ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ: ಸಿದ್ದರಾಮಯ್ಯ ಆರೋಪ

ಕಲಬುರಗಿಯಲ್ಲಿ ನಮ್ಮ ಶಾಸಕಿಯ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಿದ್ದರೂ ನಮ್ಮ ಸಾಧನೆ ಸಮಾಧಾನಕರ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

Written by - Zee Kannada News Desk | Last Updated : Sep 6, 2021, 09:15 PM IST
  • ಹುಬ್ಬಳ್ಳಿ-ಧಾರವಾಡದಲ್ಲಿ ನಾವು ಬಹುಮತ ಗಳಿಸುವ ನಿರೀಕ್ಷೆಯಿತ್ತು, ಆದರೆ ಅತಂತ್ರ ಫಲಿತಾಂಶ ಬಂದಿದೆ
  • ಜನರ ಒಲವು ಬಿಜೆಪಿ ಪರ ಎಂದಿರುವ ನಳೀನ್ ಕುಮಾರ್ ಕಟೀಲ್ ಹೇಳಿಕೆಯು ರಾಜಕೀಯ ಜ್ಞಾನದ ಕೊರತೆ ತೋರಿಸುತ್ತದೆ
  • ತಾಲಿಬಾನಿಗಳಿಂದ ಭಾರತದಲ್ಲಿ ತೈಲ ಬೆಲೆಯೇರಿಕೆ ಆಗುತ್ತಿದೆ ಎಂಬ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ
ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ: ಸಿದ್ದರಾಮಯ್ಯ ಆರೋಪ    title=
ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ (Photo Courtesy: @Zee News)

ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣೆ(Karnataka Municipal Election Results 2021)ಯಲ್ಲಿ ನಮ್ಮ ಸಾಧನೆ ಸಮಾಧಾನಕರವಾಗಿದೆ. ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಇಂತಹ ಚುನಾವಣೆಗಳಲ್ಲಿ ಹೆಚ್ಚು ಅನುಕೂಲಗಳಿವೆ. ಬಿಜೆಪಿ(BJP)ಯ ಸಂಪನ್ಮೂಲಕ್ಕೆ ನಾವು ಸಾಟಿಯಲ್ಲ, ಅದೇ ರೀತಿ ಆಡಳಿತ ಯಂತ್ರವನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಕಲಬುರಗಿಯಲ್ಲಿ ನಮ್ಮ ಶಾಸಕಿಯ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಿದ್ದರೂ ನಮ್ಮ ಸಾಧನೆ ಸಮಾಧಾನಕರ’ ಅಂತಾ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

‘ಮಹಾನಗರ ಪಾಲಿಕೆ ಚುನಾವಣೆ(Municipal Election)ಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿದ ಎಲ್ಲಾ ಮತದಾರರಿಗೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು. ಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳಿಗೂ ಅಭಿನಂದನೆಗಳು. ಸೋಲು-ಗೆಲುವುಗಳು ನಿರೀಕ್ಷಿತ, ಹೋರಾಟ ನಿರಂತರ. ಬೆಳಗಾವಿ ಮಹಾನಗರ ಪಾಲಿಕೆಯ ಫಲಿತಾಂಶ ಅನಿರೀಕ್ಷಿತ. 58 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ನಾವು ಗೆದ್ದಿದ್ದು, ಬಿಜೆಪಿ ಪಕ್ಷ ಬಹುಮತ ಗಳಿಸಿದೆ. ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಶಾಸಕರು ಹಾಗೂ ಸಂಸದರು ಇಲ್ಲದಿರುವುದು ಕೂಡಾ ನಮ್ಮ ಹಿನ್ನಡೆಗೆ ಕಾರಣ’ ಅಂತಾ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಸಾವು ಖಚಿತ, ಶವಸಂಸ್ಕಾರ ಉಚಿತ!: ಕಾಂಗ್ರೆಸ್ ವ್ಯಂಗ್ಯ

