Suttur Jatre: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಾಳೆಯಿಂದ (ಜನವರಿ 18) ಜನವರಿ 23ರವರೆಗೆ ಅದ್ಧೂರಿ ಸುತ್ತೂರು ಜಾತ್ರಾ ಮಹೋತ್ಸವ ಜರುಗಲಿದೆ.
ನಿನ್ನೆಯಷ್ಟೇ (ಜನವರಿ 16) ಜನಪ್ರಿಯ ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡ ಜಾತ್ರಾ ಸಮಿತಿ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಸುತ್ತೂರು ಜಾತ್ರಾ ಮಹೋತ್ಸವವು ಜನವರಿ 18 ರಿಂದ 23 ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೆ, ವಿವಿಧ ಮಠಗಳ ಮಠಾಧೀಶರು ಸಹ ಜಾತ್ರಾ ಮಹೋತ್ಸವದ ಭಾಗವಾಗಲಿದ್ದಾರೆ ಎಂದು ತಿಳಿಸಿದರು.
ಸುತ್ತೂರು ಜಾತ್ರಾ ಮಹೋತ್ಸವು ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಈ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಸ್ತುಪ್ರದರ್ಶನ, ವಿಚಾರ ಸಂಕೀರ್ಣಗಳು, ಕಾರ್ಯಾಗಾರಗಳು ಸೇರಿದಂತೆ ಜಾತ್ರಾ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದವರು ಮಾಹಿತಿ ನೀಡಿದರು.
ಇದನ್ನೂ ಓದಿ- ಅಧಿವೇಶನದ ಬಳಿಕ ನಾಲ್ಕು ಕಡೆ ರಥಯಾತ್ರೆ : ಸಿಎಂ ಬಸವರಾಜ ಬೊಮ್ಮಾಯಿ
ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ ಕೆಳಕಂಡಂತಿದೆ:
ಜನವರಿ 18ರಂದು ಸುತ್ತೂರು ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭ. ಉತ್ಸವ ಮೂರ್ತಿಯನ್ನು ಶ್ರೀ ಮಠದಿಂದ ಕರ್ತೃಗದ್ದುಗೆಗೆ ಬಿಜಯಂಗೈಸುವುದು.
ಜನವರಿ 19ರಂದು ಹಾಲಹರವಿ ಉತ್ಸವ. ಸುತ್ತೂರು ಜಾತ್ರೆಯ ಅಂಗವಾಗಿ ಸುತ್ತೂರು ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಸುತ್ತೂರಿನಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.
ಜನವರಿ 20 ರಂದು ಬೆಳಿಗ್ಗೆ 10 ಗಂಟೆಗೆ ಸುತ್ತೂರು ರಥೋತ್ಸವ ನಡೆಯಲಿದ್ದು, ನಂತರ ಗ್ರಾಮೀಣ ಕ್ರೀಡೆಗಳು, ದೇಶೀಯ ಆಟಗಳು ಇತ್ಯಾದಿಗಳು ಇರುತ್ತವೆ.
ಜನವರಿ 21 ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದಲ್ಲದೆ, ಕೃಷಿ ಕುರಿತು ವಿಚಾರ ಸಂಕೀರ್ಣ ಮತ್ತು ಸಮಾವೇಶಗಳು ನಡೆಯಲಿದ್ದು, ಕೇಂದ್ರ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆವ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಹಿರಿಯ ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು.
ಜನವರಿ 22ರಂದು ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ತೆಪ್ಪೋತ್ಸವ ಜರುಗಲಿದೆ. ಇದಲ್ಲದೆ, ಕುಸ್ತಿ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ- “ರಾಮಮಂದಿರ ಹೆಸರಿನಲ್ಲಿ ಆಗಲಿ ರಾವಣ ಹೆಸರಿನಲ್ಲಿ ಆಗಲಿ ಒಟ್ನಲ್ಲಿ ಒಳ್ಳೆಯದು ಮಾಡಿ”
ಜನವರಿ 23 ರಂದು ಅನ್ನಬ್ರಹ್ಮೋತ್ಸವ, ಉತ್ಸವ ಮೂರ್ತಿಯನ್ನು ಕರ್ತೃಗದ್ದುಗೆಯಿಂದ ಶ್ರೀಮಠಕ್ಕೆ ಬಿಜಯಂಗೈಸುವುದು.
ಇದೇ ದಿನ ಬೆಳಿಗ್ಗೆ 10.30 ರಿಂದ ಕೃಷಿ ಮೇಳ ನಡೆಯಲಿದೆ, ಜೊತೆಗೆ ಕೃಷಿ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಎಸ್.ಪಿ.ಮಂಜುನಾಥ್ ಮಾಹಿತಿ ಹಂಚಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.