ಅತಿ ವೃಷ್ಟಿ : ವಿವಿಧ ಬೆಳೆಗಳ ನಿರ್ವಹಣೆಗಾಗಿ ಕೃಷಿ ಇಲಾಖೆಯಿಂದ ಕೆಲವು ಸಲಹೆಗಳು

ಜಿಲ್ಲೆಯಾದ್ಯಂತ ಅತಿ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳಲ್ಲಿ ನೀರು ನಿಂತು ಹಾನಿಯಾಗಿದೆ. ಸಂಕಷ್ಟ ಕಾಲದಲ್ಲಿ ಬೆಳೆ ನಿರ್ವಹಣೆಗಾಗಿ ಕೃಷಿ ಇಲಾಖೆಯು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅಳವಡಿಸಿಕೊಂಡು ಬೆಳೆ ರಕ್ಷಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Written by - Zee Kannada News Desk | Last Updated : Nov 25, 2021, 03:58 PM IST
  • ಜಿಲ್ಲೆಯಾದ್ಯಂತ ಅತಿ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳಲ್ಲಿ ನೀರು ನಿಂತು ಹಾನಿಯಾಗಿದೆ. ಸಂಕಷ್ಟ ಕಾಲದಲ್ಲಿ ಬೆಳೆ ನಿರ್ವಹಣೆಗಾಗಿ ಕೃಷಿ ಇಲಾಖೆಯು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅಳವಡಿಸಿಕೊಂಡು ಬೆಳೆ ರಕ್ಷಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಅತಿ ವೃಷ್ಟಿ : ವಿವಿಧ ಬೆಳೆಗಳ ನಿರ್ವಹಣೆಗಾಗಿ ಕೃಷಿ ಇಲಾಖೆಯಿಂದ ಕೆಲವು ಸಲಹೆಗಳು title=

ಧಾರವಾಡ: ಜಿಲ್ಲೆಯಾದ್ಯಂತ ಅತಿ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳಲ್ಲಿ ನೀರು ನಿಂತು ಹಾನಿಯಾಗಿದೆ. ಸಂಕಷ್ಟ ಕಾಲದಲ್ಲಿ ಬೆಳೆ ನಿರ್ವಹಣೆಗಾಗಿ ಕೃಷಿ ಇಲಾಖೆಯು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅಳವಡಿಸಿಕೊಂಡು ಬೆಳೆ ರಕ್ಷಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಗೋವಿನ ಜೋಳ: ಎರಡು ಕಟಾವು ಪೂರ್ಣಗೊಂಡು ಗೂಡು ಹಾಕಿದ ತೆನೆಗಳನ್ನು ಒಣಗಿಸಬೇಕು. ಮೊಳಕೆ, ಬೂಸ್ಟು ಬಂದ ತೆನೆಗಳನ್ನು ತೆಗೆದು ವಿಲೇವಾರಿ ಮಾಡಬೇಕು. ಸರಿಯಾಗಿ ಒಣಗಿಸಿದ ಸಿಪ್ಪೆಸಹಿತ ತೆನೆಗಳನ್ನು ಎತ್ತರದ ಸ್ಥಳಗಳಲ್ಲಿ (ಕೆಳಗೆ ನೀರು ನುಸುಳದಂತೆ) ಬಣಿವೆ ಹಾಕಬೇಕು. ತಕ್ಷಣ ಮಾರಾಟ ಮಾಡುವುದಿದ್ದರೆ ಮಾತ್ರ ಕಾಳು ಮಾಡಿಸಬೇಕು. ಮಾರಾಟ ಮಾಡುವ ಮುನ್ನ, ಸ್ಥಳೀಯವಾಗಿ ಬರುವ ಅನಾಮಿಕರೊಡನೆ ವ್ಯವಹರಿಸದೇ, ಅಗತ್ಯ ದೃಢೀಕೃತ ವ್ಯಾಪಾರ ವೇದಿಕೆ ಮೂಲಕ ಮಾರಾಟ ಮಾಡಬೇಕು. 

