ನವದೆಹಲಿ: ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮಾತ್ರ ನನ್ನ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ.
ಈ ಕುರಿತಾಗಿ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು 'ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಕರ್ನಾಟಕದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಅವರು ನಾಯಕತ್ವ ವಹಿಸಿದ್ದರು.ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಪ್ರತಿ ಜಿಲ್ಲೆಯಲ್ಲಿ ಆ.1 ರಿಂದ ಆ.10 ರವರೆಗೆ ಕನಿಷ್ಠ 75 ಕಿ. ಮೀ ಪಾದಯಾತ್ರೆ ಮಾಡಲು ವರಿಷ್ಠರು ಸೂಚಿಸಿದ್ದಾರೆ. ಈ ಕಾರ್ಯಕ್ರಮ ಕುರಿತು ವರದಿ ಕೇಳಿದ್ದಾರೆ" ಎಂದು ಹೇಳಿದರು.
ಶಾಸಕರು, ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳಿಗೆ ಜವಾಬ್ದಾರಿ ವಹಿಸಿದ ಮಾಹಿತಿಯನ್ನು ನಮ್ಮ ನಾಯಕರಿಗೆ ನೀಡಿದ್ದೇನೆ.'
ಇದನ್ನೂ ಓದಿ: Kick Boxing Death: ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ಮೈಸೂರಿನ ಕಿಕ್ ಬಾಕ್ಸರ್ ಸಾವು..!
ಭಾರತ್ ಜೋಡೋ ಕಾರ್ಯಕ್ರಮ ಕುರಿತು ಕೇಳಿದ ಪ್ರಶ್ನೆಗೆ, 'ಸಾಕಷ್ಟು ದಿನಗಳಿಂದ ಯಾವ ಭಾಗದಿಂದ ರಾಜ್ಯಕ್ಕೆ ಯಾತ್ರೆ ಪ್ರವೇಶಿಸಬೇಕು ಎಂಬ ಚರ್ಚೆ ಇತ್ತು. ಮುಳಬಾಗಿಲು, ಹೊಸೂರು, ಚಾಮರಾಜನಗರ, ಮಂಗಳೂರು ಕಡೆಗಳಿಂದ ಈ ಯಾತ್ರೆ ರಾಜ್ಯ ಪ್ರವೇಶಿಸುವ ಅವಕಾಶ ಇತ್ತು. ಅಂತಿಮವಾಗಿ ಕೇರಳದ ವಯನಾಡು ಮಾರ್ಗವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುವುದು ಎಂದು ತೀರ್ಮಾನವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 21 ದಿನ ಪಾದಯಾತ್ರೆ ನಡೆಯಲಿದೆ. ಇದಕ್ಕಿಂತಲೂ ಹೆಚ್ಚು ದಿನ ನಡೆಯಬಹುದು. ಕೆಲವು ದಿನ 24-25 ಕಿ. ಮೀ ನಿಗದಿ ಮಾಡಿದ್ದು, ನಾವು ನಮ್ಮ ಅನುಭವದ ಮೇಲೆ ಸಲಹೆಗಳನ್ನು ನೀಡಿದ್ದೇವೆ.
ರಾಹುಲ್ ಗಾಂಧಿ ಅವರು ನಿತ್ಯ 40 ಕಿ.ಮೀ ನಡೆಯಲು ತಯಾರಿದ್ದು, ಇತರರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ನಿತ್ಯ 20 ಕಿ.ಮೀ. ಆಸುಪಾಸಿನಲ್ಲಿ ಸೀಮಿತ ಮಾಡಿಕೊಳ್ಳಲು ಸಲಹೆ ನೀಡಿದ್ದೇನೆ.
ನಾವು ಬಳ್ಳಾರಿ, ಇತ್ತೀಚೆಗೆ ಮೇಕೆದಾಟು ಪಾದಯಾತ್ರೆಯನ್ನು ಮಾಡಿದ್ದು ಅದರ ವಿವರಣೆ ನೀಡಿದ್ದೇನೆ.
