'ಆಯಾ ರಾಮ್ ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ'

ಸರ್ಕಾರ ಉಳಿಯುವಿಕೆಗೆ ಶತಾಯಗತಾಯ ಪ್ರಯತ್ನ ಪಟ್ಟರೂ ಕೂಡ ಮೈತ್ರಿ ನಾಯಕರ ಯಾವುದೇ ಯತ್ನ ಕೈಗೂಡಲಿಲ್ಲ.

Manjunath Naragund Manjunath Naragund | Updated: Jul 24, 2019 , 10:17 AM IST
'ಆಯಾ ರಾಮ್  ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ'
File Image

ಬೆಂಗಳೂರು: ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದ ರಾಜ್ಯದ ರಾಜಕೀಯ ಬಿಕ್ಕಟ್ಟು ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಮಂಗಳವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ 14 ತಿಂಗಳ ಸಮ್ಮಿಶ್ರ ಸರ್ಕಾರ ಸರ್ಕಾರ ಪತನವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಕೆಲವು ಅತೃಪ್ತ ಶಾಸಕರು ಬಂಡಾಯವೆದ್ದು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಸರ್ಕಾರ ಬಹುಮತದ ಕೊರತೆಯನ್ನು ಅನುಭವಿಸುತ್ತಿತ್ತು. ಇದರ ನಡುವೆ ಸಿಎಂ ಕುಮಾರಸ್ವಾಮಿ ತಾವು ವಿಶ್ವಾಸ ಮತಯಾಚಿಸುವುದಾಗಿ ಹೇಳಿದ್ದರು. ಆ ನಿಟ್ಟಿನಲ್ಲಿ ಅವರು ಅತೃಪ್ತ ಶಾಸಕರನ್ನು ಮನವೋಲಿಸುವ ನಿಟ್ಟಿನಲ್ಲಿ ತೆರೆಮೆರೆಯಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಇದ್ಯಾವುದಕ್ಕೂ ಓಗೊಡದ ಬಂಡಾಯ ಶಾಸಕರು ತಮ್ಮ ರಾಜೀನಾಮೆಗೆ ಬದ್ದರಾಗಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿತ್ತು.  

ಸರ್ಕಾರ ಉಳಿಯುವಿಕೆಗೆ ಶತಾಯಗತಾಯ ಪ್ರಯತ್ನ ಪಟ್ಟರೂ ಕೂಡ ಯಾವುದೇ ಯತ್ನ ಕೈಗೂಡಲಿಲ್ಲ. ವಿಶ್ವಾಸ ಮತಯಾಚನೆ ಕುರಿತು ನಡೆದ ನಾಲ್ಕು ದಿನಗಳ ಚರ್ಚೆ ಸಾಕಷ್ಟು ಗಮನ ಸೆಳೆದಿತ್ತು. ಅದರಲ್ಲೂ ಆಡಳಿತ ಪಕ್ಷದ ಶಾಸಕರು ಹಿರಿಯ ಕಿರಿಯರೆನ್ನದೆ  ಭಾಗವಹಿಸಿದ್ದು ವಿದ್ವತ್ ಪೂರ್ಣ ಚರ್ಚೆಗೆ ಸದನ ಸಾಕ್ಷಿಯಾಗಿತ್ತು. 

ರಾಜಕೀಯ ಬಿಕ್ಕಟ್ಟು ಕೇವಲ ಸರ್ಕಾರಕ್ಕೆ ಬಂದಿರುವ ಸವಾಲಾಗದೆ ಹಲವು ಸಂವಿಧಾನಾತ್ಮಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು . ಕಾರಣವಿಷ್ಟೇ ರಾಜೀನಾಮೆ ನೀಡಿದ್ದ ಶಾಸಕರು ತಮ್ಮ ರಾಜೀನಾಮೆ ವಿಚಾರದಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಸ್ಪೀಕರ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆ ಮಾಡಿ ಸದನಕ್ಕೆ ಹಾಜರಾಗಲು ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಸೂಚಿಸಿತ್ತು. ಆದರೆ ಸದನದ ನಿಯಮಾವಳಿಯಾಗಲಿ ಅಥವಾ ನಡಾವಳಿಗಳಾಗಲಿ ಇವುಗಳಲ್ಲಿ ಸ್ಪೀಕರ್ ಗೆ ವಿವೇಚನಾ ಅಧಿಕಾರವಿದೆ ಎಂದು ತೀರ್ಪು ನೀಡಿತ್ತು.