ಸೋಯಾ ಅವರೆ: ಒಟ್ಟಿದ ಬಣಿವೆಗಳನ್ನು ಪರಿಶೀಲಿಸಿ, ಸಂಗ್ರಹಣೆಯಲ್ಲಿ ಪುನಃ ಸುರಕ್ಷಿತತೆ ಕಾಯ್ದುಕೊಳ್ಳಲು ಕ್ರಮ ಅಗತ್ಯ.
ಹೈಬ್ರಿಡ್ ಬಿ.ಟಿ. ಹತ್ತಿ: ಈಗಾಗಲೇ ಮಳೆಗಿಂತ ಮೊದಲೇ ಬಿಡಿಸಿದ ಹತ್ತಿಯನ್ನು ಎಳೆ ಬಿಸಿಲು, ನೆರಳಿನಲ್ಲಿ ಒಣಗಿಸಬೇಕು. ಮಳೆಗೆ ಸಿಕ್ಕ ಹತ್ತಿಯನ್ನು ಬಿಡಿಸಿ ಪರಭಾರೆಯಾಗಿ ಒಣಗಿಸಿ ರಾಶಿ ಮಾಡಬೇಕು. ಬೀಜಗಳು ಮೊಳಕೆಯೊಡೆದಲ್ಲಿ ಅಂತಹ ಹತ್ತಿಯನ್ನು ಜಿನ್ ಮಾಡಿಸಿ, ಸ್ವಚ್ಛಮಾಡಿಸಿ ಅಂಡಿಗೆ ತುಂಬಿ, ಬೇಲು ಮಾಡಿಸುವುದು ಒಳ್ಳೆಯದು. ಮೊಳಕೆಯೊಡೆಯದೇ ಇದ್ದಲ್ಲಿ ಚೆನ್ನಾಗಿ ಒಣಗಿಸಿ, ಪ್ರತ್ಯೇಕವಾಗಿ ಅಂಡಿಗೆಗಳಲ್ಲಿ ತುಂಬಹುದು. ಅಧಿಕೃತ ಮೂಲಗಳ ಮೂಲಕ ಮಾರಾಟ ಮಾಡಬೇಕು. ಬೆಳೆಯಲ್ಲಿ ನಿಂತ ಮಳೆ ನೀರನ್ನು ಆದಷ್ಟು ಬೇಗ ಹೊರ ಹಾಕಬೇಕು. ಅತೀ ತೇವದಿಂದ, ಸೊರಗು ರೋಗ ಪೀಡಿತ ಗಿಡಗಳ ಬುಡಕ್ಕೆ ಕಾರ್ಬನ್‍ಡೈಜಿಮ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ. ನಂತೆ ಬೆರೆಸಿ ದ್ರಾವಣವನ್ನು ಗಿಡದ ಬುಡಕ್ಕೆ ಸುರಿಯಬೇಕು. ಹೊಸ ಕುಡಿಗಳನ್ನು ಚಿವುಟಿ ತೆಗೆದು, ಹೂವು, ಕಾಯಿಗಳನ್ನು ಕಾಯ್ದುಕೊಳ್ಳಲು ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 10 ಗ್ರಾಂ. ನಂತೆ ಹಾಗೂ ಲಘು ಪೋಷಕಾಂಶ ಮತ್ತು 0.25 ಮಿ.ಲೀ. ಆಲ್ಫಾ ಎನ್.ಎ.ಎ. ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು. ಶಿಲೀಂದ್ರನಾಶಕ, ಕೀಟನಾಶಕಗಳನ್ನು ಅಗತ್ಯವಿದ್ದರೆ ಮಾತ್ರ ಬಳಸಬೇಕು. 

ಇದನ್ನೂ ಓದಿ : OPPO EV: 2024ರಲ್ಲಿ ಭಾರತದಲ್ಲಿ ಓಡಾಡಲಿವೆ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್?

