ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಡಿಕೆಶಿ ಪುತ್ರಿ ಐಶ್ವರ್ಯಗೆ ಅವರ ಅಜ್ಜಿ ಮತ್ತು ಇತರೆ ಪೋಷಕರಿಂದ ಹಣ ಬಂದಿದೆ. ಐಶ್ವರ್ಯ ಆದಾಯ ತೆರಿಗೆ ಇಲಾಖೆಗೆ ಈ ಮಾಹಿತಿ ನೀಡಿದ್ದಾರೆ. ಅಜ್ಜಿ ನೀಡಿದ ಆಸ್ತಿಯ ಮೌಲ್ಯ ಈಗ ಹೆಚ್ಚಾಗಿದೆ.‌ ತಂದೆ ಅಥವಾ ಅಜ್ಜಿ ದುಡ್ಡುಕೊಟ್ಟರೆ ಅದು ಮನಿ ಲಾಂಡ್ರಿಂಗ್ ಆಗುತ್ತಾ? ಪೋಷಕರು ನೀಡುವ ಹಣವನ್ನು ಮನಿ ಲಾಂಡ್ರಿಂಗ್ ಎನ್ನುವುದು ದುರಾದೃಷಕರ- ಡಿ.ಕೆ. ಶಿವಕುಮಾರ್​ ಪರ ವಾದ ಮಾಡಿದ ಅಭಿಷೇಕ್ ಮನು ಸಿಂಘ್ವಿ

Last Updated : Sep 18, 2019, 06:05 PM IST
ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ title=
File Image

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದು ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಜಾರಿ ನಿರ್ದೇಶನಾಲಯದ ಪರ ವಾದ ಮಾಡಬೇಕಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ನಿಗದಿತ (ಮಧ್ಯಾಹ್ನ 3.30) ಸಮಯಕ್ಕೆ ಆಗಮಿಸಿದ ಕಾರಣ ಸ್ವಲ್ಪ ತಡವಾಗಿಯೇ ವಿಚಾರಣೆ ಆರಂಭಿಸಲಾಯಿತು. ಕೆ.ಎಂ. ನಟರಾಜ್ ಸುಪ್ರೀಂ ಕೋರ್ಟಿನಲ್ಲಿ ಮತ್ತೊಂದು ಪ್ರಕರಣದ ಬ್ಯುಸಿಯಲ್ಲಿದ್ದಾರೆ ಎಂದು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ಡಿ.ಕೆ. ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ವಾದ ಮಂಡಿಸುವಂತೆ ಹೇಳಿದರು. 

ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆಯ ನಡುವೆಯೇ ಮತ್ತೊಮ್ಮೆ ಕಿರಿಯ ವಕೀಲರೊಬ್ಬರು 'ಕೆ.ಎಂ. ನಟರಾಜ್ ಈಗಲೂ ಬ್ಯುಸಿಯಾಗಿದ್ದಾರೆ. ಅವರು ಬರಲು ಸಾಧ್ಯವಾಗುತ್ತಿಲ್ಲ' ಎಂದು ನಿವೇದಿಸಿಕೊಂಡರು. ಆಗ ನ್ಯಾಯಾಧೀಶರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡುವ ಮಾತನಾಡಿದರು. ಇದಕ್ಕೆ ಆಕ್ಷೇಪಿಸಿದ ಡಿ.ಕೆ. ಶಿವಕುಮಾರ್ ಪರ ವಾದ ಮಾಡಲು ಬಂದಿದ್ದ ಇನ್ನೋರ್ವ ವಕೀಲ ಮುಕುಲ್ ರೋಹ್ಟಗಿ, 'ಸುಪ್ರೀಂ ಕೋರ್ಟ್ 4 ಗಂಟೆಗೆ ಮುಗಿಯುತ್ತದೆ. ಮುಗಿಸಿಕೊಂಡು ಬರಲಿ. ಅಲ್ಲಿಯವರೆಗೆ ನಾವು ಕಾಯುತ್ತೇವೆ. ಇವತ್ತೇ ಅರ್ಜಿ ಇತ್ಯರ್ಥ ಮಾಡಿ' ಎಂದು ಹೇಳಿದರು. ಈ ನಡುವೆ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಗುರುವಾರಕ್ಕೆ ವಿಚಾರಣೆ ಮುಂದೂಡಿದರು.

ಮಂಗಳವಾರದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಡಾ. ರಾಮಮನೋಹರ ಲೋಹಿಯಾ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ತಿಹಾರ್ ಜೈಲು ಉಸ್ತುವಾರಿಯನ್ನೂ ಹೊಂದಿರುವ ದೆಹಲಿ ಪೊಲೀಸರ ಥರ್ಡ್ ಬಟಾಲಿಯನ್ ಅಧಿಕಾರಿಗಳಿಗೆ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಡಿ.ಕೆ. ಶಿವಕುಮಾರ್ ಅವರ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಸೂಚನೆ ನೀಡಿದರು.

ಇದಕ್ಕೂ ಮುನ್ನ ಡಿ.ಕೆ. ಶಿವಕುಮಾರ್​ ಪರ ವಾದ ಮಾಡಿದ ಅಭಿಷೇಕ್ ಮನು ಸಿಂಘ್ವಿ, ಡಿಕೆಶಿ ಪುತ್ರಿ ಐಶ್ವರ್ಯಗೆ ಅವರ ಅಜ್ಜಿ ಮತ್ತು ಇತರೆ ಪೋಷಕರಿಂದ ಹಣ ಬಂದಿದೆ. ಐಶ್ವರ್ಯ ಆದಾಯ ತೆರಿಗೆ ಇಲಾಖೆಗೆ ಈ ಮಾಹಿತಿ ನೀಡಿದ್ದಾರೆ. ಅಜ್ಜಿ ನೀಡಿದ ಆಸ್ತಿಯ ಮೌಲ್ಯ ಈಗ ಹೆಚ್ಚಾಗಿದೆ.‌ ತಂದೆ ಅಥವಾ ಅಜ್ಜಿ ದುಡ್ಡುಕೊಟ್ಟರೆ ಅದು ಮನಿ ಲಾಂಡ್ರಿಂಗ್ ಆಗುತ್ತಾ? ಪೋಷಕರು ನೀಡುವ ಹಣವನ್ನು ಮನಿ ಲಾಂಡ್ರಿಂಗ್ ಎನ್ನುವುದು ದುರಾದೃಷಕರ. ಐಶ್ವರ್ಯ ಬೆಂಗಳೂರಿನ ವಿಜಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ. ಬ್ಯಾಂಕ್ ಸಾಲ ಪಡೆಯುವುದು ಮನಿ ಲಾಂಡ್ರಿಂಗ್ ಆಗುತ್ತಾ? ಡಿ.ಕೆ. ಶಿವಕುಮಾರ್ ತಮ್ಮ ಎಲ್ಲಾ ವ್ಯವಹಾರಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಐಶ್ವರ್ಯ ವ್ಯವಹಾರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಆಸ್ತಿ ಘೋಷಿಸದಿದ್ದರೆ ಚುನಾವಣಾ ಆಯೋಗದ ನಿಯಮ ಉಲ್ಲಂಘನೆಯಾಗುತ್ತದೆ. ಆಸ್ತಿ ಘೋಷಿಸಿಕೊಂಡರೆ ಮನಿ ಲಾಂಡ್ರಿಂಗ್ ಕೇಸ್ ಹಾಕಲಾಗುತ್ತದೆ ಎಂದು ಹೇಳಿದರು.

