ಧಾರವಾಡದ ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಅವಶೇಷಗಳಡಿ ಇನ್ನೂ ಸುಮಾರು 12 ರಿಂದ 14 ಜನ ಇರುವ ಸಾಧ್ಯತೆ ಇದ್ದು, ನಾಲ್ಕನೇ ದಿನವಾದ ಇಂದೂ ಕೂಡ ರಕ್ಷಣಾ ಕಾರ್ಯ ಮುಂದುವರೆದಿದೆ.

Last Updated : Mar 22, 2019, 08:45 AM IST

Trending Photos

ಧಾರವಾಡದ ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 15ಕ್ಕೆ ಏರಿಕೆ title=
Pic Courtesy: ANI

ಧಾರವಾಡ: ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವೊಂದು ಕುಸಿದ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದುವರೆಗೆ 54 ಜನರನ್ನು ರಕ್ಷಿಸಲಾಗಿದ್ದು, ಅವಶೇಷಗಳಡಿ ಇನ್ನೂ ಸುಮಾರು 10 ರಿಂದ 12 ಜನ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಲ್ಕನೇ ದಿನವಾದ ಇಂದೂ ಕೂಡ ರಕ್ಷಣಾ ಕಾರ್ಯ ಮುಂದುವರೆದಿದೆ.

ಗುರುವಾರ ಸಂಜೆ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಘಟನೆ ಕುರಿತು ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆಗೂ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ಬಂಧುಗಳೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ: 
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಚಿಕಿತ್ಸೆಗೆ ಅಗತ್ಯವಿರುವವರಿಗೆ 1 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿಗಳು ತಕ್ಷಣ ನೀಡಲಿದ್ದಾರೆ. ಹೆಚ್ಚಿನ ಪರಿಹಾರ ಘೋಷಿಸುವ ಅಧಿಕಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಿದೆ.

ನಾಲ್ಕನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯ:
ಮಂಗಳವಾರ ಮಧ್ಯಾಹ್ನ ಕುಸಿದಿರುವ ಕಟ್ಟಡದ ಅವಶೇಷಗಳಡಿ ಇನ್ನೂ 10 ರಿಂದ 12 ಮಂದಿ ಸಿಲುಕಿರುವ ಸಾಧ್ಯತೆ ಇದೇ ಎನ್ನಲಾಗುತ್ತಿದ್ದು, ನಾಲ್ಕನೇ ದಿನವಾದ ಇಂದೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಘಾಜಿಯಾಬಾದ್ ಎನ್‌ಡಿಆರ್‌ಎಫ್ ನ 72, ಬೆಂಗಳೂರು  ಎನ್‌ಡಿಆರ್‌ಎಫ್ 40, ಎಸ್‌ಡಿಆರ್‌ಎಫ್-40, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 240, ಗಡಿಭದ್ರತಾ ಪಡೆಯಲ್ಲಿ 120, ವಿವಿಧ ಪೊಲೀಸ್ ಮತ್ತು ಆರ್‌ಟಿಓ ಸುಮಾರು 800, ಸ್ವಯಂ ಸೇವಕರು 100 ಕ್ಕೂ ಹೆಚ್ಚು, ಪಿಡಬ್ಲೂಡಿ ಯ 12 ತಜ್ಞ ಇಂಜಿನಿಯರ್‌ಗಳು, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 120 ಕ್ಕೂ ಹೆಚ್ಚು ಸಿಬ್ಬಂದಿ, ಕಂದಾಯ-60, ಗೃಹರಕ್ಷಕ ದಳ-80, ಆರೋಗ್ಯ ಇಲಾಖೆಯ 150 ಕ್ಕೂ ಹೆಚ್ಚು, ಅಂಬ್ಯುಲೆನ್ಸ್-30 ರಿಂದ 40, ಜೆಸಿಬಿ 10, ಕ್ರೇನ್–6 ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

Trending News