ಹಿಂಗಾರಿ ಜೋಳ: ಭೂಮಿ ಹದ ದೊರೆತ ಕೂಡಲೇ ಬೇಗ ಬಿತ್ತನೆ ಮಾಡುವುದು ಒಳ್ಳೆಯದು. ಬಿತ್ತನೆಯಾದ ಬೆಳೆಯಲ್ಲಿ ಎಡೆ ಹೊಡೆದು ಸಾಲು ಮಾಡುವುದು, ಸಾಲುಗಳ ಮಧ್ಯೆ ಮಣ್ಣಿನ ಹೊದಿಕೆ ಮಾಡುವುದು ಅಗತ್ಯ. ಸುಳಿ ನೊಣ, ಚುಕ್ಕೆ ಲದ್ದಿ ಹುಳು, ಕಾಂಡಕೊರಕದ ಬಾಧೆ ಇದ್ದಲ್ಲಿ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ. ಇಮಾಮೆಕ್ಟಿನ್ ಬೆಂಝೋಯೇಟ್ 5 ಎಸ್.ಜಿ. ಕೀಟನಾಶಕವನ್ನು ಸುಳಿಯ ನೇರಕ್ಕೆ ಸಿಂಪರಣೆ ಮಾಡಬೇಕು. ಪ್ರತಿ ಲೀಟರ್ ನೀರಿಗೆ 3 ಗ್ರಾಂ. ಲಘು ಪೋಷಕಾಂಶ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು.ತೇವಾಂಶದ ಸ್ಥಿತಿ ನೋಡಿಕೊಂಡು ನಿಯಮಿತವಾಗಿ ಸಿಂಪರಣೆ ಮಾಡುವ ಕುರಿತು ತಜ್ಞರ ಸಲಹೆ ಪಡೆಯುವುದು ಸೂಕ್ತ.

 ಕಡಲೆ: ಹದ ದೊರೆತ ಕೂಡಲೇ ಬೇಗ ಬಿತ್ತನೆ ಮಾಡುವುದು ಒಳ್ಳೆಯದು. ಬಿತ್ತನೆಯಾದ ಬೆಳೆಯಲ್ಲಿ ಎಡೆ ಹೊಡೆದು ಸಾಲು ಮಾಡುವುದು, ಸಾಲುಗಳ ಮಧ್ಯೆ ಮಣ್ಣಿನ ಹೊದಿಕೆ ಮಾಡುವುದು ಅಗತ್ಯ. ಈಗಾಗಲೇ ಬಿತ್ತನೆಯಾದ ಬೆಳೆಯಲ್ಲಿ ಅತಿ ಮಳೆ, ತೇವಾಂಶದಿಂದ ಬೆಳೆ ಹಳದಿಯಾಗಿ ಸೊರಗುರೋಗ ಕಾಣಿಸಿದಲ್ಲಿ ಬುಡಕ್ಕೆ ಕಾರ್ಬನ್‍ಡೈಜಿಮ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ. ನಂತೆ ಬೆರೆಸಿ ದ್ರಾವಣವನ್ನು ಗಿಡದ ಬುಡಕ್ಕೆ ಸುರಿಯಬೇಕು. ಪ್ರತಿ ಎಕರೆಗೆ 3-5 ಲಿಂಗಾಕರ್ಷಕ ಮೋಹಕ ತೋಳಿನಾಕಾರದ ಬಲೆಗಳನ್ನು ಅಳವಡಿಸಿ, ಕೀಟಗಳ ಚಟುವಟಿಕೆಯನ್ನು ಗುರುತಿಸಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಹಸಿರು ಕೀಡೆ ಅಥವಾ ಕಾಯಿಕೊರಕದ ಬಾಧೆ ಇದ್ದಲ್ಲಿ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಪ್ರೊಫೆನ್ ಫಾಸ್ 50 ಇ. ಸಿ. ಅಥವಾ 0.5 ಗ್ರಾಂ. ಇಮಾಮೆಕ್ಟಿನ್ ಬೆಂಝೋಯೇಟ್ 5 ಎಸ್.ಜಿ. ಕೀಟನಾಶಕವನ್ನು ಸಿಂಪರಣೆ ಮಾಡಬೇಕು. ಪ್ರತಿ ಲೀಟರ್ ನೀರಿಗೆ 3 ಗ್ರಾಂ.ನಂತೆ ಲಘು ಪೋಷಕಾಂಶ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು. ಬೆಳೆಯು 30 ರಿಂದ 35 ದಿನಗಳದ್ದಾದಾಗ ಕುಡಿ ಚಿವುಟಬೇಕು. ತಮ್ಮ ಪರಿಸರದಲ್ಲಿ ಕಡ್ಲಿ ಪಲ್ಲೆ ಉಡಿಯುವ ಪದ್ಧತಿ ಇದ್ದಲ್ಲಿ ಪ್ರೋತ್ಸಾಹಿಸಬೇಕು. ಇದರಿಂದ ಗಿಡಗಳ ಪಂಗಲು ಹೆಚ್ಚಾಗಿ ಇಳುವರಿ ಹೆಚ್ಚಾಗುವುದು. ಪೋಷಕಾಂಶಗಳ ಸಿಂಪರಣೆ ಮೂಲಕ ಬೆಳೆಯ ಇಳುವರಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೇವಾಂಶ ನೋಡಿಕೊಂಡು ನಿಯಮಿತವಾಗಿ ಪೋಷಕಾಂಶ ಸಿಂಪರಣೆ ಮಾಡಲು ನುರಿತ ತಜ್ಞರ ಸಲಹೆ ಪಡೆಯವುದು ಅಗತ್ಯ. ಕಡಲೆ ಬೆಳೆಯಲ್ಲಿ ತುಕ್ಕುರೋಗ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಹೆಕ್ಸಾಕೋನಾಝೋಲ್ ಅಥವಾ 0.5 ಗ್ರಾಂ. ಟೆಬ್ಯುಕೋನಾಝೋಲ್ + ಟ್ರಿಫ್ಲಾಕ್ಸಿಸ್ಟ್ರೋಬಿನ್ ಸಂಯುಕ್ತ ಶಿಲೀಂದ್ರನಾಶಕವನ್ನು ಬಳಸಬಹುದು.