‘ಹುಬ್ಬಳ್ಳಿ-ಧಾರವಾಡದಲ್ಲಿ ನಾವು ಬಹುಮತ ಗಳಿಸುವ ನಿರೀಕ್ಷೆಯಿತ್ತು, ಆದರೆ ಅತಂತ್ರ ಫಲಿತಾಂಶ ಬಂದಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಹಲವು ಮಂದಿ ಶಾಸಕರ ಹೊರತಾಗಿಯೂ ಬಿಜೆಪಿಯದ್ದು ದೊಡ್ಡ ಗೆಲುವಲ್ಲ, ಕೆಲವೇ ಕ್ಷೇತ್ರಗಳ ಅಂತರದಲ್ಲಿ ನಾವು ಬಹುಮತ ಕಳೆದುಕೊಂಡದ್ದು ಕಡಿಮೆ ಸಾಧನೆಯೆನೂ ಅಲ್ಲ. ಪಾಲಿಕೆ ಚುನಾವಣಾ ಫಲಿತಾಂಶ ಜನರ ಒಲವು ಬಿಜೆಪಿ ಪರವಾಗಿರುವುದನ್ನು ತೋರಿಸುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel) ಹೇಳಿಕೆಯು ಅವರ ರಾಜಕೀಯ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ಬೆಳಗಾವಿ ಬಿಟ್ಟರೆ ಬೇರೆಲ್ಲಿ ಬಿಜೆಪಿ ಬಹುಮತ ಪಡೆದಿದೆಯಂತೆ?’ ಅಂತಾ ಅವರು ಪ್ರಶ್ನಿಸಿದ್ದಾರೆ.

‘ನಾನು ಚುನಾವಣಾ ಪ್ರಚಾರಕ್ಕೆ ಹೋಗದಿರುವುದು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಂತೆ ಎಂಬ ಕಟೀಲ್ ಹೇಳಿಕೆ ಎಂದಿನಂತೆ ಒಂದು ಬಾಲಿಷ ಹೇಳಿಕೆ. ಅವರ ಮಾತಿನ ಪ್ರಕಾರ ಬಿಜೆಪಿ(BJP) ಗೆಲುವಿನ ಕಾರಣ ನಾನು ಎಂದಾಗುವುದಿಲ್ಲವೇ? ನಾನು ಈ ಬಾರಿ ಮಾತ್ರವಲ್ಲ ಹಿಂದೆಯೂ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಹೋಗಿಲ್ಲ. ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಲ್ಲವೇ? ಅವರು ಎಷ್ಟು ಕಡೆ ಪ್ರಚಾರಕ್ಕೆ ಹೋಗಿದ್ದಾರೆ. ಅವರನ್ನು ಅವರ ಪಕ್ಷದಲ್ಲಿ ಕೇಳುವವರಿಲ್ಲ. ನನ್ನನ್ನು ಟೀಕಿಸಿದರೆ ಪ್ರಚಾರ ಸಿಗುತ್ತೆ ಎಂದು ಟೀಕಿಸುತ್ತಾರೆ ಅಷ್ಟೆ’ ಅಂತಾ ಸಿದ್ದರಾಮಯ್ಯ ಕುಟುಕಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ ವರದಿ ಒಪ್ಪಿಕೊಳ್ಳದ ಬಿಜೆಪಿ ನಾಯಕರಿಂದ ಕುಂಟುನೆಪ: ಸಿದ್ದರಾಮಯ್ಯ

‘ತಾಲಿಬಾನಿ(Taliban)ಗಳಿಂದ ಭಾರತದಲ್ಲಿ ತೈಲ ಬೆಲೆಯೇರಿಕೆ ಆಗುತ್ತಿದೆ ಎಂಬ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗದೆ ಇದ್ದಾಗ ದೇಶದೊಳಗೆ ಮಾತ್ರ ತೈಲಬೆಲೆ ಏರಿದರೆ ಅದಕ್ಕೆ ತಾಲಿಬಾನ್ ಹೇಗೆ ಕಾರಣವಾಗುತ್ತೆ?’ ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ‘ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಮೀಸಲಾತಿ ಆಯೋಗ ರಚನೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈಗಲೇ ಚುನಾವಣೆ ನಡೆಸಲು ಬಿಜೆಪಿ ಸರ್ಕಾರಕ್ಕೆ ಧೈರ್ಯವಿಲ್ಲ. ಸೋಲಿನ ಭಯದಿಂದ ಚುನಾವಣೆ ಮುಂದೂಡಲು ಈ ರೀತಿಯ ನಾಟಕ ಮಾಡುತ್ತಿದೆ’ ಅಂತಾ ಅವರು ವ್ಯಂಗ್ಯವಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News