ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 483 ಏತ ನೀರಾವರಿ ಯೋಜನೆಗಳಿವೆ. ಇವುಗಳ ನಿರ್ವಹಣೆಗಾಗಿ ಪ್ರತಿ ತಿಂಗಳು ಸುಮಾರು 10 ರಿಂದ 12 ಕೋಟಿ ವಿದ್ಯುತ್ ಬಿಲ್ಲನ್ನ ಭರಿಸಲಾಗುತ್ತಿದೆ. ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೆರೆಗಳ ಮೇಲೆ ಫ್ಲೋಟಿಂಗ್ ಸೋಲಾರ್ ಪ್ಯಾನಲ್ ಅಳವಡಿಸುವ ಸಾಧ್ಯತೆಗಳ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜ್ ಅವರು ಹೇಳಿದರು.
ಇಂದು ವಿಕಾಸಸೌಧದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯ ಸರ್ವತೋಮುಖ ಅಭಿವೃದ್ದಿಯ ನಿಟ್ಟಿನಲ್ಲಿ ಚಿಂತನೆಗಳು ಪ್ರಾರಂಭವಾಗಿವೆ. ಸಣ್ಣ ನೀರಾವರಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಂರ್ತಜಲ ಹೆಚ್ಚಿಸುವುದು ಮತ್ತು ಕೆರೆಗಳ ಅಭಿವೃದ್ದಿ ಹಾಗೂ ಸಂರಕ್ಷಣೆ ಮಾಡುವುದು ಸಾಧ್ಯವಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿ 483 ಏತ ನೀರಾವರಿ ಯೋಜನೆಗಳಿದ್ದು, ಇವುಗಳ ನಿರ್ವಹಣೆಯಲ್ಲಿ ಆಗುತ್ತಿರುವ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುತ್ತಿದೆ. ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಕೆಯಿಂದ ಆಗಬಹುದಾದ ಅನುಕೂಲತೆಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಪರಿಷತ್‌ನಲ್ಲೂ ಪಾಸಾದ ನೋಂದಣಿ-ಭೂ ಕಂದಾಯ ತಿದ್ದುಪಡಿ ವಿಧೇಯಕ..!
ಕೆರೆಗಳ ಒತ್ತುವರಿ ತೆರವಿಗೆ ಸರ್ವೆ: ರಾಜ್ಯದಲ್ಲಿರುವ ಕೆರೆಗಳ ಒತ್ತುವರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಕೆರೆಗಳ ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕ್ರಮ: ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಏತ ನೀರಾವರಿ ಯೋಜನೆಗಳಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಅನುಕೂಲ ಹೊಂದುತ್ತಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಫಲಪ್ರದವಾಗಿವೆ ಎನ್ನುವುದು ಇದರಿಂದ ಗೋಚರವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ರಾಯಚೂರು ಜಿಲ್ಲೆ ಮತ್ತು ನಗರದ ಸಮಗ್ರ ಅಭಿವೃದ್ದಿ: ರಾಯಚೂರು ಜಿಲ್ಲೆ ಮತ್ತು ನಗರದ ಸಮಗ್ರ ಅಭಿವೃದ್ದಿ ನಮ್ಮ ಮೊದಲ ಆದ್ಯತೆ ಆಗಿದೆ. ಇದಕ್ಕೆ ಒಂದು ಹೊಸ ಯೋಜನೆ ಮತ್ತು ವಿಷನ್ ನ ಅಗತ್ಯತೆ ಇದೆ. ಈ ಕಾರ್ಯ ಕೇವಲ ಒಬ್ಬರಿಂದ ಆಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯವಿದೆ. ಜಿಲ್ಲೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ, ಮೂಲಭೂತ ಸೌಕರ್ಯ, ಕೃಷಿಗೆ ಅಗತ್ಯ ಸಹಾಯ ಮತ್ತು ನೀರಾವರಿ ಸೌಲಭ್ಯ ಹೆಚ್ಚಳಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಅಧಿವೇಶನದ ನಂತರ ಜಿಲ್ಲಾಡಳಿತದ ಜೊತೆ ಸಭೆಯನ್ನು ನಡೆಸಲಾಗುವುದು. ಅಲ್ಲದೇ, ನಗರದ ಅಭಿವೃದ್ದಿಗೆ ಸಂಬಂಧಿಸಿದಂತೆಯೂ ಪ್ರತ್ಯೇಕ ಸಭೆಯನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಜುಲೈ ಅಂತ್ಯಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ದಿನ ಹೆಚ್ಚಾಗಲಿದೆ ವೇತನ!
ರಾಯಚೂರು ಒ ಪಿ ಇ ಸಿ ಆಸ್ಪತ್ರೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೂ ಚರ್ಚಿಸಲಾಗಿದ್ದು ಅಗತ್ಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಕೆಕೆಆರ್‌ಡಿಬಿ ಯ ಸಮಿತಿ ರಚನೆಯಾಗಿದ್ದು, ಇದರ ಸದಸ್ಯನಾಗಿ ಹೆಚ್ಚಿನ ಅನುದಾನ ಪಡೆಯುವ ಪ್ರಯತ್ನ ಮಾಡಲಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ಅವಲಂಬಿತ ಕೈಗಾರಿಕೆಗಳು ಹೆಚ್ಚಾಗಿವೆ. ಕೃಷಿಯ ಅಭಿವೃದ್ದಿಗೆ ಒತ್ತು ನೀಡುವುದರಿಂದ ಪರೋಕ್ಷವಾಗಿ ಈ ಉದ್ಯಮಗಳಿಗೂ ಪುಷ್ಠಿ ನೀಡಿದಂತಾಗುತ್ತದೆ. ಅಲ್ಲದೇ, ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳ ಅಭಿವೃದ್ದಿಗೆ ಹಾಗೂ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ಹಿನ್ನಲೆಯಲ್ಲಿ ಕೈಗಾರಿಕಾ ಸಚಿವರೊಂದಿಗೂ ಚರ್ಚಿಸಿದ್ದು, ಅಧಿವೇಶನದ ನಂತರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದರು.
ಇದನ್ನೂ ಓದಿ: KAS ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಯಚೂರು ಜಿಲ್ಲೆಯಲ್ಲಿ ಕೆರೆಗಳಲ್ಲಿ ನೀರು ತುಂಬಿಸುವ ಕಾರ್ಯ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಿರುವಂತೆ ರಾಯಚೂರು ಜಿಲ್ಲೆಯಲ್ಲೂ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆಗೆ ತಜ್ಞರ ತಂಡಕ್ಕೆ ಸೂಚನೆ ನೀಡಲಾಗಿದೆ. ನಾಲಾಗಳಲ್ಲಿ ಹರಿಯುವ ಹೆಚ್ಚಿನ ನೀರಿನ ಬಳಕೆ ಸೇರಿದಂತೆ ಇನ್ನಿತರ ಸಾಧ್ಯತೆಗಳ ಬಗ್ಗೆ ತಜ್ಞರು ವರದಿ ನೀಡಲಿದ್ದು. ವರದಿಯ ಆಧಾರದ ಮೇಲೆ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಯಚೂರು ನಗರದ ಸೌಂದರ್ಯ ಹೆಚ್ಚಳಕ್ಕೆ ಕ್ರಮ: ರಾಯಚೂರು ನಗರದಲ್ಲಿ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅಳವಡಿಸುವ ಅಗತ್ಯತೆ ಇದೆ. ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮೂಲಭೂತ ಸೌಕರ್ಯ ಹೆಚ್ಚಿಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಲಾಗುವುದು ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.