ಕಾರ್ಮಿಕರಿಗೆ ಗುಡ್ ನ್ಯೂಸ್: ಕೈಗಾರಿಕೆ ಪ್ರಾರಂಭಕ್ಕೆ ಲಾಕ್​ಡೌನ್‍ನಿಂದ ವಿನಾಯಿತಿ

ಜಿಲ್ಲೆಯೊಳಗೆ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಕೃಷಿ ಚಟುವಟಿಕೆಗಳ ಕಾರಣಕ್ಕೆ ಹೋಗುವ ರೈತರಿಗೆ ನಿರ್ಬಂಧವಿಲ್ಲ. ಅಂತರ ಜಿಲ್ಲಾ ಗಡಿಭಾಗದಲ್ಲಿ ಜಮೀನು ಹೊಂದಿರುವ ರೈತರು ಕೂಡ ಕೃಷಿ ಕೆಲಸ ಮಾಡಬಹುದು.

Last Updated : Apr 25, 2020, 09:20 AM IST
ಕಾರ್ಮಿಕರಿಗೆ ಗುಡ್ ನ್ಯೂಸ್: ಕೈಗಾರಿಕೆ ಪ್ರಾರಂಭಕ್ಕೆ ಲಾಕ್​ಡೌನ್‍ನಿಂದ ವಿನಾಯಿತಿ  title=

ಹಾಸನ: ಕೊರೋನಾವೈರಸ್ ಕೋವಿಡ್-19 (Covid-19)  ಹರಡುವಿಕೆಯ ದೃಷ್ಟಿಯಿಂದ ಲಾಕ್​ಡೌನ್ (Lockdown) ಜಾರಿಯಲ್ಲಿದ್ದರೂ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳನ್ನು ನಡೆಸಲು ಯಾವುದೇ ನಿರ್ಬಂಧಗಳಿಲ್ಲ ರೈತರು ನಿಶ್ಚಿಂತೆಯಿಂದ ಕೆಲಸ ಮಾಡಬಹುದು. ಇದೇ ರೀತಿ ಕೆಲವೊಂದು ಸೇವಾವಲಯ ಮತ್ತು ಕೈಗಾರಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಪ್ರಿಲ್ 24ರಂದು ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ಜಿಲ್ಲೆಯೊಳಗೆ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಕೃಷಿ ಚಟುವಟಿಕೆಗಳ ಕಾರಣಕ್ಕೆ ಹೋಗುವ ರೈತರಿಗೆ ನಿರ್ಬಂಧವಿಲ್ಲ. ಅಂತರ ಜಿಲ್ಲಾ ಗಡಿಭಾಗದಲ್ಲಿ ಜಮೀನು ಹೊಂದಿರುವ ರೈತರು ಕೂಡ ಕೃಷಿ ಕೆಲಸ ಮಾಡಬಹುದು, ಪಾಸ್ ಅಥವಾ ಪಾಣಿಯನ್ನು ಜೊತೆಯಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯವರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಿ ಓಡಾಡಬೇಕೆಂದು ಮನವಿ ಮಾಡಿದರು.

ಸಾರ್ವಜನಿಕ ಕೆಲಸಗಳಾದ ಕೃಷಿ, ರಸ್ತೆ, ನೀರಾವರಿ, ಸರ್ಕಾರಿ ಕಟ್ಟಡ ಕಾಮಗಾರಿಗಳನ್ನು ನಡೆಸಲು ಪೂರಕ ಸಾಮಗ್ರಿಗಳು ದೊರೆಯಲಿವೆ ಎಂದರಲ್ಲದೆ ಹಾರ್ಡ್ ವೇರ್ ಶಾಪ್‍ಗಳಲ್ಲಿ, ಸಿಮೆಂಟ್, ಕಬ್ಬಿಣಗಳನ್ನು ತೆಗೆದು ಕಳಿಸಬಹುದು, ಆದರೆ ನಿರಂತರವಾಗಿ ಅಂಗಡಿ ಬಾಗಿಲು ತೆರೆದು ಕುಳಿತು ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು.

ಇನ್ಮುಂದೆ ರಸ್ತೆಗಳಲ್ಲಿ ಅನವಶ್ಯಕವಾಗಿ ಓಡಾಡುವ ಮುನ್ನ ಎಚ್ಚರ!

ಇದೇ ವೇಳೆ ತೋಟಗಾರಿಕೆ ಕೆಲಸಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದ ಸಚಿವರು ವಿದ್ಯುತ್ ನಿಗಮ, ಬ್ಯಾಂಕ್, ಅಂಚೆ, ಸರ್ಕಾರಿ ಇಲಾಖೆಗಳು ಮತ್ತೆ ಕಾರ್ಯಾರಂಭ ಮಾಡಲಿವೆ. ಆದರೆ ಶಿಕ್ಷಣ ಇಲಾಖೆ, ಸೂಪರ್ ಮಾರ್ಕೆಟ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್ ಗಳನ್ನು ತೆರೆಯುವುದಿಲ್ಲ. ಅಂತೆಯೇ ಸರ್ಕಾರದ ಮುಂದಿನ ಆದೇಶದವರೆಗೆ  ಸಭೆ ಸಮಾರಂಭ, ಮದುವೆಗಳನ್ನು ನಿರ್ಬಂಧಿಸಲಾಗಿದೆ ಎಂದರು.

