ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿಗೆ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯುವ ಸಲುವಾಗಿ ವಿದೇಶದಲ್ಲಿ ಬಳಸುವ 'ಮಿಲಿಂಗ್ ಅಂಡ್ ಫಿಲಿಂಗ್' ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಮುಂದಾಗಿದೆ.
ಈ ಮೂಲಕ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಶಾಶ್ವತ ಅಂತ್ಯ ಹಾಡಲು ಬಿಬಿಎಂಪಿ ನಿರ್ಧರಿಸಿದೆ. ಬಿಜೆಪಿ ಕಾರ್ಯಕರ್ತರು ರಸ್ತೆ ಗುಂಡಿಗಳನ್ನ ಮುಚ್ಚುವಂತೆ ಒತ್ತಾಯಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಬಿಬಿಎಂಪಿ ಹೊಸ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಗುಂಡಿಗಳನ್ನ ಮುಚ್ಚೋಕೆ ಮುಂದಾಗಿದೆ. ನಿನ್ನೆ ಮಧ್ಯ ರಾತ್ರಿಯಿಂದ ಬಳ್ಳಾರಿ ರಸ್ತೆ ಸೇರಿದಂತೆ ಹಲವೆಡೆ ಗುಂಡಿ ಮುಚ್ಚುವ ಕಾರ್ಯ ಆರಂಭಗೊಂಡಿದೆ. ಗುಂಡಿ ಇರುವ ರಸ್ತೆಗಳ ಮೇಲ್ಪದರನ್ನ ಸಂಪೂರ್ಣ ತೆರವು ಮಾಡಿ ನಂತರ ಹೊಸದಾಗಿ ಡಾಂಬರಿಕರಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.