ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಟಿಕೆಟ್ ಆಕಾಂಕ್ಷಿಗಳಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ತಮ್ಮ ಧವಳಗಿರಿ ನಿವಾಸದಿಂದ ಶಿವಾಜಿನಗರಕ್ಕೆ ಆಟೋ ರಿಕ್ಷಾದಲ್ಲಿ ಸಂಚರಿಸಿ ಪ್ರಚಾರ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರು ಚಿಕ್ಕಪೇಟೆ ಕ್ಷೇತ್ರದ ಟಿಕೆಟ್‌ಗಾಗಿ ಎರಡು ಕೋಟಿ ರೂ. ಡೀಲ್ ನಡೆದಿದೆ ಎನ್ನುವ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ, ಈ ಬಗ್ಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ ಜೊತೆ ಮಾತನಾಡುವುದಾಗಿ ಯಡಿಯೂರಪ್ಪ ಹೇಳಿದರು.
ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಲಿಂಗಾಯತರಿಗೆ 21, ಒಕ್ಕಲಿಗ ಸಮುದಾಯದವರಿಗೆ 10, ಪರಿಶಿಷ್ಟ ಜಾತಿಯವರಿಗೆ 10, ಪರಿಶಿಷ್ಟ ಪಂಗಡದವರಿಗೆ 6, ಬ್ರಾಹ್ಮಣ ಸಮುದಾಯದವರಿಗೆ 5 ಮತ್ತು ಕೊಡವ ಸಮುದಾಯದ ಓರ್ವ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಈ ಬಾರಿ ಚುನಾವಣೆಯಲ್ಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಟಿಕೇಟ್ ನೀಡುತ್ತಿಲ್ಲ. ವಿಶೇಷ ಕಾರಣದಿಂದಾಗಿ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಏಪ್ರಿಲ್ 11ಕ್ಕೆ ಎರಡನೇ ಪಟ್ಟಿ ಬಿಡುಗಡೆ
ಏಪ್ರಿಲ್ 11ರಂದು 65 ರಿಂದ 70 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಏ.12 ರಂದು ಮತ್ತೊಮ್ಮೆ ಅಮಿತ್ ಷಾ ರಾಜ್ಯಕ್ಕೆ ಆಗಮಿಸಲಿದ್ದು ಪ್ರಚಾರ ಮಾಡಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.