ಭಾರತ್ ಜೋಡೋ ಯಾತ್ರೆ ನಮ್ಮ ರಾಜ್ಯದಲ್ಲಿ ಬಳ್ಳಾರಿ ಮೂಲಕ ಆಂಧ್ರ ಪ್ರದೇಶಕ್ಕೆ ಹೋಗಿ ರಾಯಚೂರು ಮೂಲಕ ತೆಲಂಗಾಣ ರಾಜ್ಯ ಪ್ರವೇಶ ಮಾಡಲಿದೆ. ಪಾದಯಾತ್ರೆ ನಕ್ಷೆ ವಿಚಾರ ನಮ್ಮ ತೀರ್ಮಾನಕ್ಕೆ ಬಿಟ್ಟಿದ್ದು, ನಮ್ಮ ನಾಯಕರ ಜತೆ ತೀರ್ಮಾನಿಸಿ ನಂತರ ಅದನ್ನು ಬಹಿರಂಗಪಡಿಸುತ್ತೇನೆ. ರಾಜ್ಯದಲ್ಲಿ ಒಟ್ಟು 510 ಕಿ.ಮೀ ಗೂ ಹೆಚ್ಚು ದೂರ ಸಾಗಲಿದೆ.
ನಾಳಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಝೂಮ್ ಮೂಲಕ ರಾಜ್ಯ ನಾಯಕರ ಜತೆ ಚರ್ಚೆ ಮಾಡಲಿದ್ದಾರೆ.
23 ರಂದು ಸೋನಿಯಾ ಗಾಂಧಿ ಅವರ ವಿಚಾರಣೆ ಇದ್ದು, ಆಗ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಾಗುವುದು' ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ಪ್ರಶ್ನೆಗೆ, ' ಈ ವಿಚಾರವಾಗಿ ನಾವು ಎಲ್ಲ ನಾಯಕರು ಕೂತು ಚರ್ಚೆ ಮಾಡುತ್ತೇವೆ. ಎಲ್ಲ ರಾಜ್ಯದಿಂದಲೂ ರಾಹುಲ್ ಗಾಂಧಿ ಅವರ ಜತೆ ಯಾರೆಲ್ಲಾ ಹೆಜ್ಜೆ ಹಾಕಬೇಕು ಎಂಬ ಪಟ್ಟಿ ಸಿದ್ಧವಾಗಲಿದೆ. ನಾವು ನಮ್ಮ ರಾಜ್ಯದಲ್ಲಿ ನಡೆಯುತ್ತೇವೆ. ಇದು ದೇಶದ ಕಾರ್ಯಕ್ರಮ' ಎಂದು ತಿಳಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಕಾರ್ಯಕ್ರಮ ಚರ್ಚೆ ಆಗುತ್ತಿದೆ ಎಂಬ ಪ್ರಶ್ನೆಗೆ, ' ನನ್ನದು ಯಾವುದೇ ಕಾರ್ಯಕ್ರಮ ಇಲ್ಲ. ನನಗೆ ಆ.15 ರ ಸ್ವಾತಂತ್ರ ನಡಿಗೆ ಹಾಗೂ ಪ್ರತಿ ಜಿಲ್ಲೆಯಲ್ಲಿನ 75 ಕಿ.ಮೀ ಪಾದಯಾತ್ರೆ ಹಾಗೂ ಭಾರತ ಜೋಡೋ ಯಾತ್ರೆ ಮಾತ್ರ ಇದೆ. ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮಾತ್ರ ನನ್ನ ಕೆಲಸ ' ಎಂದು ತಿಳಿಸಿದರು.
ಇದನ್ನೂ ಓದಿ: ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್..
ಕಾರ್ಯಕರ್ತರೊಬ್ಬರೂ ನಿಮ್ಮ ಕಾರ್ಯಕ್ರಮ ಮಾಡಬೇಕು ಎಂಬ ಪತ್ರ ಬರೆದಿದ್ದಾರಲ್ಲಾ ಎಂಬ ಪ್ರಶ್ನೆಗೆ, ' ಅದು ಕೇವಲ ಅವರ ವೈಯಕ್ತಿಕ ಅಭಿಪ್ರಾಯ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ನನ್ನ ವಿಚಾರಕ್ಕೆ ಯಾರೂ ಬರುವುದು ಬೇಡ. ನೀವು ಬರುವುದಾದರೆ ಪಕ್ಷದ ವಿಚಾರಕ್ಕೆ ಬನ್ನಿ. ನನ್ನ ಬಗ್ಗೆ ಯಾರೂ ಅಭಿಮಾನ ತೋರುವುದು ಬೇಡ. ನೀವು ಕಾಂಗ್ರೆಸ್ ಗೆ ಅಭಿಮಾನ ತೋರಿದರೆ ನನಗೆ ಅಭಿಮಾನ ತೋರಿದಂತೆ. ಅಷ್ಟೇ ಸಾಕು ' ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.