ಪಂಚಾಯತ್ ಚುನಾವಣೆ ನಡೆಸುವ ಮೂಲಕ ಚಿತಾವಣೆಗೆ ಇತಿಶ್ರೀ ಹಾಡುವಂತೆ ಆಯೋಗಕ್ಕೆ ಎಚ್‌.ಕೆ. ಪಾಟೀಲ್ ಪತ್ರ

ಕೊರೋನಾ ವೈರಸ್ ಹಾವಳಿಯಿಂದ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ  ಚುನಾವಣೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಗಾಬರಿಗೊಂಡ ರಾಜ್ಯ ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು  ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. 

Last Updated : May 19, 2020, 12:40 PM IST
ಪಂಚಾಯತ್ ಚುನಾವಣೆ ನಡೆಸುವ ಮೂಲಕ ಚಿತಾವಣೆಗೆ ಇತಿಶ್ರೀ ಹಾಡುವಂತೆ ಆಯೋಗಕ್ಕೆ ಎಚ್‌.ಕೆ. ಪಾಟೀಲ್ ಪತ್ರ title=

ಬೆಂಗಳೂರು: ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ನಾಮಕರಣ ಮತ್ತು ಆಡಳಿತಗಾರರನ್ನು ನೇಮಿಸಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ರಾಜ್ಯ ಬಿಜೆಪಿ ಸರ್ಕಾರದ ಚಿತಾವಣೆಗೆ ಮಣಿಯಬಾರದು. ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿರುವುದರಿಂದ ಕೂಡಲೇ ಕಾನೂನು ಬದ್ದವಾಗಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮಾಜಿ ಸಚಿವರೂ ಆದ ಶಾಸಕ ಎಚ್.ಕೆ. ಪಾಟೀಲ್ ಪತ್ರ ಬರೆದಿದ್ದಾರೆ‌. ಪತ್ರವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.

ಸನ್ಮಾನ್ಯ ರಾಜ್ಯ ಚುನಾವಣಾ ಆಯುಕ್ತರೇ,
ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಕಾನೂನನ್ನು ಜಾರಿಗೊಳಿಸಿ, ಕ್ರಾಂತಿಕಾರಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪ್ರಯತ್ನದಿಂದ ಕರ್ನಾಟಕದಲ್ಲಿ ಪಂಚಾಯತ ರಾಜ್ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಗ್ರಾಮ ಸ್ವರಾಜ್ಯ ಮಾಡುವ ಸಂಕಲ್ಪ, ಪಂಚಾಯತ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಯಶಸ್ವಿಯತ್ತ ಸಾಗಿದೆ. ಕಳೆದ 5-6 ವರ್ಷಗಳಲ್ಲಿ ಪಂಚಾಯತಿಗಳ ಸ್ವರೂಪ, ಅವುಗಳ ಅಧಿಕಾರ ವ್ಯಾಪ್ತಿ, ಅಧಿಕಾರ ಬಲ, ಆರ್ಥಿಕ ಸಾಮಥ್ರ್ಯ ಪಂಚಾಯತಿಗಳ ಮೂಲಕ ಹಲವಾರು ಮಹತ್ವದ ಯೋಜನೆಗಳ ಅನುಷ್ಠಾನ, ಇವೆಲ್ಲವುಗಳ ಕಾರಣ ಪಂಚಾಯತಿಗಳು ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಘಟಕಗಳಾಗಿವೆ. ಪಂಚಾಯತಿಗಳು ರಾಷ್ಟ್ರಕಟ್ಟುವ ಪರಿಣಾಮಕಾರಿ ಅಸ್ತ್ರವಾಗಿ ಹೊರಹೊಮ್ಮಿವೆ.

ರಾಜ್ಯದಲ್ಲಿ ಪಂಚಾಯತಿಗಳ ಪುನರ್ ವಿಂಗಡಣೆಯಾಗಿ 5-6 ವರ್ಷವಾಗಿದೆ. ಪುನರ್ ವಿಂಗಡಣೆ ನಂತರ ಪಂಚಾಯತಿಗಳ ಸಂಖ್ಯೆ 5628 ರಿಂದ 6041ಕ್ಕೆ ಏರಿದೆ. ಈ ಎಲ್ಲಾ ಪಂಚಾಯತಿಗಳಿಗೆ 2015ರಲ್ಲಿ ಚುನಾವಣಾ ಸುಧಾರಣೆಗಳ ಹೊಸ ಕಾನೂನಿನ ಮೂಲಕ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದಿದೆ.  ಈಗ 2ನೇ ಸಾರ್ವತ್ರಿಕ ಚುನಾವಣೆಯಾಗಬೇಕಿದೆ.