ಸೂರ್ಯಕಾಂತಿ: ನೀರಿನ ಅನುಕೂಲ ಇದ್ದರೆ, ಹದ ದೊರೆತ ಕೂಡಲೇ ಬೇಗನೇ ಬಿತ್ತನೆ ಮಾಡುವುದು ಒಳ್ಳೆಯದು. ಈಗಾಗಲೇ ಬಿತ್ತನೆಯಾದ ಬೆಳೆಯಲ್ಲಿ, ಅತಿ ಮಳೆ, ತೇವಾಂಶದಿಂದ ಬೆಳೆ ಹಳದಿಯಾಗಿ ಸೊರಗು ರೋಗ ಕಾಣಿಸಿದಲ್ಲಿ ಕಾರ್ಬನ್‍ಡೈಜಿಮ್ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬುಡಕ್ಕೆ ಸುರಿಯಬೇಕು. ಎಡೆ ಹೊಡೆದು ಸಾಲು ಮಾಡುವುದು, ಸಾಲುಗಳಿಗೆ ಮಣ್ಣೆರಿಸುವುದು ಸಾಲುಗಳ ಮಧ್ಯೆ ಮಣ್ಣಿನ ಹೊದಿಕೆ ಮಾಡುವುದು ಅಗತ್ಯ. ತೆನೆಕೀಡೆ ಬಾಧೆ ಇದ್ದಲ್ಲಿ ಆರಂಭದ ಹಂತದಲ್ಲಿ 0.5 ಗ್ರಾಂ. ಇಮಾಮೆಕ್ಟಿನ್ ಬೆಂಝೋಯೇಟ್ 5 ಎಸ್.ಜಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಅಲ್ಲಲ್ಲಿ ಜಾಳು ಜಾಳಾದ ಎಲೆಗಳು ಕಂಡು ಬಂದಲ್ಲಿ ಪರೀಕ್ಷಿಸಿ ಕೀಟಗಳ ಗುಂಪನ್ನು ಸಮೂಹವಾಗಿ ನಾಶಮಾಡಬೇಕು. ಪ್ರತಿ ಲೀಟರ್ ನೀರಿಗೆ 3 ಗ್ರಾಂ. ನಂತೆ ಲಘು ಪೋಷಕಾಂಶ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು. ಪೋಷಕಾಂಶಗಳ ಸಿಂಪರಣೆ ಮೂಲಕ ಬೆಳೆಯ ಇಳುವರಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೇವಾಂಶ ನೋಡಿಕೊಂಡು ನಿಯಮಿತವಾಗಿ ಪೋಷಕಾಂಶ ಸಿಂಪರಣೆ ಮಾಡಲು ನುರಿತ ತಜ್ಞರ ಸಲಹೆ ಪಡೆಯವುದು ಅಗತ್ಯ. 

