ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಜಾಗ ಗುರ್ತಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ

ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು- ಸಿಎಂ ಕುಮಾರಸ್ವಾಮಿ

Last Updated : Aug 20, 2018, 07:34 AM IST
ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಜಾಗ ಗುರ್ತಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ title=
Pic: Twitter@CMofKarnataka

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ,  ಸಂತ್ರಸ್ಥರಿಗೆ ನೆಲೆ ಕಲ್ಪಿಸುವುದರ ಜೊತೆಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಮುಕ್ಕೋಡ್ಲು ಗ್ರಾಮದಲ್ಲಿ ಭಾನುವಾರ 60 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎರಡು ಸ್ಥಳಗಳಲ್ಲಿ ಒಟ್ಟು 170 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸಮಸ್ಯೆಗಳಿಗೆ ತುತ್ತಾದ ಕುಟುಂಬಗಳಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಯಾವುದೇ ರೀತಿಯಲ್ಲಿ ಹಣದ ಕೊರತೆ ಇಲ್ಲ, ಎಷ್ಟು ಬೇಕಾದರೂ ಹಣ ಬಿಡುಗಡೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಸಂತ್ರಸ್ಥರಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.   
      
ಮಡಿಕೇರಿ-ಮಂಗಳೂರು ರಸ್ತೆ ಗುಡ್ಡ ಕುಸಿದಿದೆ, ಹಾಗೆಯೇ ಮಡಿಕೇರಿ-ಸೋಮವಾರಪೇಟೆ ರಸ್ತೆ ಕುಸಿದಿದ್ದು, ತಕ್ಷಣವೇ ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು. ಆ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಸಿಎಂ, ಸರ್ಕಾರಕ್ಕೆ ಕಪ್ಪುಚುಕ್ಕೆ ಬರದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು. 

ಕೊಡಗು ಜಿಲ್ಲೆಯಲ್ಲಿ ಆಗಿರುವ ನಷ್ಟಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಅವರು ಪ್ರಕಟಿಸಿದರು. ಜಿಲ್ಲೆಯಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಮರ್ಪಕ ಶೌಚಾಲಯಗಳು ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಸಂಬಂಧ ಈಗಾಗಲೇ ಬೆಂಗಳೂರಿನಿಂದ 120 ಸಂಚಾರಿ ಶೌಚಾಲಯಗಳನ್ನು ತರಿಸಲಾಗುತ್ತಿದೆ. ಜೊತೆಗೆ ಬೃಹತ್  ಬೆಂಗಳೂರು ಮಹಾನಗರ ಪಾಲಿಕೆಯಿಂದ 300 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 
     
ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಉತ್ತಮ ಊಟ, ಉಪಹಾರ ಒದಗಿಸಬೇಕು. ಸರ್ಕಾರ ಎಡವಿದೆ ಎಂಬ ದೂರುಗಳು ಕೇಳಿಬರಬಾರದು, ಸಮರೋಪಾದಿಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. 
  
ಪ್ರಕೃತಿ ವಿಕೋಪ ಪರಿಹಾರ ಸಂಬಂಧ ಇನ್ನಷ್ಟು ಕಾರ್ಯ ನಿರ್ವಹಿಸುವಂತಾಗಲು ಬೇರೆ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಹಾಗೆಯೇ ಕಾಫಿ ಮಂಡಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ತಿಳಿಸಲಾಗಿದೆ ಎಂದರು.   
     
ಈಗಾಗಲೇ ನಾನಾ ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವರು ಪರಿಹಾರ ಕೇಂದ್ರಗಳಿಗೆ ಹೋಗಲು ಇಷ್ಟಪಡುವುದಿಲ್ಲ, ಹಾಗೆಯೇ ಸರ್ಕಾರತೇರ ಸಂಸ್ಥೆಗಳು ಸಹ ಸಂತ್ರಸ್ಥರಿಗೆ ಊಟೋಪಚಾರ ಕಲ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದರು. 
    
ಕಳೆದ ಒಂದು ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಪ್ರಕೃತಿ ವಿಕೋಪದಿಂದ ಆಗಿರುವ ಅನಾಹುತದಲ್ಲಿ ಸಂತ್ರಸ್ಥರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು, ಸಾರ್ವಜನಿಕರು, ಸ್ಥಳೀಯರು ಶ್ರಮಿಸಿದ್ದಾರೆ ಎಂದರು. 

ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗುತ್ತದೆ, ಹಾಗೆಯೇ ಹಾರಂಗಿ ಜಲಾಶಯ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇಂತಹ ವದಂತಿಗಳಿಗೆ ಯಾರೂ ಸಹ ಕಿವಿಗೊಡಬಾರದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.   

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜಿಲ್ಲೆಯಲ್ಲಿ ಸುಮಾರು 50 ಸಾವಿರ ಜನ ನೇರವಾಗಿ ಮಳೆಯಿಂದ ತೊಂದರೆಗೀಡಾಗಿದ್ದಾರೆ. ಈ ಪೈಕಿ ಸುಮಾರು 4 ಸಾವಿರ ಜನರು ವಿವಿಧ ಪ್ರದೇಶಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳ ತೀವ್ರ ಮಳೆಯಿಂದಾಗಿ ಸಾವಿರಾರು ಮನೆಗಳು ಹಾನಿಯಾಗಿದ್ದು, 07 ಜನರು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 3,120 ಸಂತ್ರಸ್ತರನ್ನು ರಕ್ಷಿಸಿದ್ದು, ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 41 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಈ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಊಟೋಪಚಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಹಾಸಿಗೆ ಮತ್ತು ಹೊದಿಕೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು. 

ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್, ಸಣ್ಣ ಕೈಗಾರಿಕಾ ಸಚಿವರಾದ ಶ್ರೀನಿವಾಸ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕಲ್ಪನಾ, ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಾದ ಎಂ.ಎನ್.ರೆಡ್ಡಿ, ಸುನಿಲ್ ಅಗರ್‍ವಾಲ್, ಭಾಸ್ಕರ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಚಾಮರಾಜನಗರ ಜಿಲ್ಲಾಧಿಕಾರಿ ಕಾವೇರಿ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಜಿ.ಪ್ರಭು, ಮಾಧ್ಯಮ ಸಲಹೆಗಾರರಾದ ಎಚ್.ಬಿ.ದಿನೇಶ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Trending News