ಬಾಗಲಕೋಟೆ ನೂತನ ಬುಡಾ ಕಚೇರಿಗೆ ಚಾಲನೆ

ನಗರದ ಹಳೆಯ ತಹಶೀಲ್ದಾರ ಕಚೇರಿ ಆವರಣದ ಕಟ್ಟಡದಲ್ಲಿ ತೆರೆಯಲಾದ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಕಚೇರಿಗೆ ಸಂಸದ ಪಿ.ಸಿ.ಗದ್ದಿಗೌಡರ ಬುಧವಾರ ಚಾಲನೆ ನೀಡಿದರು.

Last Updated : Oct 1, 2020, 03:57 PM IST
ಬಾಗಲಕೋಟೆ ನೂತನ ಬುಡಾ ಕಚೇರಿಗೆ ಚಾಲನೆ title=
Photo Courtsey : facebook

ಬಾಗಲಕೋಟೆ: ನಗರದ ಹಳೆಯ ತಹಶೀಲ್ದಾರ ಕಚೇರಿ ಆವರಣದ ಕಟ್ಟಡದಲ್ಲಿ ತೆರೆಯಲಾದ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಕಚೇರಿಗೆ ಸಂಸದ ಪಿ.ಸಿ.ಗದ್ದಿಗೌಡರ ಬುಧವಾರ ಚಾಲನೆ ನೀಡಿದರು.

ನಂತರ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ 1998 ರಲ್ಲಿಯೇ ಯೋಜನಾ ಪ್ರಾಧಿಕಾರದಿಂದ ನಗರಾಭಿವೃಧ್ದಿ ಪ್ರಾಧಿಕಾರವಾಗಿ ಪರಿವರ್ತನೆಗೊಂಡಿತ್ತು. ಆದರೆ ಅನುಷ್ಠಾನಗೊಂಡಿದಿಲ್ಲ. ಈಗ ಅಸ್ಥಿತ್ವಕ್ಕೆ ತರಲಾಗಿದೆ. ರಾಮಕೃಷ್ಣ ಹೆಗಡೆಯವರು ಕಂಡ ಚಂಡಿಗಡ ಮಾದರಿಯ ಕನಸನ್ನು ನನಸಾಗಿಸಲು ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷರು ಹಾಗೂ ಸದಸ್ಯರು ಶ್ರಮಿಸಬೇಕು ಎಂದರು. 
ಸಮಾಜ ಮತ್ತು ಸರಕಾರದ ನಡುವೆ ಕೊಂಡಿಯಾಗಿ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಬಾಗಲಕೋಟೆ ನಗರವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕು ಎಂದರು. ಅಧಿಕಾರಿವನ್ನು ಬಳಸಿಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸ್ನೇಹ ಬಾಂಧವ್ಯ ಬೆಳೆಸಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಕಳೆದ 12 ವರ್ಷಗಳಿಂದ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರವಾಗಿ ಸರಕಾರದ ಮಟ್ಟದಲ್ಲಿ ಆಗಿದ್ದರೂ ಈಗ ಅದರ ಅಸ್ಥಿತ್ವ ಕೂಡಿಬಂದಿದೆ. ಬಿಟಿಡಿಎದಿಂದ ಕೇವಲ ಸಂತ್ರಸ್ಥರಿಗೆ ಮಾತ್ರ ನಿವೇಶನಗಳನ್ನು ನೀಡಲು ಅವಕಾಶವಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಈಗಲೂ ಸಹ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ ಎಂದರು. ಪ್ರಾಧಿಕಾರದ ನೂತನವಾಗಿ ಅಧಿಕಾರ ವಹಿಸಿಕೊಂಡವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಉತ್ತಮ ಕೆಲಸ ನಿರ್ವಹಿಸಲು ತಿಳಿಸಿದರು.

ಪ್ರಾಧಿಕಾರ ನೂತನ ಅಧ್ಯಕ್ಷರಾದ ಬಸಲಿಂಗಪ್ಪ ನಾವಲಗಿ ಮಾತನಾಡಿ ಸಮಾಜದಲ್ಲಿ ಉತ್ತಮ ಕಾರ್ಯ ಮಾಡಲು ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿರುವುದು ಸಂತೋಷವಾಗಿದೆ. ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ನಿವೇಶನ ಹಂಚಿಕೆ, ಮೂಲಭೂತ ಸೌಲಭ್ಯಗಳ ಅಭಿವೃಧ್ದಿಗೆ ಹೆಚ್ಚಿನ ಗಮನ ಹರಿಸಲಾಗುವುದು. ಶಾಸಕರ, ಸಂಸದರ ಮಾರ್ಗದರ್ಶನದಲ್ಲಿ ಬಾಗಲಕೋಟೆ ನಗರವನ್ನು ಅಭಿವೃದ್ದಿ ಪಡಿಸಲು ಶ್ರಮಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹಾಗೂ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಜಯಂತ ಕುರುಂದವಾಡ ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರವನ್ನು ನೂತನ ಅಧ್ಯಕ್ಷರಾದ ಬಸಲಿಂಗಪ್ಪ ನಾವಲಗಿ ಅವರಿಗೆ ಹಸ್ತಾಂತರಿಸಿದರು. ಇದೇ ಸಂಸದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ಪ್ರಾಧಿಕಾರದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ನಗರಾಭಿವೃಧ್ದಿ ಪ್ರಾಧಿಕಾರದ ಸದಸ್ಯರಾದ ಗುಂಡು ಶಿಂಧೆ, ರಾಜು ನಾಯ್ಕರ, ಚಂದ್ರಪ್ರಕಾಶ ಚೌಧರಿ, ಶಾಂತಾ ಐಕೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರಾಧಿಕಾರದ ಆಯುಕ್ತ ಗಣಪತಿ ಪಾಟೀಲ, ನಾರಾಯಸಾ ಭಾಂಡಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಹೂಮಾಲೆ ಅರ್ಪಿಸಲಾಯಿತು.
 

Trending News