'ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ'

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶಿಸಿರುವುದು ಖಂಡನೀಯ. ಇದು ಈ ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷದ ನಾಯಕರ ರಕ್ಷಣೆಯ ಪ್ರಯತ್ನವಾಗಿದ್ದು, ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

Written by - Zee Kannada News Desk | Last Updated : Apr 30, 2022, 05:44 PM IST
  • ಇತರೆ ಇಲಾಖೆಗಳಲ್ಲಿ ನೇಮಕಾತಿ ಅಕ್ರಮದ ಬಗ್ಗೆ ಸಚಿವರು ಯಾಕೆ ಮಾತನಾಡುತ್ತಿಲ್ಲ.
  • ನಮ್ಮ ವಿರೋಧ ಪಕ್ಷದ ನಾಯಕರು ಕೆಲವು ಸಚಿವರ ರಾಜೀನಾಮೆ ಕೇಳಿದ್ದಾರೆ. ಆದರೆ ಕೊಡದಷ್ಟು ಅವರು ಭಂಡರಾಗಿದ್ದಾರೆ ಎಂದರು.
'ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ' title=
file photo

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶಿಸಿರುವುದು ಖಂಡನೀಯ. ಇದು ಈ ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷದ ನಾಯಕರ ರಕ್ಷಣೆಯ ಪ್ರಯತ್ನವಾಗಿದ್ದು, ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಕರ್ನಾಟಕದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನೇಮಕಾತಿ ಸಮಿತಿ ರದ್ದು ಮಾಡಿ, ಪರೀಕ್ಷೆಯೇ ಮಾನದಂಡ ಎಂದು ಪ್ರವೇಶ ಪರೀಕ್ಷೆಗಳನ್ನು ಆರಂಭಿಸಲಾಯಿತು. ಇದು ಆರಂಭವಾದ ನಂತರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಗೊಂದಲ ಉದ್ಭವಿಸಿದ್ದನ್ನು ನೋಡಿದ್ದೇವೆ. ಇದರ ವಿಚಾರಣೆ ನಡೆದಿದ್ದು, ಕೋರ್ಟ್ ಹಾಗೂ ಸರ್ಕಾರ ಭಿನ್ನ ತೀರ್ಮಾನ ಕೈಗೊಂಡಿರುವುದನ್ನು ನೋಡಿದ್ದೇವೆ ಎಂದರು.

ಇದನ್ನೂ ಓದಿ: PSI ನೇಮಕಾತಿ ಅಕ್ರಮ: ತಡರಾತ್ರಿವರಗೆ ನಿದ್ರೆ ಬರದೆ ಪರದಾಡಿದ ದಿವ್ಯಾ ಹಾಗರಗಿ

ಸರ್ಕಾರದ ಎಲ್ಲ ನೇಮಕಾತಿ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ, ಅಕ್ರಮ, ಹಗರಣಗಳ ಸರಮಾಲೆ ಇದೆ. ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮವಾಗಿದೆ. ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ.

ಪಿಎಸ್ ಐ ನೇಮಕಾತಿ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ಇಪ್ಪತ್ತು ದಿನಗಳ ನಂತರ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯವರು ಈ ಅಕ್ರಮದ ಆರೋಪವನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಬಿಜೆಪಿಯವರು ತಾವು ಹಣ್ಣು ತಿಂದು ಬೇರೆಯವರ ಮೂತಿ ಮೇಲೆ ಸಿಪ್ಪೆ ಇಡುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ಸಾಗುವುದಿಲ್ಲ.

ಗೃಹಮಂತ್ರಿಗಳು ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿವೇಶನದಲ್ಲೇ ಹೇಳಿದ್ದರು. ನಮ್ಮ ಶಾಸಕರು, ನಾಯಕರು ಈ ಅಕ್ರಮದ ವಿಚಾರ ಬಹಿರಂಗ ಪಡಿಸಿದರೆ, ಅವರನ್ನು ಬೆದರಿಸಲು ನೊಟೀಸ್ ನೀಡುತ್ತೀರಿ. ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ಹೆದರುವುದಿಲ್ಲ.

