ಸಿದ್ದರಾಮಯ್ಯನವರು ಚುನಾವಣಾ ರಾಜಕೀಯ 'ಸಾಕಪ್ಪಾ' ಎಂದಿದ್ದೇಕೆ ಗೊತ್ತಾ?

    

Last Updated : Aug 5, 2018, 01:07 PM IST
ಸಿದ್ದರಾಮಯ್ಯನವರು ಚುನಾವಣಾ ರಾಜಕೀಯ 'ಸಾಕಪ್ಪಾ' ಎಂದಿದ್ದೇಕೆ ಗೊತ್ತಾ?  title=

ಸಿದ್ಧರಾಮಯ್ಯ ಈಗ ಚುನಾವಣಾ ರಾಜಕೀಯ ಸಾಕು ಎನ್ನಲು ಹಲವು ಕಾರಣಗಳಿವೆ. ಆದ್ದರಿಂದ  ಅವರು ಈ ನಿರ್ಧಾರಕ್ಕೆ ಬರುವ ಮುನ್ನ ಎಲ್ಲವನ್ನು ಅಳೆದು ತೂಗಿ ಈಗ ಚುನಾವಣಾ ರಾಜಕೀಯ ಸಾಕು ಅಂತಿದ್ದಾರೆ ಎನ್ನುತ್ತಿವೆ ಅವರ ಆಪ್ತ ಮೂಲಗಳು. 

ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಅವರ ಸಾಮರ್ಥ್ಯವನ್ನು ಅರಿತಿದ್ದು, ಇನ್ನು ಕೂಡ ಪಕ್ಷವನ್ನು ಮುನ್ನಡೆಸಲು ಸಿದ್ದರಾಮಯ್ಯನವರೇ ಸೂಕ್ತ ಎನ್ನುತ್ತಿದೆ.ಇದಕ್ಕೆ ಕಾರಣವೆಂದರೆ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನೇ ಎದುರು ಹಾಕಿಕೊಂಡು ಪಟ್ಟಿಗೆ, ಮರು ಪಟ್ಟು ಹಾಕುತ್ತಿದ್ದ ಸಿದ್ದರಾಮಯ್ಯನವರ ಮಾತಿನ ವೈಖರಿಗೆ ಹೈಕಮಾಂಡ್ ಬೆರಗಾಗಿದೆ. ಬಹುಶಃ ಇದೇ ಕಾರಣದಿಂದಲೇ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ರಾಷ್ಟ್ರ ರಾಜಕಾರಣಕ್ಕೆ ಕರೆ ತರುವ ಆಲೋಚನೆಯನ್ನು ಹೊಂದಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ನೂತನವಾಗಿ ರಚನೆಯಾದ ಕಾಂಗ್ರೇಸ್ ನ ಉನ್ನತ ಕಾರ್ಯಕಾರಿಣಿ ಸಮಿತಿಯಲ್ಲಿ ಸಿದ್ಧರಾಮಯ್ಯ ಕೂಡ ಸ್ಥಾನವನ್ನು ಪಡೆದಿರುವುದು ಇದೆಲ್ಲವನ್ನು ಒತ್ತಿ ಹೇಳುತ್ತಿದೆ. ಆದರೆ ಇನ್ನೊಂದು ಕಡೆ ಸಿದ್ಧರಾಮಯ್ಯ ಮಾತ್ರ ಚುನಾವಣೆ ರಾಜಕಾರಣವಿನ್ನು ಸಾಕು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಹಾಗಾದರೆ ಸಿದ್ಧರಾಮಯಯನವರು ಈ ನಿರ್ಧಾರಕ್ಕೆ ಬಂದಿದ್ದಾದರೂ ಯಾಕೆ? ಎನ್ನುವ ಎಲ್ಲರ ಪ್ರಶ್ನೆಗೆ ಉತ್ತರವೇನೂ ಕಷ್ಟಕರವಿಲ್ಲ. 

