ಟಿಪ್ಪು ಪಾಲಿಟಿಕ್ಸ್: ವಿರೋಧದ ನಡುವೆಯೂ ಇಂದು ಟಿಪ್ಪು ಜಯಂತಿ...

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯ ಕಾರಣದಿಂದ ಟಿಪ್ಪು ಜಯಂತಿ ಆಚರಣೆಯಿಂದ ದೂರ ದೂರ ಉಳಿದಿದ್ದಾರೆ.

Last Updated : Nov 10, 2018, 10:14 AM IST
ಟಿಪ್ಪು ಪಾಲಿಟಿಕ್ಸ್: ವಿರೋಧದ ನಡುವೆಯೂ ಇಂದು ಟಿಪ್ಪು ಜಯಂತಿ... title=

ಬೆಂಗಳೂರು: ರಾಜ್ಯಾದ್ಯಂತ ಬಿಜೆಪಿ ಹಾಗೂ ಇತರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿದೆ. 

ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ನಿಷೇಧಾಜ್ಞೆ ಜಾರಿ
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಶುಕ್ರವಾರ ಬಿಜೆಪಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರ್ಕಾರ ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಳಗಾವಿ, ಕೊಡಗು, ಮಂಡ್ಯ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭಾನುವಾರ ಬೆಳಿಗೆ 6 ಗಂಟೆವರೆಗೂ ಸಾರ್ವಜನಿಕರು ಗುಂಪುಗೂಡುವುದು, ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ. ಮದ್ಯ ಮಾರಾಟಕ್ಕೂ ನಿಷೇಧ ವಿಧಿಸಲಾಗಿದೆ.

ಜಯಂತಿ ಆಚರಣೆ ತಡೆಗೆ ಕೋರ್ಟ್‌ ನಿರಾಕರಣೆ
ಮತ್ತೊಂದೆಡೆ, ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ರಾಜ್ಯ ಹೈಕೋರ್ಟ್‌ ಶುಕ್ರವಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ಸಂಬಂಧ ಕೊಡಗಿನ ಕೆ.ಪಿ ಮಂಜುನಾಥ್‌ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಇದೊಂದು ಸರ್ಕಾರದ ನೀತಿ-ನಿರ್ಧಾರದ ವಿಷಯ ಆಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು 2016 ಮತ್ತು 2017ರಲ್ಲಿ ನ್ಯಾಯಾಲಯ ಆದೇಶ ನೀಡಿದೆ. ಹೀಗಿರುವಾಗ ಈಗ ವ್ಯತಿರಿಕ್ತ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರತಿಭಟನೆಗೆ ಅನುಮತಿಯಿಲ್ಲ
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಪ್ರತಿಭಟನೆ, ಮೆರವಣಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಘೋಷಣೆ ಕೂಗುವುದಕ್ಕೆ ಅನುಮತಿಯಿಲ್ಲ. ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿದರೆ ಸಾರ್ವಜನಿಕರು ಯಾವುದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುತ್ತಿಲ್ಲ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಣೆ ಸಿದ್ಧತೆಯಲ್ಲಿದ್ದರೆ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯ ಕಾರಣದಿಂದ ಟಿಪ್ಪು ಜಯಂತಿ ಆಚರಣೆಯಿಂದ ದೂರ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲದೆ, ಮೈಸೂರು ಸಮೀಪದ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಅದನ್ನು ಟೀಕಿಸಿದ್ದರು. ಈ ಕಾರಣದಿಂದಲೇ ಮೊದಲೇ ಕಾರ್ಯಕ್ರಮ ಸಂಯೋಜಕರಿಗೆ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕದಂತೆ ಸಿಎಂ ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. 

Trending News