ಈ ಎಲ್ಲ ಬೆಳವಣಿಗೆ ಹಿನ್ನಲೆಯಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದ 14 ತಿಂಗಳ ಕಾಲಾವಧಿಯನ್ನು ಗಮನಿಸಿದಾಗ ಪ್ರಾರಂಭದಿಂದಲೂ ಪ್ರತಿಪಕ್ಷ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುತ್ತಲೇ ಬಂದಿದೆ. ಸಮ್ಮಿಶ್ರ ಸರ್ಕಾರದಲ್ಲಿನ ಶಾಸಕರಿಗೆ ಆಮಿಷ, ಐಟಿ ಹಾಗೂ ಇಡಿ ದಾಳಿಯ ಬೆದರಿಕೆ ಅಸ್ತ್ರಗಳ ಮೂಲಕ ರಾಜ್ಯ ಸರ್ಕಾರವನ್ನು ಪತನಗೊಳಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ ಎಂದು ಮೈತ್ರಿ ನಾಯಕರು ದೂರಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಪರಸ್ಪರ ಸ್ಪರ್ಧಿಗಳಾಗಿರುವುದರಿಂದ ಕಾರ್ಯಕರ್ತರ ಮಟ್ಟದಲ್ಲಿ ಇಂತಹ ಸಂಗತಿಗಳು ಅಸಮಾಧಾನ ಮೂಡಿಸಿದ್ದವು. ಈ ಎಲ್ಲ ಸಂಗತಿಗಳು ಈಗ ಸರ್ಕಾರದ ಪತನಕ್ಕೆ ಕನ್ನಡಿ ಹಿಡಿದ ಅಂಶಗಳಾಗಿವೆ.

ವಿಶ್ವಾಸ ಮತಯಾಚನೆಯಲ್ಲಿ ಚರ್ಚೆಗೆ ನಾಂದಿ ಹಾಡಿದ ಪಕ್ಷಾಂತರ ನಿಷೇಧ ಕಾಯ್ದೆ :

ಈ ವಿಶ್ವಾಸಯಾಚನೆ ವಿಚಾರದಲ್ಲಿ ಪಕ್ಷಾಂತರ ಕಾಯ್ದೆ ಅಡಿಯಲ್ಲಿ ರಾಜಕೀಯ ಪಕ್ಷಕ್ಕೆ ಇರುವ ವಿಪ್ ಅಧಿಕಾರ ಮತ್ತು ಅದನ್ನು ಉಲ್ಲಂಘಿಸಿದಲ್ಲಿ ಶಾಸಕರನ್ನು ಅನರ್ಹಗೊಳಿಸುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವ ಶಾಸಕರು ಅಥವಾ ಸಂಸದರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 1967 ರಲ್ಲಿ ಮೊದಲ ಬಾರಿಗೆ ಪ್ರಸ್ತಾಪವನ್ನು ಇಡಲಾಯಿತು. ಹರ್ಯಾಣದ ಶಾಸಕ ಗಯಾಲಾಲ್ ಎನ್ನುವವರು ಕೇವಲ ಒಂದೇ ದಿನದಲ್ಲಿ ಮೂರು ಪಕ್ಷಗಳನ್ನು ಬದಲಾವಣೆ ಮಾಡಿದ ಹಿನ್ನಲೆಯಲ್ಲಿ 'ಆಯಾ ರಾಮ್ ಗಯಾ ರಾಮ್' ಎನ್ನುವ ಮಾತು ಸಾಕಷ್ಟು ಜನಪ್ರೀಯವಾಗಿತ್ತು. ಇದಾದ ನಂತರ ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿ ಆಗಿದ್ದ ವೇಳೆ ಈ ರೀತಿಯ ಪಕ್ಷಾಂತರಕ್ಕೆ ತಡೆಯೋಡ್ಡುವ ನಿಟ್ಟಿನಲ್ಲಿ 1985 ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಂವಿಧಾನದ ಪರಿಚ್ಛೇಧ 10ರಲ್ಲಿ ಸೇರಿಸುವ ಮೂಲಕ ಪಕ್ಷದ ಟಿಕೆಟ್ ಪಡೆದು ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ ಶಾಸಕನನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಪರಮಾಧಿಕಾರವನ್ನು ನೀಡಿತು. ಇದೇ ವಿಚಾರ ನಾಲ್ಕು ದಿನಗಳ ವಿಶ್ವಾಸಮತ ಯಾಚನೆ ವೇಳೆ ಚರ್ಚೆಗೂ ಗ್ರಾಸವಾಗಿತ್ತು.