ಚೆಲುವರಾಯಸ್ವಾಮಿ ಓರ್ವ ರಾಜಕೀಯ ಶಕುನಿ!: ಶಾಸಕ ಸುರೇಶ್‌ ಗೌಡ ಕಿಡಿ

Mandya Politics: ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ. ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನು ಅವರಿಂದ ಕಲಿಯುವ ಅವಶ್ಯಕತೆ ಇಲ್ಲ ಅಂತಾ ಸುರೇಶ್ ಗೌಡ ಹೇಳಿದ್ದಾರೆ.

Written by - Puttaraj K Alur | Last Updated : Dec 23, 2022, 10:39 AM IST
  • ಜೆಡಿಎಸ್​ನ ‘ಪಂಚರತ್ನ ಯಾತ್ರೆ’ ಕುರಿತು ಕಾಂಗ್ರೆಸ್ ಮಾಜಿ ಶಾಸಕ ಚೆಲುವರಾಯಸ್ವಾಮಿ ವ್ಯಂಗ್ಯ
  • ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ನಾಗಮಂಗಲದ ಶಾಸಕ ಸುರೇಶ್ ಗೌಡ
  • ಚೆಲುವರಾಯಸ್ವಾಮಿ ಒಬ್ಬ ರಾಜಕೀಯ ಶಕುನಿ ಎಂದು ಕಿಡಿಕಾರಿದ ಶಾಸಕ ಸುರೇಶ್ ಗೌಡ
ಚೆಲುವರಾಯಸ್ವಾಮಿ ಓರ್ವ ರಾಜಕೀಯ ಶಕುನಿ!: ಶಾಸಕ ಸುರೇಶ್‌ ಗೌಡ ಕಿಡಿ title=
ಚೆಲುವರಾಯಸ್ವಾಮಿಗೆ ಸುರೇಶ್ ಗೌಡ ತಿರುಗೇಟು

ಮಂಡ್ಯ: ಜೆಡಿಎಸ್​ನ ‘ಪಂಚರತ್ನ ಯಾತ್ರೆ’ ಕುರಿತು ಕಾಂಗ್ರೆಸ್ ಮಾಜಿ ಶಾಸಕ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕ ಸುರೇಶ್ ಗೌಡ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ಮದ್ದೂರಿನ ಮರಳಿಗ ಗ್ರಾಮದಲ್ಲಿ ಮಾತನಾಡಿರುವ ನಾಗಮಂಗಲ ಶಾಸಕ ಸುರೇಶ್ ಗೌಡ, ‘ಚಲುವರಾಯಸ್ವಾಮಿ ಒಬ್ಬ ರಾಜಕೀಯ ಶಕುನಿ! ಶಕುನಿ ಪಾತ್ರ ಮಾಡ್ಕೊಂಡು ಚಲುವರಾಯಸ್ವಾಮಿ ಆಟವಾಡ್ತಿದ್ದಾರೆ’ ಅಂತಾ ಕಿಡಿಕಾರಿದ್ದಾರೆ.

‘ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ. ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನು ಅವರಿಂದ ಕಲಿಯುವ ಅವಶ್ಯಕತೆ ಇಲ್ಲ. ಅವರು ಅಷ್ಟು ಬುದ್ಧಿವಂತರಾಗಿದ್ರೆ ಅವ್ರನ್ನು ಜನರು ಮನೆಗೆ ಯಾಕೆ ಕಳುಹಿಸ್ತಿದ್ರು? ನಮಗೆ ಅವರು ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಅವರು ಒಳ್ಳೆಯ ಬುದ್ಧಿ ಕಲಿತರೆ ಅಷ್ಟೆ ಸಾಕು’ ಅಂತಾ ಸುರೇಶ್ ಗೌಡ ಹೇಳಿದ್ದಾರೆ.

‘ಅಂತ್ಯ ಕಾಲದಲ್ಲಿ ಪಾಪ ಬಾಯಿಗೆ ಬಂದಾಗೆ ಬಡಿದುಕೊಳ್ತಿದ್ದಾರೆ ಬಡ್ಕೊಳ್ಳಿ. ಅಧಿವೇಶನದಲ್ಲಿ ಅಷ್ಟೆಲ್ಲಾ ಹೋರಾಟ ಮಾಡ್ತೇವೆ ಈ ಕಿವುಡು ಸರ್ಕಾರಕ್ಕೆ ನಾವು ಏನು ಮಾಡೋದು? ನಮ್ಮ ಸರ್ಕಾರ ತೆಗೆಯುವುದಕ್ಕೆ ಚಲುವರಾಯಸ್ವಾಮಿ ಪಾತ್ರ ಇದೆ. ಅವರಿಗೆ ಯೋಗ್ಯತೆ ಇಲ್ಲ, ಹೇಳುವುದು ಒಂದು ಮಾಡೋದು ಇನ್ನೊಂದು. ಅದಕ್ಕೆ ಅವರು ಬೆಳಗ್ಗೆ ಕಾಂಗ್ರೆಸ್, ರಾತ್ರಿ ಬಿಜೆಪಿ’ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: COVID‑19 Guidelines : ರಾಜ್ಯ ಸರ್ಕಾರದಿಂದ ಅಧಿಕೃತ ಕೊರೋನಾ ಮಾರ್ಗಸೂಚಿ ಬಿಡುಗಡೆ!

