ನಾನು ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ; ಸಿದ್ದರಾಮಯ್ಯ

ಲೋಕಸಭಾ ಚುನಾವಣೆ ಆಗುವವರೆಗೂ ತಾಳ್ಮೆಯಿಂದಿರಿ, ಚುನಾವಣೆಯ ನಂತರ ಕೂತು ಮಾತನಾಡೋಣ ಎಂದಿದ್ದೆ. ಆದರೆ ನಾನು ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ

Last Updated : Nov 5, 2019, 04:21 PM IST
ನಾನು ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ; ಸಿದ್ದರಾಮಯ್ಯ title=
File image

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಲು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರೇ ಕಾರಣ ಎಂದು ಆರೋಪಗಳು ಕೇಳಿ ಬರುತ್ತಿರುವುದರ ಬಗ್ಗೆ ಇಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನಮ್ಮ(ಕಾಂಗ್ರೆಸ್) ಪಕ್ಷದಲ್ಲಿ 80 ಜನ ಶಾಸಕರಿದ್ದು ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ರಲ್ಲ ಎಂದು ನಮ್ಮ‌ ಕಾರ್ಯಕರ್ತರೊಬ್ಬರು ಕೇಳಿದ್ದರು. ಅದಕ್ಕೆ ಲೋಕಸಭಾ ಚುನಾವಣೆ ಆಗುವವರೆಗೂ ತಾಳ್ಮೆಯಿಂದಿರಿ, ಚುನಾವಣೆಯ ನಂತರ ಕೂತು ಮಾತನಾಡೋಣ ಎಂದಿದ್ದೆ. ಆದರೆ ನಾನು ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಿಎಸ್‌ವೈ ಆಡಿಯೋ ಲೀಕ್ ಗೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರಿಗೆ ಕೆಟ್ಟ ಹೆಸರು ಬಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬ ಕಾರಣಕ್ಕೆ ಯಾರೋ ಆಡಿಯೋ ಲೀಕ್ ಮಾಡಿದ್ದಾರೆ. ಹಿರಿಯ ನಾಯಕರಷ್ಟೇ ಇರುವ ಬಿಜೆಪಿಯ ಕೋರ್ ಕಮಿಟಿಯಲ್ಲೇ ಯಡಿಯೂರಪ್ಪ ಅವರಿಗೆ ಆಗದವರು ಇದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸುತ್ತಾರಾ? ನನ್ನಿಂದ ಆಡಿಯೋ ರಿಲೀಸ್ ಆಗೋದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಜೆಡಿಎಸ್‌ನಿಂದ  ಬೇರೇನು ನಿರೀಕ್ಷೆ ಮಾಡಲು ಸಾಧ್ಯ?
ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumarswamy)  ಅವರೇ ಹೇಳಿದ್ದಾರೆ. ಜೆಡಿಎಸ್‌ನಿಂದ  ಬೇರೇನು ನಿರೀಕ್ಷೆ ಮಾಡಲು ಸಾಧ್ಯ? ಇನ್ನಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಬಹುದೆಂಬ ಭಯಕ್ಕೆ ಅವರು ಹಾಗೆ ಮಾತನಾಡಿರಲೂಬಹುದು. ಇದು ನಿರೀಕ್ಷಿತ ರಾಜಕೀಯ ಬೆಳವಣಿಗೆ ಎಂದು ಜೆಡಿಎಸ್ ನಡವಳಿಕೆ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು.

Trending News