ಕಡ್ಡಾಯ ಮತದಾನ, ನೋಟಾ, ಚುನಾವಣೆಯಲ್ಲಿ ಸಾರಾಯಿ ನಿರ್ಬಂಧದಂಥ ಗಂಭೀರ ಹೆಜ್ಜೆ ಇತ್ಯಾದಿಗಳ ಮೂಲಕ ಚುನಾವಣೆಯನ್ನು ಅರ್ಥಪೂರ್ಣಗೊಳಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ. 2020ರ ಜೂನ್-ಜುಲೈನಲ್ಲಿ ಮತ್ತೆ ಹೊಸ ಸದಸ್ಯರ ಆಯ್ಕೆ ಮಾಡಬೇಕಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆ ನಂತರ ಜೂನ್‍ನಲ್ಲಿ 2400, ಜುಲೈನಲ್ಲಿ 3500 ಹೀಗೆ ಪಂಚಾಯತಿಗಳ ಚುನಾಯಿತ ಸದಸ್ಯರ  ಪ್ರಥಮ ಸಭೆ ತಾರೀಖನ್ನು ಗಮನಿಸಿ ಪಂಚಾಯತಿಯ ಅವಧಿ ಪೂರ್ಣಗೊಂಡು ಚುನಾವಣೆ ನಡೆಸಬೇಕು. ಹೊಸ ಕಾನೂನಿನನ್ವಯ ನಡೆಯುವ ಈ ಸಾರ್ವತ್ರಿಕ ಚುನಾವಣೆ ಒಟ್ಟು ರಾಜ್ಯದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದೆ.

ಪಂಚಾಯತಿಯಲ್ಲಿ ಏನಿದೆ? ಪಂಚಾಯತಿಗೆ ಏನು ಅಧಿಕಾರ ಇದೆ? ಹಣವೇ ಇಲ್ಲಾ ಕೆಲಸ ಏನು ಮಾಡಬಹುದು ಎಂದು ವಾದಿಸುತ್ತಿದ್ದ ವರ್ಗ ಈಗ ಮೌನವಾಗಿದೆ. ಪಂಚಾಯತಿಗಳ ಅಧಿಕಾರ, ಯೋಜನೆಗಳು, ಹಣಕಾಸು, ಆಡಳಿತ ಬಲ ಇವೆಲ್ಲವುಗಳ ಮೂಲಕ ಕೇವಲ ಪಂಚಾಯತಿಗಳ ಮೇಲೆ ಧ್ವಜಮಾತ್ರವಲ್ಲ, ನಮ್ಮೂರ ಸ್ಥಳೀಯ ಸರ್ಕಾರ ಎಂದು ಪಂಚಾಯತಿ ಕೆಲಸ ಮಾಡಿವೆ. ಪಂಚಾಯತಿಗಳಿಗೆ ಹೆಚ್ಚುತ್ತಿರುವ ಮಹತ್ವದಿಂದಾಗಿ ಬರಲಿರುವ ಚುನಾವಣೆ  ರಾಜಕೀಯ ಹಾಗೂ ಅಬಿವೃದ್ಧಿ ದೃಷ್ಠಿಯಿಂದ ಭಾರೀ ಮಹತ್ವ ಪಡೆದಿದೆ. 

ಕೊರೋನಾ ವೈರಸ್ ಹಾವಳಿಯಿಂದ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ  ಚುನಾವಣೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಗಾಬರಿಗೊಂಡ ರಾಜ್ಯ ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು  ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಕಳೆದ ಜುಲೈ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಪಂಚಾಯತ ರಾಜ್ ಕಾನೂನಿನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಮೀಸಲಾತಿ ಕುರಿತಂತೆ ಇದ್ದ ಅವಧಿಯನ್ನು ಬದಲಾಯಿಸಿ ತಿದ್ದುಪಡಿಯನ್ನು ಮಾಡಿದೆ. 

