ಬೆಂಗಳೂರು: ಜೆಡಿಎಸ್ ನ ಕುಟುಂಬದಲ್ಲಿ ಈಗ ದೇವೇಗೌಡ ಮೊಮ್ಮಕ್ಕಳ ನಡುವೆ ಚುನಾವಣೆಗೆ ಸ್ಪರ್ಧಿಸಲು ಸ್ಪರ್ಧೆ ನಡೆದಿದೆ.ಇದಕ್ಕೆ ಪೂರಕ ಎನ್ನುವಂತೆ ಈಗ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ.ಆ ಮೂಲಕ ಈ ಬಾರಿ ಮಂಡ್ಯ ಮತ್ತು ಹಾಸನ್ ಕ್ಷೇತ್ರಗಳಲ್ಲಿ ಇಬ್ಬರು ಸ್ಪರ್ಧಿಸಿದರೆ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಜೆಡಿಎಸ್‌ನಿಂದ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ. ದೇವೇಗೌಡರು ಹೇಳುವಂತೆ ಮಂಡ್ಯದಲ್ಲಿ ಸ್ಪರ್ಧಿಸಲು ನಿಖಿಲ್ ಮನಸ್ಸು ಮಾಡಿದ್ದಾರೆ. ಆದ್ದರಿಂದ ಸುಮಲತಾ ಅವರನ್ನು ಅವರನ್ನು ಜೆಡಿಎಸ್‌ಗೆ ಕರೆತಂದು ಟಿಕೆಟ್ ಕೊಡಿಸುವ ಬಗ್ಗೆ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಹೇಳಿದರು.ಮಂಡ್ಯದಲ್ಲಿ ಈ ಹಿಂದಿನಿಂದಲೂ ಜೆಡಿಎಸ್ ಪ್ರಾಬಲ್ಯ ಹೊಂದಿರುವುದರಿಂದ ಅದಕ್ಕೆ ನಾವು ಹಕ್ಕು ಮಂಡಿಸುತ್ತಿದ್ದೇವೆ ಎಂದು ದೇವೇಗೌಡರು ತಿಳಿಸಿದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು" ನಾವು 12 ಸ್ಥಾನಗಳನ್ನು ಜೆಡಿಎಸ್‌ಗೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಬೇಡಿಕೆ ಇಟ್ಟಿದ್ದೇವೆ.ಆದರೆ ಅಷ್ಟೇ ಕೊಡಬೇಕೆಂದು ನಾವು ಪಟ್ಟು ಹಿಡಿದು ಕೂತಿಲ್ಲ. ಸ್ವಲ್ಪ ಚೌಕಾಸಿಗೂ ಅವಕಾಶ ಇದೆ. ಅಂತೂ ಯಾವುದೇ ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ಟಿಕೆಟ್ ಹಂಚಿಕೆ ಮಾಡುತ್ತೇವೆ.ಈ ಕುರಿತಾಗಿ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.