‘ಜೆಡಿಎಸ್ ಸರ್ಕಾರ ತೆಗೆಯುವುದರಲ್ಲಿ ಚಲುವರಾಯಸ್ವಾಮಿ ಪಾತ್ರ ಇತ್ತು. ಈ ಬಗ್ಗೆ ಅವರು ಪ್ರಮಾಣ ಮಾಡಲಿ ನನ್ನ ಕುತಂತ್ರ ಇಲ್ಲ ಅಂತಾ. ಅವರು ಶಕುನಿ ಪಾತ್ರ ಮಾಡ್ಕೊಂಡು ಆಟವಾಡ್ತಿದ್ದಾರೆ. ಅಧಿವೇಶನಕ್ಕೆ ನಮ್ಮವರು ಹೋಗಿದ್ದಾರೆ, ನಾವು ನಾಳೆ ಹೋಗ್ತೇವೆ. ಎತ್ತಿಕಟ್ಟುವ ಕೆಲಸ ಮಾಡ್ಕೊಂಡು ನಿಂತಿದ್ದಾರೆ. ಮಂಡ್ಯ ಜಿಲ್ಲೆ ಹಿಂದಿನ ಚುನಾವಣೆಯಲ್ಲಿ ನಡೆದ ಕುತಂತ್ರ ಇವಾಗ ನಡೆಯಲ್ಲ. ಜನರೇ ಅವರಿಗೆ ಚೆನ್ನಾಗಿ ಬುದ್ಧಿ ಕಲಿಸುತ್ತಾರೆ’ ಅಂತಾ ಕುಟುಕಿದ್ದಾರೆ.

ವರಿಷ್ಠರ ತೀರ್ಮಾನವೇ ಅಂತಿಮ

ಇನ್ನು ಮಂಡ್ಯ ಜಿಲ್ಲೆಯ ಟಿಕೆಟ್ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿರುವ ಶಾಸಕ ಸುರೇಶ್ ಗೌಡ, ವರಿಷ್ಠರ ತೀರ್ಮಾನವೇ ಅಂತಿಮವೆಂದು ಹೇಳಿದ್ದಾರೆ. ‘ಎಲ್ಲಾ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಸೋಲಿನಿಂದ ಬಹಳ ಬುದ್ಧಿ ಕಲ್ತಿದ್ದೇವೆ. ನಾವೆಲ್ಲಾ ಒಗ್ಗಟ್ಟಿನಿಂದ ಈ ಬಾರಿ ಚುನಾವಣೆ ಎದುರಿಸುತ್ತೇವೆ. ‘ಪಂಚರತ್ನ ಯಾತ್ರೆ’ ರಾಜ್ಯದ ಜನತೆಗೆ ಅತ್ಯವಶ್ಯಕವಾಗಿದೆ. ಯಾತ್ರೆಯಲ್ಲಿ ನಿಖಿಲ್ ಎಂಟ್ರಿ ಕೊಟ್ಟಿದ್ದಾರೆ, ನಾವು ಜೊತೆಯಲ್ಲೇ ಇರ್ತೇವೆ’ ಎಂದು ಸುರೇಶ್ ಗೌಡ ಹೇಳಿದ್ದಾರೆ.

ರಾಮನಗರ ಜನ ಆಶೀರ್ವಾದ ಮಾಡ್ತಾರೆ

ಇನ್ನು ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿರುವ ಶಾಸಕ ಸುರೇಶ್ ಗೌಡ, ‘ರಾಮನಗರ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಅನಿತಕ್ಕ ಅವರನ್ನು ಬೆಳೆಸಿದ ಜಿಲ್ಲೆ. ನಿಖಿಲ್ ನಮ್ಮ ಯುವ ನಾಯಕರು, ಅಲ್ಲಿ ಯಾರನಾದ್ರು ನಿಲ್ಲಿಸಬೇಕಲ್ವಾ? ಅದಕ್ಕೆ ಹೇಳಿದ್ದಾರೆ, ಜನರು ತೀರ್ಮಾನ ಮಾಡಿದ್ದಾರೆ ಅದಕ್ಕೆ ನಿಲ್ತಾರೆ. ರಾಮನಗರದ ಜನರು ಅವರಿಗೆ ಆಶೀರ್ವಾದ ಮಾಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಮೇಲೆ ಮಾಜಿ ಸಚಿವ ಡಿ ಸುಧಾಕರ್ ಬೆಂಬಲಿಗರಿಂದ ಹಲ್ಲೆ ಆರೋಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News