ಯತ್ನಾಳ್ ಹೇಳಿಕೆ ಬಗ್ಗೆ ಸದನದಲ್ಲಿ ಚರ್ಚಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಲಿ-ಸಿದ್ಧರಾಮಯ್ಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರನ್ನು ಅವಮಾನಿಸಿದ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಘನತೆವೆತ್ತ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Last Updated : Mar 3, 2020, 11:45 PM IST
ಯತ್ನಾಳ್ ಹೇಳಿಕೆ ಬಗ್ಗೆ ಸದನದಲ್ಲಿ ಚರ್ಚಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಲಿ-ಸಿದ್ಧರಾಮಯ್ಯ  title=
Photo courtesy: Twitter

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರನ್ನು ಅವಮಾನಿಸಿದ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಘನತೆವೆತ್ತ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ನಾಳೆ ಪಕ್ಷದ ಹಿರಿಯ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ. ವಿಧಾನಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಸಂವಿಧಾನದ 175ನೇ ಪರಿಚ್ಛೇದಡಿ ನಿರ್ದೇಶನ ನೀಡಲು ಘನತೆವೆತ್ತ ರಾಜ್ಯಪಾಲರಿಗೆ ಅಧಿಕಾರ ಇದೆ. ಇದನ್ನು ಚಲಾಯಿಸಲು ಒತ್ತಾಯಿಸಿ ಪಕ್ಷದ ನಾಯಕರೊಂದಿಗೆ ನಾನು ನಾಳೆ ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇನೆ' ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಸಿದ್ಧರಾಮಯ್ಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರನ್ನು ಅವಮಾನಿಸಿದ್ದಕ್ಕೆ ಯತ್ನಾಳ್  ರನ್ನು ತರಾಟೆಗೆ ತೆಗೆದುಕೊಂಡಿದ್ದರು. 'ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ಅಗೌರವ ತೋರಿದ್ದಾರೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನಿಸಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ. ಇಂತಹ ದೇಶ ದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸಭಾಧ್ಯಕ್ಷರು ತಕ್ಷಣ ಅಮಾನತು ಮಾಡಬೇಕು' ಎಂದು ಆಗ್ರಹಿಸಿದರು.

'ಬಿಜೆಪಿ ನಾಯಕರು, ಮಂತ್ರಿಗಳು ಯತ್ನಾಳ್ ಹೇಳಿಕೆಯನ್ನು ಖಂಡಿಸುವ ಬದಲು ಬೆಂಬಲಿಸಿ ಮಾತನಾಡುತ್ತಾರೆ. ಪಕ್ಷದ ಶಾಸಕನೊಬ್ಬ ದೇಶದ ಸ್ವಾತಂತ್ರ್ಯ ಚಳುವಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸುವುದು ವೈಯಕ್ತಿಕ ಅಭಿಪ್ರಾಯ ಹೇಗಾಗುತ್ತದೆ? ಹಾಗಾದರೆ ಯತ್ನಾಳ್ ಹೇಳಿಕೆಗೆ ಬಿಜೆಪಿ ಸಮ್ಮತಿ ಇದೆಯೇ ಎಂಬುದನ್ನು ಅಧಿಕೃತವಾಗಿ ಸ್ಪಷ್ಟಪಡಿಸಲಿ' ಎಂದು ಬಿಜೆಪಿಗೆ ಸವಾಲು ಹಾಕಿದರು.

ಇದೇ ವೇಳೆ ದೊರೆಸ್ವಾಮಿಯವರನ್ನು ಕೇವಲ ಪಕ್ಷಕ್ಕೆ ಸೀಮಿತಗೊಳಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ಧರಾಮಯ್ಯ 'ಸ್ವಾತಂತ್ರ್ಯಹೋರಾಟಗಾರ ದೊರೆಸ್ವಾಮಿಯವರನ್ನು ಒಂದು ಪಕ್ಷಕ್ಕೆ ಕಟ್ಟಿಹಾಕುವುದು ಸರಿಯಲ್ಲ. ಅವರು ಹಿಂದೆ  ತುರ್ತುಪರಿಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ವಿರುದ್ಧವೂ ಪ್ರತಿಭಟಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು' ಎಂದು ಹೇಳಿದರು.

ಇದೇ ವೇಳೆ ಯತ್ನಾಳ್ ವಿಚಾರವನ್ನು ಸದನದಲ್ಲಿ ಚರ್ಚೆಗೆ ಸ್ಪೀಕರ್ ಅವಕಾಶ ನೀಡದಿರುವುದಕ್ಕೆ ಸಿದ್ಧರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ಸದನಕ್ಕೆ ಅಗೌರವ ತೋರುವ‌ ಸದಸ್ಯರನ್ನು ಅಮಾನತು ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು. ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಯತ್ನಾಳ್ ಅವರನ್ನು ಅಮಾನತು ಮಾಡುವಂತೆ ಸಭಾಧ್ಯಕ್ಷರಲ್ಲಿ ಒತ್ತಾಯ ಮಾಡಿದ್ದೇವೆ. ಆದರೆ ನಮಗೆ ಮಾತನಾಡಲು ಅವಕಾಶವನ್ನೇ ನೀಡದಿರುವ ಸಭಾಧ್ಯಕ್ಷರ ವರ್ತನೆ ಸರಿ ಅಲ್ಲ" ಎಂದು ಹೇಳಿದರು.

 

Trending News