ಬೆಳಗಾವಿ: ತಮಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗದೇ ಇರುವುದಕ್ಕೆ ರಾಜ್ಯ ಬಿಜೆಪಿ ನಾಯಕರ ವರ್ತನೆಯೇ ಕಾರಣ ಎಂದು ಬೆಳಗಾವಿ ಸಂಸದ ಸುರೇಶ್ ಅಂಗಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಖಾಸಗಿ ವಾಹಿನಿ ಜೊತೆ ಮಾತನಾಡಿದ ಅವರು, ರಾಜ್ಯ ನಾಯಕರು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡದ ಪರಿಣಾಮ ರಾಜ್ಯಕ್ಕೆ ಸಿಗಬೇಕಿದ್ದ ಇನ್ನೊಂದು ಮಂತ್ರಿಸ್ಥಾನ ಮರಿಚಿಕೆಯಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ರೆ. ಉತ್ತರ ಕರ್ನಾಟಕದಲ್ಲಿನ ಪ್ರಮುಖ ಜಿಲ್ಲೆ ಬೆಳಗಾವಿಗೆ ಪ್ರಾತಿನಿಧ್ಯ ಕೇಳಿಲ್ಲ. ಸಂಸದ ಸುರೇಶ್ ಅಂಗಡಿಗೆ ಮಂತ್ರಿ ಸ್ಥಾನ ಕೊಟ್ಟರೆ ಒಳಿತು ಎಂದು ಕೇಂದ್ರ ಬಿಜೆಪಿ ನಾಯಕರಿಗೆ ಮನವರಿಕೆಗೆ ಮಾಡಿಕೊಡಲು ರಾಜ್ಯ ಬಿಜೆಪಿ ನಾಯಕರು ವಿಫಲರಾಗಿದ್ದಾರೆ.
ಕರ್ನಾಟಕ ಬಿಜೆಪಿ ನಾಯಕರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಕಾರಣ. ವರಿಷ್ಠರ ಬಳಿ ಒಗ್ಗಟ್ಟು ಪ್ರದರ್ಶಿಸದ ರಾಜ್ಯ ಬಿಜೆಪಿಯ ನಾಯಕರಿಂದಾಗಿ ತಮಗೆ ದೊರೆಯಬೇಕಿದ್ದ ಸಚಿವ ಸ್ಥಾನ ಕೈತಪ್ಪಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ಅಸಹಾಯಕತೆಯಿಂದ ಸಚಿವ ಸ್ಥಾನ ತಪ್ಪಿದೆ ಎಂದು ಅಭಿಪ್ರಾಯ ಪಟ್ಟಿರುವ ಸುರೇಶ್ ಅಂಗಡಿ, ರಾಜ್ಯ ಬಿಜೆಪಿಯ ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸಿಲ್ಲ.
ರಾಜಧಾನಿ ಬೆಂಗಳೂರಿನ ನಂತರ ಬೆಳಗಾವಿಯೇ ದೊಡ್ಡ ಜಿಲ್ಲೆ. ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಆದರೂ ಬೆಳಗಾವಿ ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎನ್ನುವ ಹತಾಶೆಯನ್ನು ಸುರೇಶ್ ಅಂಗಡಿ ಹೊರಹಾಕಿದ್ದಾರೆ.