ಮೋದಿಯವರು ‘ಪ್ರಧಾನಮಂತ್ರಿ ಸೌದೆ ಯೋಜನೆ’ ಘೋಷಿಸಿದರೂ ಆಶ್ಚರ್ಯವಿಲ್ಲ!: ಕಾಂಗ್ರೆಸ್ ವ್ಯಂಗ್ಯ

ಮಧ್ಯಮ ಮತ್ತು ಬಡವರ್ಗವು ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ. ಅಡುಗೆ ಅನಿಲ ದರ ಹೆಚ್ಚಳದಿಂದ ಗ್ರಾಮೀಣ ಭಾಗದ ಮಹಿಳೆಯರು ಮತ್ತೆ ಸೌದೆ ಒಲೆ ಕಡೆಗೆ ಮುಖ ಮಾಡುತ್ತಿದ್ದಾರೆ.

Written by - Zee Kannada News Desk | Last Updated : May 9, 2022, 07:42 PM IST
  • ಅಡುಗೆ ಸಿಲಿಂಡರ್ ಹೆಸರಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದ ಬಿಜೆಪಿ ಈಗ ಮೌನವಹಿಸಿದ್ದೇಕೆ?
  • ಹೀಗೆಯೇ ಮುಂದುವರಿದಲ್ಲಿ ಮೋದಿಯವರು ‘ಪ್ರಧಾನಮಂತ್ರಿ ಸೌದೆ ಯೋಜನೆ’ ಘೋಷಿಸಿದರೂ ಆಶ್ಚರ್ಯವಿಲ್ಲ!
  • ಬಿಜೆಪಿ ಸರ್ಕಾರದ ಅಚ್ಛೆ ದಿನಗಳ ಬಣ್ಣ ಬಯಲಾಗಿದೆ ಎಂದು ಬಿಜೆಪಿ ಟೀಕಿಸಿದ ಕಾಂಗ್ರೆಸ್
ಮೋದಿಯವರು ‘ಪ್ರಧಾನಮಂತ್ರಿ ಸೌದೆ ಯೋಜನೆ’ ಘೋಷಿಸಿದರೂ ಆಶ್ಚರ್ಯವಿಲ್ಲ!: ಕಾಂಗ್ರೆಸ್ ವ್ಯಂಗ್ಯ  title=
'ಸರ್ಕಾರದ ಅಚ್ಛೆ ದಿನಗಳ ಬಣ್ಣ ಬಯಲು'

ಬೆಂಗಳೂರು: ಹೊಗೆರಹಿತ ಅಡುಗೆಮನೆ ಗುರಿ ಇಟ್ಟುಕೊಂಡು ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಉಜ್ವಲಾ ಯೋಜನೆ’ ಜಾರಿಗೆ ತಂದಿತ್ತು. ಇದು ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆ ಯೋಜನೆಯಾಗಿತ್ತು. ಗ್ರಾಮೀಣ ಪ್ರದೇಶದಲ್ಲಿಯೂ ಹೊಗೆರಹಿತ ಅಡುಗೆ ಮನೆ ಮೂಲಕ ಬಡ ಮಹಿಳೆಯರಿಗೆ ಅನುಕೂಲ ಕಲ್ಪಿಸುವುದು ಈ ಯೋಜನೆ ಉದ್ದೇಶವಾಗಿತ್ತು.

ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅಡುಗೆ ಅನಿಲ ದರ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದು ಪೆಟ್ರೋಲ್-ಡೀಸೆಲ್, ತರಕಾರಿ ಸೇರಿದಂತೆ ಎಲ್ಲಾ ರೀತಿಯ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಮಧ್ಯೆ ಪದೇ ಪದೇ ಅಡುಗೆ ಅನಿಲದ ದರ ಹೆಚ್ಚಳವಾಗುತ್ತಲೇ ಇದೆ. ಇದರಿಂದ ಬಡವರು ಜೀವನ ನಡೆಸದಂತಹ ದುಸ್ಥಿತಿಗೆ ತಲುಪಿದ್ದಾರೆ. ಉಜ್ವಲಾ ಯೋಜನೆ ಆರಂಭದಲ್ಲಿ 500 ರೂ. ಆಜುಬಾಜು ಇದ್ದ ಅಡುಗೆ ಸಿಲಿಂಡರ್‌ ದರ ಇದೀಗ 1,002 ರೂ. ದಾಟಿದೆ.