ಇದನ್ನೂ ಓದಿ: 'ವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಿಎಂ ತಕ್ಷಣ ಸಂಪುಟದಿಂದ ಕಿತ್ತುಹಾಕಲಿ'

ಈ ಪ್ರಕರಣದ ಪ್ರಮುಖ ಆರೋಪಿಯನ್ನು ನಿಮ್ಮ ಮುಂಖಂಡರೇ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದರು ಎಂದು ನಿಮಗೆ ಗೊತ್ತಿದೆ. ಅವರ ವಿಚಾರಣೆ ಮಾಡುವ ಮುನ್ನವೇ, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಬಹಿರಂಗವಾಗುವ ಮುನ್ನವೇ ಈ ಹಿಂದೆ ನಡೆದಿರುವ ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆಗೆ ಆದೇಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಅವರು ಪ್ರಶ್ನಿಸಿದರು.

ಈ ನಿರ್ಣಯ ಕೈಗೊಳ್ಳಬೇಕಾದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಖಚಿತವಾಗಿರಬೇಕು. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ಈ ಪಿಎಸ್ ಐ ನೇಮಕಾತಿಯಲ್ಲಿ ಯಾರು ಅಕ್ರಮ ಮಾಡಿದ್ದಾರೋ, ಅವರನ್ನು ಹೊರತುಪಡಿಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಸರ್ಕಾರ ಅವರ ಹೇಳಿಕೆ ನಿರ್ಲಕ್ಷಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದೊಂದು ಬಿಜೆಪಿ ಅಕ್ರಮವಾಗಿದ್ದು, ಬಿಜೆಪಿ ನಾಯಕರ ರಕ್ಷಣೆಗೆ ಪರೀಕ್ಷೆ ರದ್ದು ಪಡಿಸಲಾಗಿದೆ.

ಈ ಪ್ರಕರಣದಿಂದ ರಾಜ್ಯದ ಘನತೆ ಏನಾಗಿದೆ ಎಂದು ಸರ್ಕಾರ ಅರಿತಿದೆಯೇ? ಪೊಲೀಸ್ ಅಧಿಕಾರಿಯಾಗುವ ಅಭ್ಯರ್ಥಿಗಳಲ್ಲಿ ಈ ಭ್ರಷ್ಟಾಚಾರದ ಭಾವನೆ ಮೂಡಿದರೆ ಮುಂದೆ ಏನಾಗಬಹುದು ಎಂಬ ಪರಿಜ್ಞಾನ ಸರ್ಕಾರಕ್ಕೆ ಇದೆಯಾ? ಎಂದು ಪ್ರಶ್ನಿಸಿದರು.

ಇತರೆ ಇಲಾಖೆಗಳಲ್ಲಿ ನೇಮಕಾತಿ ಅಕ್ರಮದ ಬಗ್ಗೆ ಸಚಿವರು ಯಾಕೆ ಮಾತನಾಡುತ್ತಿಲ್ಲ. ನಮ್ಮ ವಿರೋಧ ಪಕ್ಷದ ನಾಯಕರು ಕೆಲವು ಸಚಿವರ ರಾಜೀನಾಮೆ ಕೇಳಿದ್ದಾರೆ. ಆದರೆ ಕೊಡದಷ್ಟು ಅವರು ಭಂಡರಾಗಿದ್ದಾರೆ ಎಂದರು.

ಈ ಅಕ್ರಮಕ್ಕೆ ಮುಖ್ಯಮಂತ್ರಿಗಳೂ ಜವಾಬ್ದಾರರಾಗಿದ್ದಾರೆ. ನಿಮ್ಮ ಸರ್ಕಾರ ಅಕ್ರಮಗಳ ಸರಮಾಲೆ ಧರಿಸಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ನಿಮ್ಮ ನಾಯಕರು, ಅಧಿಕಾರಿಗಳ ಹೆಸರನ್ನು ನಾವು ಬಹರಂಗ ಪಡಿಸುವ ಮುನ್ನ ನೀವೇ ಬಹಿರಂಗ ಮಾಡಬೇಕು. ಇಡೀ ನಿಮ್ಮ ಪಕ್ಷ ಈ ನೇಮಕಾತಿ ಅಕ್ರಮದ ಕೊಳಕಿನಲ್ಲಿ ಮುಳುಗಿ ಒದ್ದಾಡುತ್ತಿದೆ. 

