"ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ"

ಸವದಿ ಎಲ್ಲಿ ಇರುತ್ತಾನೋ ನಿಷ್ಠೆ ಅಲ್ಲಿರುತ್ತದೆ. ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

Written by - Manjunath N | Last Updated : Apr 14, 2023, 07:44 PM IST
  • ನನಗೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಪರಿಚಯ.
  • ಶಿವಕುಮಾರ್ ಅವರು ಸಹಕಾರಿ ಸಚಿವರಾಗಿದ್ದಾಗ ನಾನು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ನನಗೆ ಕೆಲಸ ಮಾಡಿಕೊಡುತಿದ್ದರು.
  • ಅವರ ಪ್ರೀತಿ ವಿಶ್ವಾಸ ನನ್ನನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ತಂದು ನಿಲ್ಲಿಸಿದೆ
"ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ" title=

ಬೆಂಗಳೂರು: ಸವದಿ ಎಲ್ಲಿ ಇರುತ್ತಾನೋ ನಿಷ್ಠೆ ಅಲ್ಲಿರುತ್ತದೆ. ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗಿನ ಸಂವಾದಲ್ಲಿ ಲಕ್ಷ್ಮಣ್ ಸವದಿ ಹೇಳಿದ್ದಿಷ್ಟು... 

ಇಂದು ಕಾಂಗ್ರೆಸ್ ಸದಸ್ಯತ್ವ ಪಡೆದು, ಪಕ್ಷ ಸೇರುತ್ತಿದ್ದೇನೆ. ಇಂದು ಭಾರತ ದೇಶದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನ. ದೇಶಕ್ಕೆ ಸಂವಿಧಾನ ಕೊಟ್ಟವರ ಜನ್ಮದಿನದಂದು ಕಾಂಗ್ರೆಸ್ ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಪ್ರೇರಣೆ ಸಿಗಲೆಂದು ಪ್ರಾರ್ಥಿಸುತ್ತೇನೆ. ಸುಮಾರು 25 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಅನೇಕ ಹುದ್ದೆ ನಿಭಾಯಿಸಿ, ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದರ ಬಗ್ಗೆ ಕೆಲವರಿಗೆ ಪ್ರಶ್ನೆ ಇರಬಹುದು.

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದತಿ: ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತ-ಸಿದ್ದು

ನಿನ್ನೆ ನನ್ನ ಕ್ಷೇತ್ರದ ಕಾರ್ಯಕರ್ತರು ಮಾರ್ಗದರ್ಶಕರ ಜತೆ ಚರ್ಚೆ ಮಾಡಿ ಬಿಜೆಪಿ ತೊರೆಯುತ್ತಿರುವುದರ ಬಗ್ಗೆ ವಿವರಿಸಿ, ನನ್ನ ಮುಂದಿನ ಹೆಜ್ಜೆ ಯಾವ ಕಡೆ ಎಂದು ಕೇಳಿದಾಗ 30 ಸಾವಿರಕ್ಕೂ ಹೆಚ್ಚು ಜನ ನಿಮಗೆ ಮುಂದೆ ಭವಿಷ್ಯ ಇದ್ದರೆ ಅದು ಕಾಂಗ್ರೆಸ್ ಪಕ್ಷ ಸೇರಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಅವರ ಅಪ್ಪಣೆಯಂತೆ ಇಂದು ನಾನು ಬೆಂಗಳೂರಿಗೆ ಬಂದು ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚೆ ಮಾಡಿ ಪಕ್ಷ ಸೇರುತ್ತಿದ್ದೇನೆ. 

ಬಿಜೆಪಿಯಲ್ಲಿ ಯಾವ ರೀತಿ ನಿಷ್ಠೆಯಿಂದ ಕೆಲಸ ಮಾಡಿದ್ದೆನೋ, ಅದೇ ರೀತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಅತ್ಯಂತ ಶ್ರದ್ಧೆಯಿಂದ ಮಾಡಲು ಸಿದ್ಧನಿದ್ದೇನೆ. ಈ ನಾಯಕರೆಲ್ಲರೂ ನನ್ನನ್ನು ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡಿದ್ದಾರೆ. ನಾನು ಬೇರೆ ಪಕ್ಷದಲ್ಲಿದ್ದಾಗಿನಿಂದ ಈ ನಾಯಕರುಗಳು ನನಗೆ ಸ್ನೇಹಿತರಾಗಿದ್ದರು. ವಿಚಾರಧಾರೆಗಳು ಮಾತ್ರ ಬೇರೆ ಇತ್ತು. ರಾಜಕಾರಣದ ಉದ್ದೇಶದಿಂದ ಟೀಕೆ ಟಿಪ್ಪಣಿ ಮಾಡಿದ್ದೆವು. ಇವೆಲ್ಲವನ್ನು ಮರೆತು ಮುಂದಿನ ದಿನಗಳಲ್ಲಿ ನನ್ನನ್ನು ಮನೆ ಮಗನಂತೆ ಭಾವಿಸುವುದಾಗಿ ತಿಳಿಸಿದ್ದು, ಅದಕ್ಕೆ ಧನ್ಯವಾದಗಳು.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ : ನಾಲ್ವರು ದಂಧೆಕೋರರ ಬಂಧನ