ಆ ಒಂದೇ ಒಂದು ಸೋಲು ಸಿದ್ಧರಾಮಯ್ಯನವರ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿಬಿಟ್ಟಿದೆ. ಹೌದು, ಸಿದ್ದರಾಮಯ್ಯನವರಿಗೆ ಇನ್ನು ಕೂಡ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಸೋಲನ್ನು ಮರೆಯಲು ಆಗುತ್ತಿಲ್ಲ. ಈ ಸೋಲು ಅವರನ್ನು ಹತಾಶರಾನ್ನಾಗಿ ಮಾಡಿ ಬಿಟ್ಟಿದೆ. ಇದೇ ಕಾರಣದಿಂದಲೇ ಅವರು ಸಾಕಪ್ಪಾ ಸಾಕು ಈ ಚುನಾವಣಾ ರಾಜಕಾರಣದ ಸಹವಾಸ ಎನ್ನುತ್ತಿದ್ದಾರೆ. ಇತ್ತ ಕಡೆ ಹೈಕಮಾಂಡ್ ಮಾತ್ರ ಅವರನ್ನು ನಿರಂತರವಾಗಿ ಒತ್ತಾಯಿಸುತ್ತಲೇ ಇದೆ.

ಈ ಒತ್ತಾಯದ ಹಿಂದೆ ಕಾಂಗ್ರೆಸ್ ನ ಹಿತಾಸಕ್ತಿಯೂ ಅಡಗಿದೆ. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಸಿದ್ಧರಾಮಯ್ಯ ಇಂದಿಗೂ ಕೂಡ ರಾಜ್ಯದ ಎಲ್ಲ ಭಾಗಕ್ಕೂ ಸಲ್ಲುವ ನಾಯಕ, ಆದರೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿಯ ನಾಯಕರ ಕೊರತೆ ಇದೆ ಮತ್ತು ಪಕ್ಷದೊಳಗಿನ ಬಂಡಾಯವನ್ನು ಉಪಶಮನ ಮಾಡುವ ಶಕ್ತಿಯನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ಮಾತ್ರ ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಅವಶ್ಯಕತೆ ಮತ್ತೆ ಮತ್ತೆ ಪಕ್ಷಕ್ಕೆ ಅಗತ್ಯವಾಗಿದೆ.ಆದ್ದರಿಂದ ಹೈಕಮಾಂಡ್ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲವಂತೆ ದುಂಬಾಲು ಬಿದ್ದಿದೆ 

ಇನ್ನೊಂದೆಡೆ ಸಿದ್ದರಾಮಯ್ಯನವರು ಈ ಹಿಂದೆ ಈಗಾಗಲೇ ಒಮ್ಮೆ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಮತ್ತು ಮೈಸೂರಿನಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಆ ಕಾರಣದಿಂದಲೇ ಸಿದ್ದರಾಮಯ್ಯನವರಿಗೆ ಲೋಕಸಭೆ ಮೇಲೆ ಅಷ್ಟು ಒಲವಿಲ್ಲ ಎನ್ನಲಾಗುತ್ತಿದೆ. ಇನ್ನು ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ವಿಧಾನಸಭೆಯಲ್ಲಿ ಕೈಹಿಡಿದ ಬಾದಾಮಿ ಜನರ ಸೇವೆಯನ್ನು ಮಾಡಿ ಚುನಾವಣಾ ರಾಜಕೀಯಕ್ಕೆ ಅಂತ್ಯ ಹಾಡಬೇಕು ಎನ್ನುವುದು ಸಿದ್ದರಾಮಯ್ಯನವರ ಒತ್ತಾಸೆಯಾಗಿದೆ ಎನ್ನಲಾಗುತ್ತಿದೆ.ಆದರೆ ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪೋಸಿಬಿಲಿಟಿ ಅಂತಾರೆ, ಆದ್ದರಿಂದ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಾರೋ ಅಥವಾ ಲೋಕಸಭಾ ಚುನಾವಣೆಯ ಮೂಲಕ ರಾಷ್ಟ್ರ ರಾಜಕಾರಣದ ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಾರೋ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ.

 

Trending News