ಮೆಣಸಿನಕಾಯಿ: ಮೆಣಸಿನಕಾಯಿ ಬೆಳೆಯುವ ಪ್ರದೇಶಗಳಲ್ಲಿ ಹಣ್ಣು ಕೊಳೆ (ಅಂಥ್ರ್ಯಾಕ್ನೋಸ್) ರೋಗವು ಕಂಡು ಬರುತ್ತಿದೆ. ಅತಿಯಾದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಸಂಗ್ರಹವಾಗಿರುವುದು ಈ ರೋಗದ ಉಲ್ಬಣತೆಗೆ ಕಾರಣವಾಗಿದೆ. ಈ ರೋಗವು ಮಳೆ ಹೆಚ್ಚಾದಾಗ ಅಥವಾ ಏರು ಮಡಿ ಮಾಡದೇ ಇದ್ದಾಗ ರೋಗಾಣುಗಳು ಹೆಚ್ಚಾಗಿ ತಮ್ಮ ರೋಗದ ಲಕ್ಷಣ ತೋರಿಸುತ್ತವೆ. ಮೆಣಸಿನಕಾಯಿ ಗಿಡದ ಟೊಂಗೆಗಳು, ಗಿಡದ ಕವಲುಗಳು ಹಾಗೂ ತುದಿಯಿಂದ ಕೆಳಗಿನ ಭಾಗ ಸಾಯುವುದು, ಹಣ್ಣುಗಳ ಮೇಲೆ ಕಪ್ಪು ಚುಕ್ಕೆ ಕಾಣಿಸಿಕೊಳ್ಳುತ್ತದೆ. ಕಾಯಿಗಳು ಹಣ್ಣಾಗುವಾಗ ಅಥವಾ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆತಿರುಗುವಾಗ ಈ ರೋಗವು ಕಾಯಿಗಳ ಮೇಲೆ ಕಂಡು ಬಂದು ಹಣ್ಣು ಮೆಣಸಿನಕಾಯಿಯ ಮೌಲ್ಯ ಕುಸಿಯುತ್ತದೆ. ಇದರ ನಿಯಂತ್ರಣಕ್ಕಾಗಿ 2 ಗ್ರಾಂ. ರಿಡೋಮಿಲ್‍ಗೋಲ್ಡ್ (ಮೆಟಾಲೆಕ್ಸಿಲ್ 4% ಮತ್ತು ಮ್ಯಾಂಕೋಜೆಬ್ 64%) ಅಥವಾ ಸಂಯುಕ್ತ ಶಿಲೀಂದ್ರನಾಶಕವಾದ ಕಾರ್ಬನ್‍ಡೈಜಿಮ್, ಮ್ಯಾಂಕೋಜೆಬ್ 2 ಗ್ರಾಂ ಅಥವಾ ಪ್ರೋಫಿಕೋನಾಝೋಲ್ 1 ಮಿ.ಲೀ. ಅಥವಾ ಹೆಕ್ಸಾಕೋನೋಜೋಲ್ 1 ಮಿ.ಲೀ ಶಿಲೀಂದ್ರನಾಶಕವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಸಾಯುವ ಸಸಿ ಹಾಗೂ ಅದರ ಸುತ್ತಮುತ್ತಲಿನ ಸಸಿಗಳಿಗೆ ಹಾಕುವುದರಿಂದರೋಗವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಸಸ್ಯ ಬೆಳೆಗಳಿ ಶೀತದ ಭಾದೆಯಿಂದ ಚೇತರಿಕೆ ಕಾಣಲು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಅಥವಾ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಸಿಂಪಡಿಸಬಹುದು. ಹತ್ತಿ, ಮೆಣಸಿನಕಾಯಿ, ತೊಗರಿ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಬಾಡುವುದು ಕಂಡುಬಂದಲ್ಲಿ ಕಾರ್ಬನ್‍ಡೈಜಿಮ್ 2 ಗ್ರಾಂ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆ ಬುಡಕ್ಕೆ ಹಾಕಬೇಕು.