ಇದನ್ನೂ ಓದಿ: CM Ibrahim : ಎದುರು ಇರುವುದು ಕೌರವರ ಸೈನ್ಯ, ನಮ್ಮದು ಪಾಂಡವರ ಸೈನ್ಯ..!

ಮಧ್ಯಮ ಮತ್ತು ಬಡವರ್ಗವು ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ. ಅಡುಗೆ ಅನಿಲ ದರ ಹೆಚ್ಚಳದಿಂದ ಗ್ರಾಮೀಣ ಭಾಗದ ಮಹಿಳೆಯರು ಮತ್ತೆ ಸೌದೆ ಒಲೆ ಕಡೆಗೆ ಮುಖ ಮಾಡುತ್ತಿದ್ದಾರೆ. ಅಂದು ದುಡಿದು ಅಂದೇ ತಿನ್ನುವ ಬಡವರ ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ ಎಂಬಂತಾಗಿದೆ. ಇಂದು ಪ್ರತಿಯೊಬ್ಬರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದುಡಿಯಲು ಕೆಲಸವಿಲ್ಲದ, ನಿಶ್ಚಿತ ಆದಾಯವಿಲ್ಲದ ಮಂದಿಯಂತೂ ಜೀವನ ನಡೆಸಲು ಪರದಾಡುವಂತಾಗಿದೆ. ಹೀಗಾಗಿ ಹೊಗೆರಹಿತ ಅಡುಗೆ ಮನೆ ಗುರಿ ಇಟ್ಟುಕೊಂಡು ಜಾರಿಗೊಳಿಸಿದ್ದ ಉಜ್ವಲಾ ಯೋಜನೆ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಸರ್ಕಾರದ ಅಚ್ಛೆ ದಿನಗಳ ಬಣ್ಣ ಬಯಲು- ಕಾಂಗ್ರೆಸ್

ಇತ್ತೀಚೆಗಷ್ಟೇ ದಿನಬಳಕೆ ಅಡುಗೆ ಅನಿಲ ದರ 50 ರೂ.ನಷ್ಟು ಏರಿಕೆಯಾಗಿದೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರದ ಅಚ್ಛೆ ದಿನಗಳ ಬಣ್ಣ ಬಯಲಾಗಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಬಾದಾಮಿ ಜೆಡಿಎಸ್ ಅಭ್ಯರ್ಥಿ ಘೋಷಣೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಟಕ್ಕರ್

‘ಅಡುಗೆ ಸಿಲಿಂಡರ್ ಹೆಸರಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದ ಬಿಜೆಪಿ ಈಗ ಮೌನವಹಿಸಿದ್ದೇಕೆ? ಹೀಗೆಯೇ ಮುಂದುವರಿದಲ್ಲಿ ಮೋದಿಯವರು ‘ಪ್ರಧಾನಮಂತ್ರಿ ಸೌದೆ ಯೋಜನೆ’ ಘೋಷಿಸಿದರೂ ಆಶ್ಚರ್ಯವಿಲ್ಲ! ಸೌದೆಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವಿರಾ, ಪೆಟ್ರೋಲ್ ಬಂಕ್‍ನಲ್ಲಿ ಹಂಚುವಿರಾ?!’ ಎಂದು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ಬದ್ಧವಾಗಿದೆ

‘ಅನ್ನಭಾಗ್ಯದಂತಹ ಐತಿಹಾಸಿಕ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್. ಬಡವರ ಹಸಿವು ನೀಗಿಸುವ ಕಾರ್ಯಕ್ರಮಗಳನ್ನು ನೀಡುವ ಘನತೆ ಹಾಗು ಕ್ಷಮತೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪುನಃ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಘೋಷಿಸಿದ್ದು, ಕಾಂಗ್ರೆಸ್ ಇದಕ್ಕೆ ಬದ್ಧವಾಗಿದೆ’ ಎಂದು ಮತ್ತೊಂದು ಟ್ವೀಟ್‍ನಲ್ಲಿ ‘ಕೈ’ಪಕ್ಷ ತಿಳಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News