close

News WrapGet Handpicked Stories from our editors directly to your mailbox

ರಾಜ್ಯಕ್ಕಾದ ಅವಮಾನವನ್ನು ಸ್ವಾಭಿಮಾನಿ ಕರ್ನಾಟಕ ಸಹಿಸದು: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷಿಸಿಲ್ಲ, ಮುಖ್ಯಮಂತ್ರಿಗಳನ್ನು ಈ ರೀತಿ ಅವಮಾನಿಸಿಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸದು ಎಂದು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  

Updated: Aug 17, 2019 , 12:16 PM IST
ರಾಜ್ಯಕ್ಕಾದ ಅವಮಾನವನ್ನು ಸ್ವಾಭಿಮಾನಿ ಕರ್ನಾಟಕ ಸಹಿಸದು: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದಾಗಿ ಸಾವಿರಾರು ಕೋಟಿ ರೂ.ಗಳ ಭಾರೀ ನಷ್ಟವಾಗಿದೆ. ಹೀಗಿದ್ದರೂ ಕೇಂದ್ರ ಸರಕಾರ ನೆರೆ ಪರಿಹಾರಕ್ಕಾಗಿ ಕೇವಲ 100 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅವಮಾನವನ್ನು ಸ್ವಾಭಿಮಾನಿ ಕರ್ನಾಟಕದ ಜನತೆ ಎಂದಿಗೂ ಸಹಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೆರೆ ಇಲ್ಲವೆ ಬರ ಪರಿಸ್ಥಿತಿ ಎದುರಿಸಿದ ಸಂದರ್ಭಗಳಲ್ಲಿ , ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಯಾವ ಕೇಂದ್ರ ಸರ್ಕಾರವೂ, ಯಾವ ಪ್ರಧಾನಿಯೂ ಕರ್ನಾಟಕ ರಾಜ್ಯವನ್ನು ಈ ರೀತಿ ನಿರ್ಲಕ್ಷಿಸಿಲ್ಲ, ಮುಖ್ಯಮಂತ್ರಿಗಳನ್ನು ಈ ರೀತಿ ಅವಮಾನಿಸಿಲ್ಲ. ಸ್ವಾಭಿಮಾನಿ, ಸ್ವಾವಲಂಬಿ ಕರ್ನಾಟಕ ಇದನ್ನು ಸಹಿಸದು" ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸುಮಾರು 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕಳೆದ 118 ವರ್ಷಗಳಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರ ಒಟ್ಟು 1224 ಪರಿಹಾರ ಕೇಂದ್ರಗಳನ್ನು ತೆರೆದು 4 ಲಕ್ಷ ಜನರಿಗೆ ಆಶ್ರಯ ನೀಡಿದೆ. 

ರಾಜ್ಯದಲ್ಲಿ ಪ್ರವಾಹದಿಂದಾಗಿ 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರದಿ ಸಲ್ಲಿಸಿದ್ದು, ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಹಾಗೂ ತುರ್ತಾಗಿ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದಾಗ್ಯೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೆ ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.