ಬೆಂಗಳೂರು: ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕೇಂದ್ರ ಸರ್ಕಾರ ಆದರ್ಶ ಸ್ಮಾರಕ ಎಂದು ಘೋಷಿಸಿದೆ.
ನಾಡಿನ ಶಿಲ್ಪಕಲೆಗೆ ಹೊಯ್ಸಳರ ಕೊಡುಗೆ ಎಂದಾಕ್ಷಣ, ನೆನಪಿಗೆ ಬರುವುದು ಬೇಲೂರಿನ ಚನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು. ವಿಶ್ವ ಭೂಪಟದಲ್ಲಿ ತನ್ನದೇ ಛಾಪು ಮೂಡಿಸಿರುವ ಬೇಲೂರು ದೇವಾಲಯ ಇಂದಿಗೂ ತನ್ನ ಸೌಂದರ್ಯ ಕಾಪಾಡಿಕೊಂಡು ಬಂದಿರುವುದು ಹೆಮ್ಮೆಯ ವಿಷಯ.
ಐತಿಹಾಸಿಕ ಸ್ಮಾರಕಗಳಲ್ಲಿ ಬೇಲೂರು ಚನ್ನಕೇಶವ ದೇವಾಲಯ ಪ್ರತಿಷ್ಠಾಪನೆಯಾಗಿ ಬರೋಬ್ಬರಿ 900 ವರ್ಷ ತುಂಬಿದೆ. ಕಲಾ ಶ್ರೀಮಂತಿಕೆಗೆ ಹೆಸರಾದ ಈ ದೇವಾಲಯ ಇದೀಗ ಆದರ್ಶ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ, ಈ ಎರಡೂ ದೇಗುಲಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಬಗ್ಗೆಯೂ ವರದಿಯೂ ಸಲ್ಲಿಸಲಾಗಿದೆ ಎಂದು ಕೇಂದ್ರ ಪುರಾತತ್ವ ಸಂರಕ್ಷಣಾ ಇಲಾಖೆ ತಿಳಿಸಿದೆ.