ಬೆಂಗಳೂರು: ಕಾಂಗ್ರೆಸ್ ಪಕ್ಷ, ಇತ್ತೀಚಿನ ಕೆಲವು ಚುನಾವಣಾ ಸೋಲುಗಳ ತಾತ್ಕಲಿಕವಾದ ಹಿನ್ನಡೆಯನ್ನು ಎದುರಿಸಿ ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ (Siddaramaiah) ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರ ವರೆಗೆ ಪ್ರತಿಯೊಬ್ಬರೂ ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ.ಇದೇ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ರಾಜ್ಯದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಪಕ್ಷಕ್ಕೆ ಗೆಲುವಿನ ಉಡುಗೊರೆ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊರಗಿನ ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಕೆಲವು ಒಳಗಿನ ಹಿತಶತ್ರುಗಳ ಕುಟಿಲ ಕಾರಸ್ತಾನಗಳಿಂದ ವಿಚಲಿತರಾಗದೆ ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಭರವಸೆ ಇಟ್ಟು ಪಕ್ಷಕ್ಕೆ ಶಕ್ತಿತುಂಬಲು ಪ್ರತಿಯೊಬ್ಬ ಕಾಂಗ್ರೆಸಿಗನು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮ ನಿರ್ದೇಶನ?
ಈಗ ಶ್ರೀಮತಿ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು,ಅವರದ್ದೇ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಬಾರಿ ಲೋಕಸಭಾ ಚುನಾವಣೆಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದನ್ನು ಮರೆತಿರುವುದು ಆತ್ಮದ್ರೋಹವಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದರು.
ಶ್ರೀಮತಿ ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿಯೇ ಕೇಂದ್ರದಲ್ಲಿ ಮಾತ್ರವಲ್ಲ, ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು ಎನ್ನುವುದನ್ನು ಇಂದು ಅವರ ನಾಯಕತ್ವವನ್ನು ಪ್ರಶ್ನಿಸುವವರು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ದೇಶಕ್ಕೆ ಬಲಿದಾನಗೈದ ಪತಿಯ ಅಗಲಿಕೆಯ ಶೋಕ ಮತ್ತು ಎರಡು ಎಳೆಯ ಮಕ್ಕಳ ಭವಿಷ್ಯದ ಕಾಳಜಿಯಿಂದ ರಾಜಕೀಯದಿಂದ ದೂರ ಇದ್ದ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷವನ್ನು ಉಳಿಸಲಿಕ್ಕಾಗಿ ಒತ್ತಾಯದಿಂದ ಸಕ್ರಿಯ ರಾಜಕೀಯಕ್ಕೆ ಎಳೆದು ತಂದಿದ್ದ ಕೆಲವು ನಾಯಕರೇ ಈಗ ಸೋನಿಯಾ ಸೈದ್ಧಾಂತಿಕ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಇದನ್ನೂ ಓದಿ: Tax Savings Tips : 10 ಅಲ್ಲ 12 ಲಕ್ಷದವರೆಗಿನ ಸಂಬಳಕ್ಕೂ ಕಟ್ಟಬೇಕಾಗಿಲ್ಲ ತೆರಿಗೆ : ಇಲ್ಲಿದೆ ಲೆಕ್ಕಾಚಾರ
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದ ಶ್ರೀಮತಿ ಸೋನಿಯಾ ಗಾಂಧಿ (Sonia Gandhi) ಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದನ್ನು ಇಡೀ ವಿಶ್ವ ಕಂಡಿದೆ.ಇಂದಿನ ಟೀಕಾಕಾರರು ಈ ತ್ಯಾಗವನ್ನು ಕಂಡಿಲ್ಲವೇ? ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು.ಆದರೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿಯ ಶಾಸನಾತ್ಮಕ ಹಕ್ಕನ್ನು ನೀಡಿದ್ದ ಕಾರ್ಯಕ್ರಮಗಳ ರೂವಾರಿಯಾದ ಶ್ರೀಮತಿ ಸೋನಿಯಾ ಗಾಂಧಿಯವರು ದೇಶದ ಜನತೆಯ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ.ಆ ಚಿತ್ರವನ್ನು ಅಳಿಸಲಾಗದು ಎಂದು ಅವರು ಹೇಳಿದರು.
ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಒಂಟಿಯಲ್ಲ, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ ದೇಶದ ಕೋಟ್ಯಂತರ ಜನ ಅವರ ಬೆನ್ನ ಹಿಂದಿದ್ದಾರೆ.ಇಂದಿನ ಸಂಕಷ್ಟ ಸ್ಥಿತಿಯಿಂದ ದೇಶವನ್ನು ಕಾಂಗ್ರೆಸ್ ಪಕ್ಷ ಮಾತ್ರ ಪಾರುಮಾಡಲು ಸಾಧ್ಯ ಎನ್ನುವುದು ಪ್ರತಿಯೊಬ್ಬರೂ ಅರಿತಿದ್ದಾರೆ.
ಇದನ್ನೂ ಓದಿ: ಕಾಶ್ಮೀರ ಫೈಲ್ಸ್ ಮಾಡುವುದಾದರೆ ಲಖಿಂಪುರ್ ಫೈಲ್ಸ್ ಕೂಡ ನಿರ್ಮಾಣವಾಗಲಿ- ಅಖಿಲೇಶ್ ಯಾದವ್
ಕೋಮುವಾದಿ ರಾಜಕಾರಣ, ಮಾಧ್ಯಮಗಳ ಮೂಲಕ ನಡೆಸಲಾಗುತ್ತಿರುವ ಸುಳ್ಳುಗಳ ಅಪಪ್ರಚಾರ, ದುಡ್ಡಿನ ಬಲದ ಚುನಾವಣಾ ತಂತ್ರ-ಕುತಂತ್ರಗಳ ಎದುರು ಸೈದ್ಧಾಂತಿಕ ರಾಜಕಾರಣಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು.ಇದು ತಾತ್ಕಾಲಿಕ ಹಿನ್ನಡೆ, ಸತ್ಯವೇ ಗೆಲ್ಲುವುದು."ಸತ್ಯಮೇವ ಜಯತೆ"ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.