ಮೀಸಲಾತಿ ಅವಧಿ ಬದಲಾಯಿಸಿರುವದರಿಂದ ಹೊಸ ಮ್ಯಾಟ್ರಿಕ್ಸ್ ಮಾಡಬೇಕಾಗಿದೆ. ಈ ದಿಸೆಯಲ್ಲಿ ನಡೆಯಬೇಕಿದ್ದ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಚುನಾವಣೆ ಮುಂದೂಡಿಕೆ ಆಯಿತು ಎಂದು ಸರ್ಕಾರ ಭಾವಿಸಿಕೊಂಡಿದೆ.

ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳು, ರಾಜ್ಯ ಪಂಚಾಯತ ಅಧಿನಿಯಮಗಳು ಪಕ್ಷಮುಕ್ತ  ಗ್ರಾಮ ಪಂಚಾಯತಿಗಳಿಗೆ ಸದಾವಕಾಲ ಚುನಾಯಿತ ಸದಸ್ಯರು ಇರಬೇಕು ಎನ್ನುವ ತೀರ್ಮಾನ ಹೊಂದಿವೆ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಈ ಸಂಸ್ಥೆಗಳು ದುರ್ಬಳಕೆ ಆಗದಂತೆ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು. ಇದೇ ಜೂನ್-ಜುಲೈ ನಲ್ಲಿ ಚುನಾವಣೆ ಮಾಡದೇ ಮುಂದೂಡಿ ಮೂರು ಸಾಧ್ಯತೆಗಳನ್ನು ಸರ್ಕಾರ ಪ್ರಯತ್ನಿಸುತ್ತಿದೆ. ಅವುಗಳೆಂದರೆ
 i) ಪಂಚಾಯತಿಗಳಿಗೆ ಆಡಳಿತಗಾರರನ್ನು ಅಥವಾ ಆಡಳಿತ ಸಮಿತಿ ನೇಮಿಸಬೇಕೆ?
 ii) ಸದಸ್ಯರನ್ನು ನಾಮನಿರ್ದೇಶನ ಮಾಡಬೇಕೆ
 iii) ಇದ್ದ ಚುನಾಯಿತ ಸದಸ್ಯರನ್ನು 3 ಅಥವಾ 6 ತಿಂಗಳು ಮುಂದುವರೆಸಬೇಕೆ? 

ಆದರೆ ಸದಸ್ಯರನ್ನು ನಾಮಕರಣ, ಆಡಳಿತಗಾರರ ನಾಮಕರಣದ ವಿಷಯದಲ್ಲಿ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ವರದಿ ತಯಾರಿಸಿ ಕಾನೂನಿನಲ್ಲಿರದ ನಾಮಕರಣ ಅವಕಾಶವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಕುರಿತು ಗಂಭೀರ ಪ್ರಯತ್ನದಲ್ಲಿ ಇದೆ. ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್  ಕಾಯ್ದೆ-1993ರ ಕಲಂ 8ರ ಪ್ರಕಾರ ಆಡಳಿತ ಸಮಿತಿಯ ಸದಸ್ಯರನ್ನು ಜಿಲ್ಲಾಧಿಕಾರಿಗಳಿಂದ ನಾಮನಿರ್ದೇಶನ ಮಾಡಲು ಹೊರಟಿದೆ. ಆದರೆ ಸದರಿ ಕಲಂ 8 ಹೊಸದಾಗಿ ಜಿಲ್ಲಾಧಿಕಾರಿಯಿಂದ ಸ್ಥಾಪಿಸಲ್ಪಡುವ ಗ್ರಾಮಪಂಚಾಯತಿಗೆ ಚುನಾವಣೆ ನಡೆಸುವುದಕ್ಕೆ ಯಾವುದೇ ತೊಂದರೆ ಇದ್ದಲ್ಲಿ ಮಾತ್ರ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಸದರಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಕಾಯ್ದೆ-1993ರ ಕಲಂ 8 ಈ ಕೆಳಕಂಡಂತಿದೆ.
“8. ಗ್ರಾಮ ಪಂಚಾಯತಿಗಳ ಸದಸ್ಯರನ್ನು ಚುನಾಯಿಸಲು ತಪ್ಪಿದಲ್ಲಿ ಆಡಳಿತ ಸಮಿತಿಯ ಅಥವಾ ಆಡಳಿತಾಧಿಕಾರಿಯ ನೇಮಕ (1)(ಎ) ಡೆಪ್ಯುಟಿ ಕಮೀಷನರ್ ಅವರಿಗೆ ಗ್ರಾಮ ಪಂಚಾಯತಿಯನ್ನು ಸ್ಥಾಪಿಸಿದ ತರುವಾಯ ಕೂಡಲೇ ಗ್ರಾಮಕ್ಕಾಗಿ ಅಥವಾ ಗ್ರಾಮಗಳ ಗುಂಪಿಗಾಗಿ ಗ್ರಾಮ ಪಂಚಾಯತಿಯನ್ನು:-


