Karnataka Assembly Bypolls Results 2021: 2023 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನುಡಿ ಎಂದೇ ಪರಿಗಣಿಸಲಾಗಿರುವ ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಕ್ಕೆ (Karnataka Bypolls Results 2021) ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
ವಿಜಯಪುರ ನಗರದ ಸೈನಿಕ ಶಾಲೆಯ ಒಡೆಯರ ಹೌಸ್ನಲ್ಲಿ ಸಿಂದಗಿ ಕ್ಷೇತ್ರದ ಮತ ಎಣಿಕೆಗಾಗಿ ಜಿಲ್ಲಾಡಳಿತ ಸಜ್ಜಾಗಿದ್ದು, ಒಟ್ಟು 22 ಸುತ್ತು ಮತ ಎಣಿಕೆ ನಡೆಯಲಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಹಾನಗಲ್ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗಾಗಿ ಹಾವೇರಿ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ (ಅಕ್ಟೋಬರ್ 30) ಮತದಾನ ನಡೆದಿತ್ತು. ರಾಜ್ಯ ಚುನಾವಣಾ ಆಯೋಗದ ಪ್ರಕಾರ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 69% ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 84% ಮತದಾನವಾಗಿದೆ. ಸಿಂದಗಿಯಿಂದ ಆರು ಜನರು ತಮ್ಮ ಅದೃಷ್ಟ ಪರೀಕ್ಷಿಸಿದ್ದು ಹಾನಗಲ್ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಇದನ್ನೂ ಓದಿ- ಪಟಾಕಿ ಯಾರ್ದಾದ್ರೂ ಆಗಿರ್ಲಿ ಹಚ್ಚೋರು ಬಿಜೆಪಿಯವ್ರೇ: ‘ನಮೋ’ ನಮಃ ಎಂದು ಡಿಕೆಶಿ ಟೀಕೆ
ಸಿಂಧಗಿ (Sindagi By Election)ಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ರಮೇಶ್ ಭೂಸನೂರ, ಕಾಂಗ್ರೆಸ್‍ನಿಂದ ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ, ಜೆಡಿಎಸ್‍ನಿಂದ ನಾಜಿಯಾ ಶಕೀಲಾ ಅಂಗಡಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹಾನಗಲ್‍ನಲ್ಲಿ ಬಿಜೆಪಿಯಿಂದ ವಿಧಾನಪರಿಷತ್ ಮಾಜಿ ಸದಸ್ಯಶಿವರಾಜ ಶರಣಪ್ಪ ಸಜ್ಜನರ್, ಕಾಂಗ್ರೆಸ್‍ನಿಂದ ಶ್ರೀನಿವಾಸ್ ಮಾನೆ ಮತ್ತು ಜೆಡಿಎಸ್‍ನಿಂದ ನಿಯಾಜ್ ಶೇಖ್ ಸೇರಿದಂತೆ 13 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದರು. ಇವರೆಲ್ಲರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ವಿಧಾನಸಭಾ ಚುನಾವಣಾ ಫಲಿತಾಂಶವು (Karnataka Bypolls Results 2021) ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಒಂದು ಸವಾಲು ಎಂದು ಪರಿಗಣಿಸಲಾಗಿದೆ. ಈ ಉಪಚುನಾವಣೆಯ ಫಲಿತಾಂಶ ಜನರು ಬಸವರಾಜ ಬೊಮ್ಮಾಯಿ ಅವರ ಆಡಳಿತಕ್ಕೆ ನೀಡುವ ಫಲಿತಾಂಶ ಎಂದೇ ಬಣ್ಣಿಸಲಾಗುತ್ತಿದೆ. ಅದರಲ್ಲೂ ತಮ್ಮ ಸ್ವಕ್ಷೇತ್ರದ ನೆರೆಯ ಕ್ಷೇತ್ರವಾದ ಹಾನಗಲ್ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಬೊಮ್ಮಾಯಿ ಅವರಿಗೆ ಬಹಳ ಮುಖ್ಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸಿದ್ಧರಾಮಯ್ಯ ಆಗ್ರಹ
ಈ ಎರಡೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಜೆಡಿಎಸ್ ಸಿಂದಗಿ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸುವ ಭರವಸೆಯನ್ನು ಹೊಂದಿದೆ. ಎರಡೂ ಕ್ಷೇತ್ರಗಳಲ್ಲಿ ಜನರು ಯಾರಿಗೆ ಮಣೆಹಾಕಿದ್ದಾರೆ? ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