ಸವದಿ ಸೋತಾಗ ಉಪಮುಖ್ಯಮಂತ್ರಿ ಮಾಡಿದ್ದರು, ಆದರೂ ಅವರು ಕಾಂಗ್ರೆಸ್ ಯಾಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನಾನು ಸೋತಾಗ ನಾನು ಕಾರ್ಯಕರ್ತನಾಗಿ ಸಂಘಟನೆ ಮಾಡುತ್ತಿದ್ದಾಗ ರಾಷ್ಟ್ರೀಯ ನಾಯಕರು ನನ್ನನ್ನು ಕರೆದು ರಾಜ್ಯದ ಸಚಿವ ಸ್ಥಾನದ ಜತೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರು. ಆಪರೇಷನ್ ಕಮಲದ ನಂತರ ನಡೆದ ಉಪಚುನಾವಣೆ ಸಮಯದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಹಿರಿಯರು ನನಗೆ ಬೆಂಬಲ ನೀಡುವಂತೆ ಕೇಳಿದ್ದರು. ಜತೆಗೆ 2023ರಲ್ಲಿ ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಬಿಜೆಪಿಯಲ್ಲಿ ನಾನು 13 ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೆ. ನಾನು ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನ ಕೇಳಿರಲಿಲ್ಲ. ಆದರೂ ಅವರೇ ನನಗೆ ಈ ಸ್ಥಾನ ನೀಡಿದರು. ಆದರೆ ಆ ಸ್ಥಾನದಿಂದ ಕೆಳಗಿಳಿಸುವಾಗ ಒಂದು ಮಾತು ಹೇಳಲಿಲ್ಲ.

ಒಬ್ಬ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿ ಏಕಕಾಲಕ್ಕೆ ಅಲ್ಲಿಂದ ಕೆಳಗಿಸುವುದು ಅಪಮಾನವೋ, ಸನ್ಮಾನವೋ? ಆಗ ನಾನು ಯಾವುದೇ ಟಿಕೆಟ್ ಮಾಡಲಿಲ್ಲ. ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಸಮಿತಿ ಸದಸ್ಯನಾಗಿದ್ದೆ. ಆಗ ನೀವು ಚರ್ಚೆ ಮಾಡಿದಂತೆ ನನಗೆ ಟಿಕೆಟ್ ನೀಡಬೇಕು ಎಂದು ಕೇಳಿದೆ. ನೀವು ಮಾನದಂಡಗಳ ಆಧಾರದ ಮೇಲೆ ಟಿಕೆಟ್ ನೀಡಬೇಕು ಎಂದು ಹೇಳಿದ್ದೆ. ಆದರೆ ಎಲ್ಲ ಮಾನದಂಡ ಗಾಳಿಗೆ ದೂರಿ ಟಿಕೆಟ್ ಹಂಚಿಕೆ ಮಾಡಿದ್ದು ನೋವು ತಂದಿದ್ದು, ಹೀಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ.

ನನಗೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಪರಿಚಯ. ಶಿವಕುಮಾರ್ ಅವರು ಸಹಕಾರಿ ಸಚಿವರಾಗಿದ್ದಾಗ ನಾನು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ನನಗೆ ಕೆಲಸ ಮಾಡಿಕೊಡುತಿದ್ದರು. ಅವರ ಪ್ರೀತಿ ವಿಶ್ವಾಸ ನನ್ನನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ತಂದು ನಿಲ್ಲಿಸಿದೆ. ಇಂದಿನಿಂದ ಲಕ್ಷ್ಮಣ ಸವದಿಯನ್ನು ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ ಬಳಸಿಕೊಳ್ಳಿ ಎಂದು ಕೇಳುತ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹೆಚ್ಚು ಸ್ಥಾನ ಗೆದ್ದು ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ನನ್ನ ಅಳಿಲು ಸೇವೆ ಮಾಡಲು ಸಿದ್ಧನಿದ್ದೇನೆ.

ಬಿಜೆಪಿ ಆಂತರಿಕವಾಗಿ ಏನಾಗುತ್ತಿದೆ ಎಂದು ಕೇಳಿದಾಗ, ‘ಈ ಎಲ್ಲ ಹುನ್ನಾರಕ್ಕೆ ರಾಜ್ಯದ ಜನ ಮೇ 13ರಂದು ತಕ್ಕ ಪಾಠ ಕಲಿಸುತ್ತಾರೆ’ ಎಂದು ನಂಬಿದ್ದೇನೆ.

ಲಿಂಗಾಯತ ನಾಯಕರ ಮೂಲೆಗುಂಪು ಮಾಡುತ್ತಿದ್ದಾರಾ ಎಂದು ಕೇಳಿದಾಗ, ‘ಎಲ್ಲ ಪಕ್ಷದಲ್ಲೂ ಲಿಂಗಾಯತ ನಾಯಕರಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಿಂಗಾಯತ ನಾಯಕರು ಆಗಮಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ವಿರುದ್ಧ ಪ್ರಚಾರ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲೇ ಪ್ರಚಾರಕ್ಕೆ ಸೂಚನೆ ನೀಡಿದರೂ ನಾನು ಪ್ರಚಾರ ಮಾಡಲು ಸಿದ್ಧ’ ಎಂದು ಸ್ಪಷ್ಟನೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News