ನಗರದ ಕೇಂದ್ರ ಭಾಗದಲ್ಲಿರುವ ಯಾವುದೇ ಸಣ್ಣ ಕೈಗಾರಿಕಾ ಕೆಲಸಗಳ ಆರಂಭಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಮಾಧುಸ್ವಾಮಿ ಹೊರವಲಯದಲ್ಲಿರುವ ಕೈಗಾರಿಕೆಗಳು ಮೂರನೇ ಒಂದು ಭಾಗದ ಕಾರ್ಮಿಕರನ್ನು ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿಸಬಹುದು. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನೀಡಲಾಗುವುದಿಲ್ಲ. ಕಾರ್ಮಿಕರಿಗೆಲ್ಲ ಪಾಸ್ ವಿತರಣೆ ಮಾಡಲಾಗುವುದಿಲ್ಲ ಕಾರ್ಖಾನೆ ಸಂಸ್ಥೆಯವರೇ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಕ್ವಾರಿ ಮತ್ತು ಕ್ರಶರ್‍ಗಳನ್ನು ನಡೆಸಲು ಅನುಮತಿ ನೀಡಿದ್ದು ಇಲ್ಲಿಯೂ ಸಹ ನಿಯಮ ಉಲ್ಲಂಘಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು. 

ರಾಜ್ಯದಲ್ಲಿ  ಕರೋನಾವೈರಸ್ (Coronavirus) ಕೊವೀಡ್-19 ಸೋಂಕಿನ ಪರಿಣಾಮ ಹೆಚ್ಚಾಗಿರುವುದರಿಂದ ಹೆಚ್ಚಿನ ಸಡಿಲಿಕೆ ಮಾಡದೆ ಹಸಿರು ಝೋನ್ ಜಿಲ್ಲೆಯೆಂದು ಗುರುತಿಸಿದರೂ ಮುಂಜಾಗ್ರತೆಯ ಕಾರಣಕ್ಕಾಗಿ ಲಾಕ್ ಡೌನ್ ಅನ್ನು ಮೇ 3ರವರೆಗೆ ಜಿಲ್ಲೆಯಲ್ಲಿಯೂ ಕಡ್ಡಾಯವಾಗಿ ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದ ವಿದ್ಯಾರ್ಥಿಗಳು

ಕೇಂದ್ರ ರಾಜ್ಯ ಸರ್ಕಾರಗಳು ಆರ್ಥಿಕ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಿದ್ದು ಹಣ್ಣು, ತರಕಾರಿ, ಕೊಬ್ಬರಿ ಸಾಗಾಣಿಕೆ ಮಾಡಬಹುದು. ಆದರೆ ವಾಹನ ಚಾಲಕರು ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳ ಮಾರಾಟ ಕೇಂದ್ರಗಳಿಗೆ ಹೋಗಿ ಬಂದ ನಂತರ ನೇರವಾಗಿ ಮನೆ ಅಥವಾ ಸಮುದಾಯದ ಜನರನ್ನು ಸಂಪರ್ಕಿಸುವಂತಿಲ್ಲ. 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಅಲ್ಲಿ ಇದ್ದು ಆ ನಂತರವೇ ಮನೆಗಳಿಗೆ ತೆರಳಬೇಕು.  ಪೋಲೀಸ್ ಇಲಾಖೆ ಈ ಕುರಿತು ಕಟ್ಟು ನಿಟ್ಟಿನ ಗಮನಹರಿಸಬೇಕೆಂದು  ಸಚಿವ ಮಾಧುಸ್ವಾಮಿ  ನಿರ್ದೇಶನ ನೀಡಿದರು.

ಕೇಂದ್ರ ಸರ್ಕಾರದಿಂದ ಮೇ ತಿಂಗಳಿನಲ್ಲಿ ಪಡಿತರರಿಗೆ 10 ಕೆ.ಜಿ. ಅಕ್ಕಿ, 2 ಕೆ.ಜಿ. ಬೆಳೆಯನ್ನು ನೀಡಲಾಗುತ್ತದೆ ಎಂದು ಸಚಿವರು ಹೇಳಿದರಲ್ಲದೆ, ಜಿಲ್ಲೆಯಲ್ಲಿ ಕೊವೀಡ್-19 ಕುರಿತ ಕೆಲಸಕ್ಕೆ ನಿಯೋಜನೆಗೊಂಡಿರುವ ವ್ಯಕ್ತಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ 20 ಲಕ್ಷದವರೆಗೆ ಅವರಿಗೆ ವಿಮೆ ಪಾವತಿ ಸೌಲಭ್ಯ ನೀಡಲಾಗುತ್ತದೆ. ಇದೇರೀತಿ ಕರ್ತವ್ಯದಲ್ಲಿದ್ದು ಮೃತಪಟ್ಟ ಆಂಬುಲೆನ್ಸ್ ಚಾಲಕರಿಗೂ ಈ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ತಿಳಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಲಿಕ್ಕರ್ ಮದ್ಯವನ್ನು ಕದ್ದು ಮಾರಾಟ ಮಾಡುವವರ ಪರವಾನಗಿ ರದ್ದು ಮಾಡುವುದರ ಜೊತೆಗೆ ಕದ್ದ ಮಾಲಿಗೆ ತಕ್ಕ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ ಎಂದು ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Trending News