ಜಾರಿ‌ ನಿರ್ದೇಶನಾಲಯ ಇರುವುದು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಗಳನ್ನು ತನಿಖೆ ಮಾಡುವುದಕ್ಕಾಗಿಯೇ? ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿಚಾರಣೆ ಮಾಡುವ ಅಗತ್ಯವಾದರೂ ಏನಿದೆ? ಶರ್ಮಾ ಟ್ರಾನ್ಸ್ ಪೋರ್ಟ್ 50 ವರ್ಷಗಳ ಹಳೆಯ ಕಂಪನಿ. ದಕ್ಷಿಣ ಭಾರತದ ದೊಡ್ಡ ಟ್ರಾನ್ಸ್ ಪೋರ್ಟ್ ಕಂಪನಿಗಳಲ್ಲಿ ಒಂದು. ಆ ಕಂಪನಿಯಲ್ಲಿ ಪ್ರತಿದಿನವೂ ಲಕ್ಷಾಂತರ ರೂಪಾಯಿ ಲಿಕ್ವಿಡ್ ಹಣ ಬರುತ್ತದೆ. ಅಂಥವರ ಮನೆಯಲ್ಲಿ 8 ಕೋಟಿ ಹಣ ಸಿಕ್ಕಿದೆ. ಅದೇ ರೀತಿ ಸಚಿನ್ ನಾರಾಯಣ್ ಲಿಕ್ಕರ್ ಉದ್ಯಮ ನಡೆಸುತ್ತಿರುವವರು. ಅಬಕಾರಿ ಉದ್ಯಮದಲ್ಲೂ ಪ್ರತಿದಿನ ಲಕ್ಷಾಂತರ ರೂಪಾಯಿ ಲಿಕ್ವಿಡ್ ಹಣ ಬರುತ್ತದೆ. ಅವರ ಮನೆಯಲ್ಲಿ ಹಣ ಸಿಕ್ಕಿರಬಹುದು. ಈ ವಿಷಯಗಳ ತನಿಖೆ ವಿಷಯದಲ್ಲಿ ಅನಾವಶ್ಯಕವಾಗಿ ಡಿ.ಕೆ. ಶಿವಕುಮಾರ್ ಅವರನ್ನು ತಳಕು ಹಾಕಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.‌ ಅವರ ಬಳಿ ಅಪಾರ ಪ್ರಮಾಣದ ಭೂಮಿ‌ ಇದೆ. ಅವರ ಕೃಷಿ ಭೂಮಿ ಬೆಲೆ ಈಗ ಗಗನಕ್ಕೇರಿದೆ. ದೆಹಲಿ ಸಮೀಪದ ಗುರುಗ್ರಾಮ್, ಛತ್ತರಪುರದಲ್ಲಿ ಭೂಮಿ ಬೆಲೆ ಏರಿಕೆಯಾಗಿರುವಂತೆ ಬೆಂಗಳೂರಿಗೆ ಹತ್ತಿರ ಇರುವ ಡಿ.ಕೆ. ಶಿವಕುಮಾರ್ ಅವರ ಆಸ್ತಿಗಳ ಮೌಲ್ಯವೂ ಹೆಚ್ಚಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒಂದೊಂದು ಬಾರಿ ಒಂದೊಂದು ರೀತಿ ಹೇಳುತ್ತಿದ್ದಾರೆ ಎಂದು ವಾದಿಸಿದರು.

ಸ್ವಲ್ಪ ಉದಾಸೀನ ಮಾಡಿದ್ದರೂ ಡಿಕೆಶಿಗೆ ಹಾರ್ಟ್ ಅಟ್ಯಾಕ್ ಆಗುತ್ತಿತ್ತು: ಸಿಂಘ್ವಿ

ಡಿ.ಕೆ. ಶಿವಕುಮಾರ್ ಅವರಿಗೆ ರಕ್ತದ ಒತ್ತಡ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಡಾ. ರಾಮಮನೋಹರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಗಂಟೆಗೊಮ್ಮೆ ವೈದ್ಯರು ಡಿ.ಕೆ. ಶಿವಕುಮಾರ್ ಅವರ ರಕ್ತದ ಒತ್ತಡ ಪರೀಕ್ಷಿಸುತ್ತಿದ್ದಾರೆ. ಇದಲ್ಲದೆ ಮಧುಮೇಹ ಮತ್ತು ಎದೆ ನೋವಿನ ಸಮಸ್ಯೆಗೂ ಚಿಕಿತ್ಸೆ ನೀಡಲಾಗುತ್ತಿದೆ.

Trending News