೊಂಡ ಬಿಜೆಪಿ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ(Mysuru City Corporation) ಮೇಯರ್ ಪಟ್ಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.

ಮೈಸೂರು ಪಾಲಿಕೆಯ ಮೇಯರ್ ಪಟ್ಟ ಬಿಜೆಪಿ(BJP) ಪಾಲಾಗಿದೆ. ಬಿಜೆಪಿಯ ಅಭ್ಯರ್ಥಿ ಸುನಂದಾ ಪಾಲನೇತ್ರ(Sunanda Planethra) ಅರಮನೆ ನಗರಿಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೈಸೂರು ಪಾಲಿಕೆಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿದಂತಾಗಿದೆ. ಈ ಬಾರಿ ‘ಕೈ’ ಮತ್ತು ‘ತೆನೆ’ ಪಕ್ಷಗಳ ನಡುವಿನ ಮೈತ್ರಿ ಮುರಿದು ಬಿದಿತ್ತು. ಈ ಹಿನ್ನೆಲೆ  26 ಮತಗಳನ್ನು ಗಳಿಸಿದ್ದ ‘ಕಮಲ’ ಪಕ್ಷದ ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಬಡಮಕ್ಕಳ ಪಾಲಿನ ಸ್ವೆಟರ್‌, ಮೊಟ್ಟೆ ಎಲ್ಲವನ್ನೂ ತಿನ್ನುತ್ತಿದ್ದಾರೆ: ಕಾಂಗ್ರೆಸ್ ಆರೋಪ

ಪಾಲಿಕೆಯಲ್ಲಿ ಹೈಡ್ರಾಮಾ: ಕಾಂಗ್ರೆಸ್ ಸದಸ್ಯರ ವಾಕ್ ಔಟ್

ಇಂದು ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ(Mysore Mayor Election) ವೇಳೆ ದೊಡ್ಡ ಹೈಡ್ರಾಮಾವೇ ನಡೆಯಿತು. ಬೆಳಗ್ಗೆ ಮತ ಪ್ರಕ್ರಿಯೆ ಆರಂಭವಾದ ಕೂಡಲೇ ಜೆಡಿಎಸ್ ಸದಸ್ಯರು ತಟಸ್ಥ ನಿಲುವು ತೋರಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಜೆಡಿಎಸ್ ವಿರುದ್ಧ ಧಿಕ್ಕಾರ, ಆಕ್ರೋಶ ಕೂಗಿ ವಾಕ್ ಔಟ್ ಮಾಡಿದರು. ಈ ಬಾರಿಯೂ ಮೇಯರ್ ಪಟ್ಟ ತಮಗೆ ಸಿಗಬೇಕೆಂದು ಕಾಂಗ್ರೆಸ್ ಬಿಗಿಪಟ್ಟು ಹಿಡಿದಿತ್ತು. ಆದರೆ ನಮಗೆ ಮೇಯರ್ ಸ್ಥಾನ ಕೊಡಿ ಎಂದು ಜೆಡಿಎಸ್ ನಾಯಕರು ಕೂಡ ಬಿಗಿಪಟ್ಟು ಹಿಡಿದಿದ್ದರು. ಎರಡೂ ಪಕ್ಷಗಳ ನಡುವೆ ಒಮ್ಮತದ ನಿರ್ಧಾರ ಮೂಡದ ಹಿನ್ನೆಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದುಬಿತ್ತು. ಇದರ ಸದುಪಯೋಗ ಪಡೆದುಕೊಂಡ ಕೇಸರಿ ಪಡೆ ಮೊದಲ ಬಾರಿಗೆ ಮೈಸೂರು ಪಾಲಿಕೆ ಮೇಯರ್ ಪಟ್ಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಯಿತು. ಬಿಜೆಪಿ ಕಾರ್ಯಕರ್ತರು ಪಾಲಿಕೆ ಎದುರು ಸಂಭ್ರಮಾಚರಣೆ ನಡೆಸಿದರು.  

ಇದನ್ನೂ ಓದಿ: NEP : 'ದೇಶದಲ್ಲಿ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ'

ಸುನಂದಾ ಪಾಲನೇತ್ರರಿಗೆ ಸಿಎಂ ಅಭಿನಂದನೆ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದ ಬಿಜೆಪಿಯ ಸುನಂದಾ ಪಾಲನೇತ್ರ(Sunanda Planethra) ಅವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಸಂಸದರು, ಶಾಸಕರು ಹಾಗೂ ಮೈಸೂರಿನ ಜನತೆಗೆ ಸಿಎಂ ಧನ್ಯವಾದ ತಿಳಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿನಂದನೆ

‘ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮೊದಲ ಬಾರಿಗೆ ಬಿಜೆಪಿ ಪಡೆದುಕೊಂಡಿದ್ದು, ಇದು ಪಕ್ಷದ ಬೇರುಗಳು ವಿಸ್ತಾರಗೊಳ್ಳುತ್ತಿರುವ ಪ್ರಬಲ ಸಂಕೇತವಾಗಿದೆ. ಮೈಸೂರಿನ ಮೇಯರ್ ಆಗಿ ಆಯ್ಕೆಯಾಗಿರುವ ಪಕ್ಷದ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ ಹಾರ್ದಿಕ ಅಭಿನಂದನೆಗಳು’ ಅಂತಾ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಟ್ವೀಟ್ ಮಾಡಿದ್ದಾರೆ.

ಯಾರಿಗೆ ಎಷ್ಟು ಸ್ಥಾನ

ಒಟ್ಟು ಸ್ಥಾನಗಳು: 72

ಬಿಜೆಪಿ: 26

ಕಾಂಗ್ರೆಸ್: 22

ಜೆಡಿಎಸ್: 22

ಗೈರು: 02

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News