ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ರಾಜ್ಯದಲ್ಲಿ ತಲೆದೂರಿರುವ ಹಿಜಾಬ್  ಗೊಂದಲದ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಿರ್ವಿಘ್ನವಾಗಿ ಜರುಗಿತ್ತು. ಇದೀಗ ಇಂದಿನಿಂದ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಂಡಿದೆ.

Written by - Yashaswini V | Last Updated : Apr 22, 2022, 07:38 AM IST
  • ಇಂದಿನಿಂದ ಮೇ 18ರವರೆಗೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ.
  • ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
  • ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು.
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ  title=
Countdown to secondary PUC final exams april 22 to may 18 here is time tabel- rules

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ :  ಮಕ್ಕಳ ಭವಿಷ್ಯದ ಮಹತ್ವದ ತಿರುವು ಎಂದೇ ಪರಿಗಣಿಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ (ಏಪ್ರಿಲ್ 22) ಆರಂಭವಾಗಲಿದೆ.  ಹಿಜಾಬ್ ಗೊಂದಲ ಹಾಗೂ ಕರೋನಾವೈರಸ್ ಆತಂಕದ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸಲು ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಕಲ ರೀತಿಯಲ್ಲಿಯೂ ಸನ್ನದ್ಧವಾಗಿದೆ. ಎಸ್ಎಸ್ಎಲ್ಸಿ ರೀತಿಯಲ್ಲಿಯೇ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ ನಿಮಯವನ್ನು ಜಾರಿಗೆ ತರಲಾಗಿದೆ.

ಇಂದಿನಿಂದ ಮೇ 18ರವರೆಗೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ.  ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು  6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು. ಇವರಲ್ಲಿ 6,00,519 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದರೆ, 61,808 ಮಕ್ಕಳು ಪುನರಾವರ್ತಿತ ಅಭ್ಯರ್ಥಿಗಳು. 21,928 ಮಂದಿ ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ಇವರಲ್ಲಿ ಕಲಾ ವಿಭಾಗ- 2,28,167 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಿಂದ 2,45,519 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಿಂದ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಇದನ್ನೂ ಓದಿ- Academic Calendar: 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯು ಪರೀಕ್ಷೆಗಾಗಿ ರಾಜ್ಯಾದ್ಯಂತ ಒಟ್ಟು 5,241 ಕಾಲೇಜುಗಳಿಂದ ಪರೀಕ್ಷೆಗೆ  ನೋಂದಣಿ ಮಾಡಿಕೊಳ್ಳಲಾಗಿದೆ. ಪರೀಕ್ಷೆಗಾಗಿ ಒಟ್ಟು 1,076 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಇರಲಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ. ಇದಲ್ಲದೆ, ಪರೀಕ್ಷಾ ಕೇಂದ್ರದ ಸಮೀಪದ ಜೆರಾಕ್ಸ್ ಅಂಗಡಿಗಳನ್ನು ತೆರೆಯದಂತೆ ಸೂಚಿಸಲಾಗಿದೆ.  

ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ:
ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಹಾಲ್ ಟಿಕೆಟ್ ಅನ್ನು ತೋರಿಸುವ ಮೂಲಕ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. 

ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯ:
ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಈ ಕುರಿತಂತೆ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿದ ಸಮವಸ್ತ್ರ ಪಾಲನೆ ಕಡ್ಡಾಯ. ಆದರೆ, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ. ಆದಾಗ್ಯೂ, ಪರೀಕ್ಷಾರ್ಥಿಗಳು ಸಮವಸ್ತ್ರವಿಲ್ಲದ ಕಡೆ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಪರೀಕ್ಷೆ ಸಂಬಂಧಿತ ಯಾವುದೇ ಸಮಸ್ಯೆಗಳಿಗಾಗಿ ತಕ್ಷಣ ಪರಿಹಾರ ಪಡೆಯಲು ಸಹಾಯವಾಣಿ -080 23080864 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಇದನ್ನೂ ಓದಿ- "ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ"

ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
ಏ. 22 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 - ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
ಏ. 25 - ಅರ್ಥಶಾಸ್ತ್ರ
ಏ. 26 - ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ
ಏ. 28 - ಕನ್ನಡ
ಮೇ 4 - ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 5 - ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್
ಮೇ 6 - ಇಂಗ್ಲಿಷ್
ಮೇ 10 - ಇತಿಹಾಸ, ಭೌತಶಾಸ್ತ್ರ
ಮೇ 12 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 - ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ
ಮೇ 17 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ
ಮೇ 18 - ಹಿಂದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News