(i)    ಗ್ರಾಮ ಪಂಚಾಯತಿ ಸದಸ್ಯರ ಚುನಾವಣೆಯನ್ನು ನಡೆಸಲು ಯಾವುದೇ ತೊಂದರೆಯಾದರೆ; ಅಥವಾ
(ii)    5ನೇ ಪ್ರಕರಣದ (6)ನೇ ಉಪ ಪ್ರಕರಣದ ಅಡಿಯಲ್ಲಿ ನಡೆಸಲಾದ ಎರಡು ಅನುಕ್ರಮ ಚುನಾವಣೆಗಳಲ್ಲಿ ಅಂಥ ಸದಸ್ಯರನ್ನು ಚುನಾಯಿಸಲು ವಿಫಲವಾಗಿರುವ  ಕಾರಣದಿಂದಾಗಿ; ಅಥವಾ
(iii)    ಇತರ ಯಾವುದೇ ಸಾಕಷ್ಟು ಕಾರಣದಿಂದಾಗಿ, ಅದೇನೆ ಇರಲಿ, ರಚಿಸಲು ಸಾಧ್ಯವಿಲ್ಲವೆಂದು    ಮನದಟ್ಟಾದರೆ; ಅಥವಾ
(ಬಿ) ಗ್ರಾಮ ಪಂಚಾಯತಿಗಳಿಗೆ ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲಿ ಯಾವನೇ ಸದಸ್ಯನು ಚುನಾಯಿತನಾಗದಿದ್ದರೆ ಅಥವಾ ಒಟ್ಟು ಸಂಖ್ಯೆಯ ಮೂರನೇ-ಎರಡರಷ್ಟಕ್ಕಿಂತಲೂ ಕಡಿಮೆ ಸದಸ್ಯರು ಚುನಾಯಿತರಾಗಿದ್ದರೆ,
ಆಗ ಡೆಪ್ಯುಟಿ ಕಮೀಷನರ್ ಅವರು, ಅಧಿಸೂಚನೆಯ ಮೂಲಕ:-
(i)    ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನು ಒಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡತಕ್ಕದ್ದು. ಅಂಥ ವ್ಯಕ್ತಿಗಳ ಸಂಖ್ಯೆಯು (5)ನೇ ಪ್ರಕರಣದ (1)ನೇ ಉಪ ಪ್ರಕರಣದ ಅಡಿಯಲ್ಲಿ ನಿರ್ಧರಿಸಿರುವ  ಸದಸ್ಯರ ಸಂಖ್ಯೆಗೆ ಸಮನಾಗಿರತಕ್ಕದ್ದು; ಅಥವಾ
(ii)    ಆಡಳಿತಾಧಿಕಾರಿಯನ್ನು ನೇಮಕ ಮಾಡತಕ್ಕದ್ದು.

(2) ಆಡಳಿತ ಸಮಿತಿಯ ಸದಸ್ಯರು ಅಥವಾ ಆಡಳಿತಾಧಿಕಾರಿಯು, (1)ನೇ ಉಪ ಪ್ರಕರಣ ಮೇರೆಗೆ, ಅಧಿಸೂಚನೆಯಲ್ಲಿ, ಡೆಪ್ಯುಟಿ ಕಮೀಷನರ್ ಅವರು ನಿರ್ದಿಷ್ಟಪಡಿಸಬಹುದಾದಂತೆ ಆರು ತಿಂಗಳು ಮೀರದಂಥ ಅವಧಿಯವರೆಗೆ  ಹುದ್ದೆಯ ಧಾರಣ ಮಾಡತಕ್ಕದ್ದು.

