"ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ"-ಸಿದ್ದರಾಮಯ್ಯ

ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Last Updated : Jul 21, 2022, 04:21 PM IST
  • ಕಳೆದ ತಿಂಗಳು ರಾಹುಲ್‌ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಕರೆದಾಗ ಇಡಿ ಕಚೇರಿ ವರೆಗೆ ಪ್ರತಿಭಟನೆ ಇಟ್ಟುಕೊಂಡು, ಅದಕ್ಕೆ ಮುತ್ತಿಗೆ ಹಾಕುವ ಕೆಲಸವನ್ನು ಮಾಡಿದ್ದೆವು.
  • ಈಗ ಮತ್ತೆ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಇಡಿ ಕರೆಸಿಕೊಂಡು ವಿಚಾರಣೆ ಮಾಡುತ್ತಿದೆ.
"ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ"-ಸಿದ್ದರಾಮಯ್ಯ title=

ಬೆಂಗಳೂರು: ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್‌ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಇ.ಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್‌ ಪಕ್ಷ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಳೆದ ತಿಂಗಳು ರಾಹುಲ್‌ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಕರೆದಾಗ ಇಡಿ ಕಚೇರಿ ವರೆಗೆ ಪ್ರತಿಭಟನೆ ಇಟ್ಟುಕೊಂಡು, ಅದಕ್ಕೆ ಮುತ್ತಿಗೆ ಹಾಕುವ ಕೆಲಸವನ್ನು ಮಾಡಿದ್ದೆವು. ಈಗ ಮತ್ತೆ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಇಡಿ ಕರೆಸಿಕೊಂಡು ವಿಚಾರಣೆ ಮಾಡುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಕರೆದರೆ ಕಾಂಗ್ರೆಸ್‌ ಯಾಕೆ ಹೆದರಿಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದವರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ : Work From Home New Rules: ವರ್ಕ್ ಫ್ರಮ್ ಹೋಮ್ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ, ಯಾವ ನೌಕರರಿಗೆ ಇದರಿಂದ ಲಾಭ?

ನಾವ್ಯಾರು ದೇಶದ ಕಾನೂನಿಗಿಂತ ದೊಡ್ಡವರಲ್ಲ. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸ್ವಾಯತ್ತ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಇರುವುದು ಎರಡೇ ರಾಷ್ಟ್ರೀಯ ಪಕ್ಷಗಳು. ಕಮ್ಯುನಿಷ್ಟ್‌ ಪಕ್ಷ ರಾಷ್ಟ್ರೀಯ ಪಕ್ಷವಾದರೂ ತಮ್ಮನ್ನು ಚುನಾವಣೆಯಲ್ಲಿ ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್‌ ಗೆ ಮಾತ್ರ ಎಂಬುದು ಬಿಜೆಪಿ ಅವರಿಗೆ ಗೊತ್ತಾಗಿದೆ. ಅದಕ್ಕೋಸ್ಕರವಾಗಿ ಕಾಂಗ್ರೆಸ್‌ ಪಕ್ಷವನ್ನು ನಿರ್ನಾಮ ಮಾಡಬೇಕು ಎಂದು ಹೊರಟಿದ್ದಾರೆ. ಮೋದಿ, ಅಮಿತ್‌ ಶಾ ಅವರೇ ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹಲವು ಬಾರಿ ಹೇಳಿದ್ದಾರೆ. ಇಡಿ ತನಿಖೆ ಮೂಲಕ ನಮ್ಮ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಇಡಿ ಅವರು ತನಿಖೆ ಮಾಡುವಂತಹಾ ಯಾವುದೇ ಪ್ರಕರಣ ಇಲ್ಲ. ಅಕ್ರಮ ಹಣದ ವರ್ಗಾವಣೆ ಎಲ್ಲಿ ಆಗಿದೆ? ಎಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆದಿದೆ? ಇಲ್ಲಿ ಎಫ್.ಐ.ಆರ್‌ ಕೂಡ ದಾಖಲಾಗಿಲ್ಲ. ಎಫ್.ಐ.ಆರ್‌ ಆಗದೆ ಯಾವುದೇ ತನಿಖಾ ಸಂಸ್ಥೆ ವಾರಂಟ್‌ ಕೊಡುವಂತಿಲ್ಲ. ಕಾನೂನು ತಿಳಿದ ಎಲ್ಲರಿಗೂ ಇದು ಗೊತ್ತಿರುವ ವಿಚಾರ. ನಾಡಿನ ವಕೀಲರು ಸರ್ಕಾರದ ಈ ಸುಳ್ಳು ಕೇಸ್‌ ಅನ್ನು ತಿಳಿಸಿ ಹೇಳುವ ಮೂಲಕ ಸರ್ಕಾರದ ಈ ದುರುದ್ದೇಶವನ್ನು ಬಯಲು ಮಾಡುವ ಕೆಲಸ ಮಾಡಬೇಕು ಎಂದು ವಕೀಲ ಬಂದುಗಳಲ್ಲಿ ಮನವಿ ಮಾಡುತ್ತೇನೆ ಎಂದು ವಿನಂತಿಸಿದರು.

