ಬೈ ಎಲೆಕ್ಷನ್ ಪ್ರಚಾರದ ಅಬ್ಬರ: ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಶ್ರೀರಾಮುಲು ಕಣ್ಣು ಬಿಡುವ ಮೊದಲೇ ಉಗ್ರಪ್ಪ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು. ಉಗ್ರಪ್ಪ ಅವರು ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಸದ್ದು ಮಾಡುತ್ತದೆ- ಸಿದ್ದರಾಮಯ್ಯ

Last Updated : Oct 22, 2018, 02:25 PM IST
ಬೈ ಎಲೆಕ್ಷನ್ ಪ್ರಚಾರದ ಅಬ್ಬರ: ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ title=

ಬಳ್ಳಾರಿ: ಮುಂದಿನ ತಿಂಗಳು ನದೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಚುನಾವಣೆಗೆ ಅಬ್ಬರದ ಪ್ರಚಾರ ಪ್ರಾರಂಭವಾಗಿದ್ದು, ಬಳ್ಳಾರಿಯ ಹಂಪಸಾಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದು, ಪ್ರಚಾರ ಭಾಷಣದಲ್ಲಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲಂಕಾರಕ್ಕೆ ಚುನಾಯಿಸಿ ಕಳುಹಿಸಬೇಕೇ?
ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಂತಾ ಅವರೂ ಈ ಹಿಂದೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಅಲಂಕಾರಕ್ಕೆ ಅವರನ್ನು ಅಲ್ಲಿಗೆ ಕಳುಹಿಸಬೇಕೇ? ಎಂದು  ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶ್ರೀರಾಮುಲು ಬಾದಾಮಿಯಲ್ಲಿ ಜನಿಸಿದವರೇ?
ಲೋಕಸಭೆ ಉಪಚುನಾವಣೆಗೆ ಬಳ್ಳಾರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ.ಎಸ್. ಉಗ್ರಪ್ಪ ಅವರನ್ನು ಬಿಜೆಪಿ ಹೊರಗಿನಿಂದ ಬಂದವರು ಎಂದು ಟೀಕಾಪ್ರಹಾರ ನಡೆಸುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಉಗ್ರಪ್ಪನವರನ್ನು ಹೊರಗಿನವರು ಎಂದು ಹೇಳುವುದಾದರೆ ಶ್ರೀರಾಮುಲು ಬಾದಾಮಿಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ಅವರೇನು ಬಾದಾಮಿಯಲ್ಲಿ ಜನಿಸಿದವರೇ? ಎಂದಿದ್ದಾರೆ.

ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ:
ಶ್ರೀರಾಮುಲು ಕಣ್ಣು ಬಿಡುವ ಮೊದಲೇ ಉಗ್ರಪ್ಪ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದವರು. ಉಗ್ರಪ್ಪ ಅವರು ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಸದ್ದು ಮಾಡುತ್ತದೆ. ಶಾಂತಾ ಅವರು ಹೋದರೆ ಆ ಕೆಲಸ ಆಗದು. ಶ್ರೀರಾಮುಲು ಅವರಿಗೆ ಹೋಲಿಸಿದರೆ ರಾಜಕೀಯದಲ್ಲಿ ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ ಎಂದು ಸಿದ್ದರಾಮಯ್ಯ ಉಗ್ರಪ್ಪ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ.

ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ರಾಮುಲು ಅವರಿಗೆ ಗೊತ್ತಿಲ್ಲ. ಹಣ, ಅಹಂಕಾರದಿಂದ ಅವರು ರಾಜಕೀಯ ನಡೆಸುವವರು. ರೈತರ ಸಾಲ ಮನ್ನಾ ಮಾಡಿ ಎಂದು ಶ್ರೀರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ. ಕನ್ನಡವೇ ಸರಿಯಾಗಿ ಮಾತನಾಡಲು ಬಾರದವರು ಏನು ಮಾತನಾಡಿಯಾರು? ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ? ಎಂದು ಲೇವಡಿ ಮಾಡಿದರು.
 

Trending News