ಮೇಲ್ಕಾಣಿಸಿದ ಪ್ರಕರಣದಡಿ ಈಗಾಗಲೇ ಅಸ್ಥಿತ್ವದಲ್ಲಿರುವ ಪಂಚಾಯತಿಗಳಿಗೆ ಆಡಳಿತ ಸಮಿತಿಯ ಸದಸ್ಯರು ಅಥವಾ ಆಡಳಿತಗಾರರನ್ನು ಜಿಲ್ಲಾಧಿಕಾರಿಗಳು ನೇಮಿಸುವುದು ಕಾನೂನಾತ್ಮಕವಾಗಿ ಸಾಧ್ಯವಿಲ್ಲ.

ಆದರೆ ಸರ್ಕಾರ ಕಲಂ 321ನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರ ತನ್ನ ಆದೇಶದ ಮೂಲಕ ಸಂವಿಧಾನದ ಸದಾಶಯವನ್ನು ಧಿಕ್ಕರಿಸಿ ಸದಸ್ಯರ ನಾಮನಿರ್ದೇಶನ ಮಾಡುವ ಪ್ರಯತ್ನ ಮಾಡುತ್ತಿದೆ. ಕಲಂ 321 ಈ ಕೆಳಗಿನಂತಿದೆ.

“321. ತೊಂದರೆಗಳ ನಿವಾರಣೆ.- ಈ ಅಧಿನಿಯಮವನ್ನು ಜಾರಿಗೆ ತರುವಾಗ ಯಾವುದೇ ತೊಂದರೆಯು ಉದ್ಭವಿಸಿದಲ್ಲಿ ಸರ್ಕಾರವು, ಸಂದರ್ಭವು ಅಗತ್ಯಪಡಿಸಬಹುದಾದಂಥ, ತೊಂದರೆಯನ್ನು ನಿವಾರಿಸಲು ಅಗತ್ಯವೆಂದು ಕಂಡುಬರುವಂಥ ಏನನ್ನಾದರೂ ರಾಜ್ಯಪತ್ರದಲ್ಲಿ, ಪ್ರಕಟಿಸುವ ಆದೇಶದ ಮೂಲಕ ಮಾಡಬಹುದು”.

ಸದರಿ ಕಲಂ 321 ಸ್ಪಷ್ಟವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್  ಕಾಯ್ದೆ-1993ರಲ್ಲಿಯ ಪ್ರಕರಣಗಳನ್ನು ಅನುಷ್ಠಾನಗೊಳಿಸುವಾಗ ಯಾವುದಾದರೂ ತೊಂದರೆ ಉದ್ಭವಿಸಿದಲ್ಲಿ ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ತೊಂದರೆ ನಿವಾರಿಸಲು ಅನುಕೂಲ ಕಲ್ಪಿಸಲಾಗಿದೆ. ಆದರೆ  ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಕಾಯ್ದೆ-1993ರಡಿ ಯಾವುದೇ ಪ್ರಕರಣವು ಆಡಳಿತ ಸಮಿತಿಯ ಸದಸ್ಯರು ಅಥವಾ ಆಡಳಿತಾಧಿಕಾರಿಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿರುವುದಿಲ್ಲ.

ಕಲಂ 321ನ್ನು ಬಳಸಿ ನಾಮನಿರ್ದೇಶನ ಮಾಡುವುದು ಸಂವಿಧಾನದ 73ನೇ ತಿದ್ದುಪಡಿಗೆ ವ್ಯತಿರಿಕ್ತವಾಗಿ ಸರ್ಕಾರ ಅಧಿಕಾರ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಅಂಥ ಕ್ರಮ ಕಾನೂನಿಗೆ ಅಪಚಾರವಾಗುತ್ತದೆ. ಸರ್ಕಾರದ ರಾಜಕೀಯ ದುರುದ್ದೇಶದ ಈ ಕ್ರಮ ಯಾವುದೇ ನ್ಯಾಯಾಲಯಗಳ ಪರಿಶೀಲನೆಯಲ್ಲಿ ಮನ್ನಣೆ ಪಡೆಯುವದಿಲ್ಲ. ಕಾನೂನು ಬಾಹಿರವಾದ, ನಾಮನಿರ್ದೇಶನ ಬಲದಿಂದ ಪಂಚಾಯತಿಗಳ ಮೂಲಕ ರಾಜಕೀಯ ಮಾಡಬೇಕೆನ್ನುವ ಸರ್ಕಾರದ ದುರುದ್ದೇಶ, ಅನವಶ್ಯಕ ಗೊಂದಲ ಸೃಷ್ಠಿ ಮಾಡಲಿದೆ.