ಈ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಲು ನೀವೇ ದಾರಿ ಮಾಡಿಕೊಡುತ್ತಿದ್ದೀರಿ. ನ್ಯಾಯಾಲಯದ ವಿಚಾರಣೆ ಹೆಸರಲ್ಲಿ ಇದು ಮುಂದಕ್ಕೆ ಹೋಗಬೇಕು ಎಂಬುದು ನಿಮ್ಮ ಕುತಂತ್ರ.

ಇದನ್ನೂ ಓದಿ: Basanagouda Patil Yatnal : ಕೆಪಿಎಸ್‌ಸಿ ನೇಮಕದಲ್ಲು ಭ್ರಷ್ಟಾಚಾರ : ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್‌

ಕಾಂಗ್ರೆಸ್ ಸರ್ಕಾರ ಸಿಇಟಿ ಆರಂಭಿಸಿ, ಒಂದು ಪ್ರಾಧಿಕಾರ ರಚಿಸಿ ಕಾಲೇಜು ಸೀಟು ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ತಂದಿತು. ಈಗಿರುವ ತಂತ್ರಜ್ಞಾನ ಬಳಸಿಕೊಂಡು ಪಾರದರ್ಶಕತೆ ಹೆಚ್ಚಿಸಬೇಕು. ಆದರೆ ನೀವು ನಿಮ್ಮ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡಿ, ಒಂದೊಂದು ಹುದ್ದೆಗೂ 80 ಲಕ್ಷ ವಸೂಲಿ ಮಾಡಿಕೊಂಡಿದ್ದೀರಿ. ವರದಿಯಲ್ಲಿ ನಿಮ್ಮವರ ಹೆಸರು ಬರಲಿದೆ ಎಂಬ ಕಾರಣಕ್ಕೆ ಮರುಪರೀಕ್ಷೆಗೆ ಆದೇಶಿಸಿದ್ದೀರಿ. ನಿಮ್ಮ ಈ ತಪ್ಪಿಗೆ ಯಾರು ಶಿಕ್ಷೆ ನೀಡಬೇಕು? ನಿಮಗೆ ರಾಜ್ಯದ ಜನತೆ, ಯುವಕರು, ರಾಜ್ಯದ ತಂದೆ ತಾಯಂದಿರು, ಮತದಾರ ಪ್ರಭುಗಳು ಶಿಕ್ಷೆ ನೀಡಲಿದ್ದಾರೆ. ನಿಮ್ಮನ್ನು ಜನರೇ ಕಿತ್ತೊಗೆಯುತ್ತಾರೆ. ಆ ಕಾಲ ಸನಿಹವಾಗುತ್ತಿದೆ.

ಇನ್ನು ಈ ನೇಮಕಾತಿ ಪ್ರಕ್ರಿಯೆ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿದ್ದ ಕನ್ನಡಿಗ ಹಾಗೂ ದಲಿತ ಸಮುದಾಯದ ಅಧಿಕಾರಿಗೆ ಯಾವುದೇ ಹುದ್ದೆ ನೀಡಿಲ್ಲ. ನಿಮಗೆ ಯಾವುದೇ ದಲಿತ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ, ಹೀಗಾಗಿ ಅವರನ್ನು ಆ ಸ್ಥಾನದಿಂದ ತೆಗೆದು, ಆರೋಪ ಹೊತ್ತಿರುವ ಅಧಿಕಾರಿಯನ್ನು ಕೂರಿಸಿದ್ದೀರಿ.

ನೇಮಕಾತಿ ವಿಭಾಗಕ್ಕೆ ಬೇರೆ ಅಧಿಕಾರಿಯನ್ನು ನಿಯೋಜಿಸಿದ್ದೀರಿ. ಅದರಲ್ಲಿ ನಮ್ಮ ಆಕ್ಷೇಪವಿಲ್ಲ.

ಈ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರು ಕೇವಲ 3 ಮಂದಿ ಎಂದು ಸರ್ಕಾರ ಹೇಳಿತು. ನ್ಯಾಯಾಲಯ ಮಧ್ಯಪ್ರವೇಶಿಸಿ ತನಿಖೆ ಮಾಡಿದಾಗ ಸತ್ತವರು 37 ಮಂದಿ ಎಂಬ ಸತ್ಯ ಹೊರಗೆ ಬಂದಿತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News