ಇದನ್ನೂ ಓದಿ : President Salary : ಭಾರತದ ರಾಷ್ಟ್ರಪತಿಗಳ ಸಂಬಳ ಎಷ್ಟು? ಅವರಿಗೆ ಸೌಲಭ್ಯಗಳು ಏನು? ಇಲ್ಲಿದೆ ಮಾಹಿತಿ

ಕಿರುಕುಳ ನೀಡುವ ಉದ್ದೇಶದಿಂದ ವಿಚಾರಣೆ ಮಾಡುತ್ತಿರುವ ಕಾರಣಕ್ಕೆ ನಾವು ಪ್ರತಿಭಟಿಸುತ್ತಿದ್ದೇವೆ. ನಾವು ಈ ದೇಶದ ಕಾನೂನಿಗೆ ವಿರುದ್ಧವಾಗಿಲ್ಲ. ಕಾಂಗ್ರೆಸ್‌ ಪಕ್ಷ ಮಾತ್ರ ದೇಶದ ಸಂವಿಧಾನದ ಬಗ್ಗೆ ಗೌರವ ಇಟ್ಟಿರುವುದು. ಬಿಜೆಪಿ ಸರ್ವಾಧಿಕಾರ ಮತ್ತು ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟವರು. ಇದಕ್ಕಾಗಿಯೇ ಆರ್.ಎಸ್.ಎಸ್‌ ನಾಯಕರು ಹಿಟ್ಲರ್‌ ಅನ್ನು ಹಾಡಿ ಹೊಗಳಿದ್ದನ್ನು ಚರಿತ್ರೆಯಲ್ಲಿ ನಾವು ಕಾಣಬಹುದು. ಇವರು ಒಬ್ಬ ನಾಯಕ, ಒಂದು ಸಿದ್ಧಾಂತ ಮತ್ತು ಒಂದು ಚಿಹ್ನೆಯಲ್ಲಿ ನಂಬಿಕೆಯಿಟ್ಟವರು. ಅಸಮಾನತೆ ಮೂಲಕ ಶೋಷಣೆ ಮಾಡುವ ಚಿಂತನೆ ಬಿಜೆಪಿಯದು. ಪ್ರಜಾಪ್ರಭುತ್ವ ಮತ್ತು ಸಮಾನತೆ ಇರುವ ಕಡೆ ಬಡವರು, ದಲಿತರು, ಅಲ್ಪಸಂಖ್ಯಾತರನ್ನು ಶೋಷಣೆ ಮಾಡಲು ಸಾಧ್ಯವಿಲ್ಲ, ಇದಕ್ಕಾಗಿಯೇ ಬಿಜೆಪಿಯವರು ಸಂವಿಧಾನವನ್ನು ವಿರೋಧಿಸುವುದು ಎಂದು ವಾಗ್ದಾಳಿ ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News