ಈಗಾಗಲೇ 300/400 ಮತದಾರರು ಇರುವ ಮತಗಟ್ಟೆಗಳ ಚುನಾವಣೆಗಳನ್ನು ದೇಶದಲ್ಲಿ ನಡೆಸಲಾಗುತ್ತಿದೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆ, ಉತ್ತರ ಕೋರಿಯಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಸ್ಪಷ್ಟ ಉದಾಹರಣೆ ಇದೆ. ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ. 

ಕಂಟೇನಮೆಂಟ್ ಸ್ಥಳ ಹೊರತುಪಡಿಸಿ ದಿನನಿತ್ಯದ ಚಟುವಟಿಕೆಗಳು, ಸಾರಾಯಿ ಅಂಗಡಿಯಿಂದ ಹಿಡಿದು ಎಲ್ಲವನ್ನು ಪ್ರಾರಂಭಿಸಿರುವಾಗ ಚುನಾವಣೆ ಮುಂದೂಡುವ ಯಾವುದೇ ಪ್ರಯತ್ನವನ್ನು ಮಾಡಬಾರದು. ಬಹುಶಃ ಪ್ರಸ್ತುತ ಯಾವುದೇ ಪಂಚಾಯತ ಪ್ರದೇಶದಲ್ಲಿ ಕಂಟೇನ್‍ಮೆಂಟ್ ಪ್ರದೇಶ ಇರುವುದಿಲ್ಲ. ಕಂಟೇನ್‍ಮೆಂಟ್ ಪ್ರದೇಶ ಇಲ್ಲದ ಪ್ರದೇಶದಲ್ಲಿ ಚುನಾವಣೆ ನಡೆಸಲು ಯಾವುದೇ  ತೊಂದರೆ ಇಲ್ಲ. ರಾಜ್ಯ ಚುನಾವಣಾ ಆಯೋಗಕ್ಕೆ ಸಂವಿಧಾನವನ್ನು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಕಾಯ್ದೆ-1993ನ್ನು  ಪಾಲಿಸಲೇಬೇಕಾದ ಉತ್ತರದಾಯಿತ್ವವಿದೆ.

ಸಂವಿಧಾನದ ಅನುಚ್ಛೇದ 243ಇ(3)ರ ಅನ್ವಯ ಹಾಗೂ ರಾಜ್ಯ ಕಾಯ್ದೆಯ 308 ಸ್ಪಷ್ಟವಾಗಿ ನಿರ್ದೇಶಿಸಿರುವಂತೆ ಪಂಚಾಯತಿಯ ಅವದಿ ಪೂರ್ಣಗೊಳ್ಳುವ ಮುನ್ನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಚುನಾವಣಾ ಆಯೋಗ ಸಂವಿಧಾನವನ್ನು ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಕಾಯ್ದೆ-1993ನ್ನು ದಿಕ್ಕರಿಸಿ ಕೆಲಸ ಮಾಡುವಂತಿಲ್ಲ. ಕಾರಣ ರಾಜ್ಯ ಚುನಾವಣಾ ಆಯೋಗ ಈ ಪರಿಸ್ಥಿತಿ ಪರಿಗಣಿಸಿ ಸಂವಿಧಾನ ಹಾಗೂ ಕಾನೂನು ವಹಿಸಿರುವ ತನ್ನ ಜವಾಬ್ದಾರಿಯನ್ನು ಅರಿತು ಚುನಾವಣೆ ನಡೆಯುವಂತೆ ಕರ್ತವ್ಯ ನಿರ್ವಹಿಸಬೇಕು.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ, ಎಚ್.ಕೆ. ಪಾಟೀಲ್, ಮಾಜಿ ಸಚಿವರು ಹಾಗೂ ಶಾಸಕರು

Trending News