ತೊಗರಿ : ತೊಗರಿಯು ಹೂವಾಡುವ ಹಂತದಲ್ಲಿದ್ದು, ಹೂವು ಮತ್ತು ಹೀಚುಗಳು ಉದುವ ಸಾಧ್ಯತೆ ಇರುತ್ತದೆ. ಪ್ರತಿ ಲೀಟರ ನೀರಿಗೆ 0.5 ಮಿ.ಲೀ ಎನ್.ಎ.ಎ (ನ್ಯಾಪ್ಥಲಿನ್ ಅಸಿಟಿಕ್‍ಯ್ಯಾಸಿಡ್ 4.5%) ಸಸ್ಯಪ್ರಚೋಧಕ ಸಿಂಪಡಿಸಬಹುದು. ಎಲೆ ಚುಕ್ಕೆ ರೋಗ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್‍ಡೈಜಿಮ್ 50 ಡಬ್ಲೂ.ಪಿ ಶಿಲೀಂದ್ರನಾಶಕವನ್ನು ಬೆರೆಸಿ ಸಿಂಪಡಿಸಬೇಕು, ಕಾಯಿ ಕೊರಕ ಹತೋಟಿ ಮತ್ತು ಪೋಷಕಾಂಶಗಳ ದ್ರಾವಣ ಸಿಂಪರಣೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು.

ಈರುಳ್ಳಿ : ಈಗ ಈರುಳ್ಳಿ ಬಿತ್ತುವವರು ಸಾಲು ನಾಟಿ, ಬಿತ್ತನೆಯನ್ನು ಏರು ಮಡಿ ಅಥವಾ ಬೋದು ಹರಿ ಪದ್ಧತಿಯಲ್ಲಿ ಮಾಡುವುದು ಒಳ್ಳೆಯದು. ಮುಂದೆ ಮಳೆ ಬಂದರೆ ಸಂಭವನೀಯ ಹಾನಿಯನ್ನು ಕಡಿಮೆ ಮಾಡಬಹುದು. ಈರುಳ್ಳಿ ಹೊಲದ ಸುತ್ತಲೂ 2-3 ಸಾಲು ಎತ್ತರವಾಗಿ ಬೆಳೆಯುವ ಜೋಳ, ಗೋವಿನ ಜೋಳವನ್ನು ಬಿತ್ತುವುದರಿಂದ ರಸಹೀರುವ ಕೀಟದ ಬಾಧೆ ಕಡಿಮೆ ಮಾಡಬಹುದು.

ಇದನ್ನೂ ಓದಿ : Joker Virus: ನಿಮ್ಮ ಫೋನ್ ದೋಚಲು ಬಂದಿದ್ದಾನೆ ಜೋಕರ್, ಈ 14 ಅಪ್ಲಿಕೇಶನ್‌ಗಳನ್ನು ತಕ್ಷಣ ಅಳಿಸಿ

ಸಾಮಾನ್ಯ ಸಲಹೆಗಳು : ಮೊದಲು ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಕಾಲುವೆಗಳನ್ನುಮಾಡಿ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ಮಾಡಬೇಕು. ಮಳೆ ನಿಂತ ಮೇಲೆ ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಸಿಫಾರಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು. ಮಳೆ ಬಿಟ್ಟ ಮೂರ್ನಾಲ್ಕು ದಿನಗಳ ಹದ ನೋಡಿಕೊಂಡು ಅಂತರಬೇಸಾಯ (ಎಡಕುಂಟೆ) ಮಾಡಿ ಕಳೆ ನಿರ್ವಹಣೆ ಮಾಡಬೇಕು. ಗೋವಿನ ಜೋಳದಲ್ಲಿ ಎಲೆ ಹಳದಿಯಾಗಿ ಕಂಡುಬಂದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಸಿಂಪಡಿಸಬೇಕು. ಹಿಂಗಾರಿ ಜೋಳ, ಗೋವಿನ ಜೊಳದಲ್ಲಿ ಶೇ. 20-25 ರಷ್ಟು ಫಾಲ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು ಕೊಡಲೇ ನಿರ್ವಹಣೆಗೆ 0.2 ಗ್ರಾಂ ಇಮಾಮೆಕ್ಟಿನ್ ಬೆಂಝೂಯೇಟ್ ಅಥವಾ 0.2 ಮಿ.ಲೀ. ಸ್ಪೈನೋಶ್ಯಾಡ್ ಅಥವಾ 0.4 ಮಿ .ಲೀ. ಕ್ಲೋರಾಂಟ್ರಿನಿಲಿಪ್ರೋಲ್ ಪ್ರತಿ ಲೀಟರ್ ನೀರಿಗೆ  ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಿಂಪಡಿಸಬೇಕು..ಸಿಂಪರಣೆಯನ್ನು ಸಾಯಂಕಾಲದ ಸಮಯದಲ್ಲಿ ಕೈಗೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News