ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮನೆಗೆ ಸಿಎಂ ಭೇಟಿ : 5 ಲಕ್ಷ ರೂ. ಪರಿಹಾರ ವಿತರಣೆ

ಆತ್ಮಹತ್ಯೆಗೆ ಶರಣಾದ ಮಂಡ್ಯ ಜಿಲ್ಲೆಯ ಕೆ.ಆರ್ .ಪೇಟೆ ತಾಲ್ಲೂಕಿನ ಸಂತೇಬಾಚಳ್ಳಿ ಹೋಬಳಿಯ, ಅಘಲಯ ಗ್ರಾಮದ ರೈತ ಸುರೇಶ್ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

Last Updated : Jun 18, 2019, 12:20 PM IST
ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮನೆಗೆ ಸಿಎಂ ಭೇಟಿ : 5 ಲಕ್ಷ ರೂ. ಪರಿಹಾರ ವಿತರಣೆ title=
Pic Courtesy: Twitter

ಮಂಡ್ಯ : ವಿಡಿಯೋ ಮಾಡಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ತನ್ನ ಅಂತ್ಯ ಸಂಸ್ಕಾರಕ್ಕೆ ಆಹ್ವಾನಿಸಿ, ಆತ್ಮಹತ್ಯೆಗೆ ಶರಣಾಗಿದ್ದ ರೈತ ಸುರೇಶ್ ಮನೆಗೆ ಇಂದು ಭೇಟಿ ನೀಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬದವರಿಗೆ ಸಾಂತ್ವನಹೇಳಿದರು.

ಮಂಡ್ಯ ಜಿಲ್ಲೆಯ ಕೆ.ಆರ್ .ಪೇಟೆ ತಾಲ್ಲೂಕಿನ ಸಂತೇಬಾಚಳ್ಳಿ ಹೋಬಳಿಯ, ಅಘಲಯ ಗ್ರಾಮದ ರೈತ ಸುರೇಶ್ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರಧನದ ಚೆಕ್ ವಿತರಿಸಿದರು.

ನನಗೆ ವಿಡಿಯೋ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಕೆ.ಆರ್. ಪೇಟೆ ಸಂತೆಬಾಚಹಳ್ಳಿ ಹೋಬಳಿ ಅಘಲಯ ಗ್ರಾಮದ ರೈತ ಸುರೇಶ್ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ. ಈ ಘಟನೆಯಿಂದ ನನಗೆ ತೀವ್ರ ಆಘಾತ ಹಾಗೂ ನೋವಾಗಿದೆ. ಸರ್ಕಾರ ರೈತರ ಹಿತ ರಕ್ಷಣೆಗೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸುತ್ತಿದೆ. ಬದುಕಿನಲ್ಲಿ ಏಳುಬೀಳು ಸಹಜ. ಅದನ್ನು ನಾವು ದಿಟ್ಟವಾಗಿ ಎದುರಿಸಬೇಕು. ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎನ್ನುವುದು ನನ್ನ ಕಳಕಳಿಯ ಮನವಿ. ರಾಜ್ಯ ಹಲವು ವರ್ಷಗಳಿಂದ ಸತತ ಬರ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಪಕ್ಷಾತೀತವಾಗಿ ಎಲ್ಲರೂ ಮುಂದಾಗಬೇಕು ಎನ್ನುವುದು ನನ್ನ ಆಶಯ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಇದೇ ವೇಳೆ ಮೃತ ರೈತ ಸುರೇಶ್ ಪುತ್ರ ಚಂದ್ರು ಅವರಿಗೆ ಕೂಡಲೇ ಸೂಕ್ತ ಸರ್ಕಾರಿ ಉದ್ಯೋಗ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಮತ್ತು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಜೊತೆಗೆ ರೈತ ಸುರೇಶ್ ಪುತ್ರಿ ಸುವರ್ಣ ಅವರಿಗೆ ಎಂ.ಕಾಂ ಶಿಕ್ಷಣ ಮುಂದುವರೆಸಲು ಅಗತ್ಯ ಸಹಾಯ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ರೈತ ಸುರೇಶ್, ಕುಮಾರಸ್ವಾಮಿಯವರ ಅಭಿಮಾನಿಯೂ ಆಗಿದ್ದ ಎನ್ನಲಾಗಿದ್ದು, ವಿಡಿಯೋದಲ್ಲಿ ಸಂತೇಬಾಚಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರುತುಂಬಿಸಿ, ರೈತರನ್ನು ಕಾಪಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.

Trending News