ಮೃತಪಟ್ಟ 30 ವರ್ಷದ ಬಳಿಕ ಆತ್ಮಗಳಿಗೆ ಮದುವೆ ಮಾಡಿದ ಕುಟುಂಬ!

ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ವಿಭಿನ್ನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತದೆ. ಹುಟ್ಟಿದ ಕೂಡಲೇ ಸಾವನ್ನಪ್ಪಿದ ಶೋಭಾ ಮತ್ತು ಚಂದಪ್ಪ ಎಂಬುವರಿಗೆ ಮದುವೆ ಮಾಡಿಸಲಾಗಿದೆ. ಈ ಬಗ್ಗೆ ಯೂಟ್ಯೂಬರ್‌ ಅನ್ನಿ ಅರುಣ್‌ ಎಂಬವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

Written by - Bhavishya Shetty | Last Updated : Jul 30, 2022, 12:01 PM IST
  • ಮೃತಪಟ್ಟ 30 ವರ್ಷಗಳ ಬಳಿಕ ಆತ್ಮಗಳಿಗೆ ಮದುವೆ
  • ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ಸಂಪ್ರದಾಯವಿದೆ
  • ಪ್ರೇತ ಕಲ್ಯಾಣದ ಬಗ್ಗೆ ಟ್ವೀಟ್‌ ಮಾಡಿರುವ ಯೂಟ್ಯೂಬರ್‌ ಅನ್ನಿ ಅರುಣ್‌
ಮೃತಪಟ್ಟ 30 ವರ್ಷದ ಬಳಿಕ ಆತ್ಮಗಳಿಗೆ ಮದುವೆ ಮಾಡಿದ ಕುಟುಂಬ!  title=
Soul Marriage

ಬೆಂಗಳೂರು: ನಿಧನವಾಗಿ ಮೂವತ್ತು ವರ್ಷ ಕಳೆದ ಬಳಿಕ ಕುಟುಂಬಗಳು ಸೇರಿ ಆತ್ಮಗಳಿಗೆ ಮದುವೆ ಮಾಡಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇದು ಕೇಳೋದಕ್ಕೆ ವಿಚಿತ್ರವಾಗಿದ್ದರೂ ಸಹ ಆತ್ಮಗಳ ಮೋಕ್ಷಕ್ಕಾಗಿ ನಡೆಸುವ ವಿಭಿನ್ನ ಸಂಪ್ರದಾಯವಾಗಿದೆ. 

ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ವಿಭಿನ್ನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತದೆ. ಹುಟ್ಟಿದ ಕೂಡಲೇ ಸಾವನ್ನಪ್ಪಿದ ಶೋಭಾ ಮತ್ತು ಚಂದಪ್ಪ ಎಂಬುವರಿಗೆ ಮದುವೆ ಮಾಡಿಸಲಾಗಿದೆ. ಈ ಬಗ್ಗೆ ಯೂಟ್ಯೂಬರ್‌ ಅನ್ನಿ ಅರುಣ್‌ ಎಂಬವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ

"ನಾನು ಇಂದು ಮದುವೆಗೆ ಹೋಗುತ್ತಿದ್ದೇನೆ. ಈ ವಿಷಯ ಟ್ವೀಟ್‌ಗೆ ಏಕೆ ಅರ್ಹವಾಗಿದೆ ಎಂದು ನೀವು ಕೇಳಬಹುದು. ಈ ಮದುವೆಯ ವಧು ವರ ಸುಮಾರು 30 ವರ್ಷಗಳ ಹಿಂದೆಯೇ ಸತ್ತಿದ್ದಾರೆ. ಅವರಿಗೆ ಇಂದು ವಿವಾಹ ಮಾಡಲಾಗುತ್ತಿದೆ. ದಕ್ಷಿಣ ಕನ್ನಡದ ಸಂಪ್ರದಾಯಗಳಿಗೆ ಒಗ್ಗಿಕೊಳ್ಳದವರಿಗೆ ಇದು ತಮಾಷೆ ಎನಿಸಬಹುದು" ಎಂದಿದ್ದಾರೆ. 

 

"ಮೃತಪಟ್ಟ ಗಂಡು ಹಾಗೂ ಹೆಣ್ಣಿನ ಮನೆಯವರು ನಿಶ್ಚಿತಾರ್ಥ, ಸಪ್ತಪದಿ ಸೇರಿ ಎಲ್ಲಾ ಸಂಪ್ರದಾಯಗಳನ್ನು ನೆರವೇರಿಸುತ್ತಾರೆ. ಈ ವಿಭಿನ್ನ ಸಂಪ್ರದಾಯ ದಕ್ಷಿಣ ಕನ್ನಡದಲ್ಲಿ ಆಚರಣೆಯಲ್ಲಿದೆ" ಎಂದು ಅರುಣ್ ತಮ್ಮ ಟ್ವೀಟ್‌ನಲ್ಲಿ ಸವಿವರವಾಗಿ ಹೇಳಿದ್ದಾರೆ.  

ಇನ್ನು ಈ ಮದುವೆ ಊಟವೂ ಭರ್ಜರಿಯಾಗಿದ್ದು, ಇಡ್ಲಿ, ಮಟನ್ ಗ್ರೇವಿ, ಮೀನಿನ ಫ್ರೈ, ಚಿಕನ್ ಸುಕ್ಕ, ಕಡ್ಲೆ ಬಲ್ಯಾರ್ ಖಾದ್ಯಗಳನ್ನು ಒಳಗೊಂಡಿತ್ತು. ಇನ್ನು ಮದುವೆಯಾದ ಬಳಿಕ ಜೋಡಿ ದೇವರ ಆಶೀರ್ವಾದ ಪಡೆಯಲು ಮನೆಯಿಂದ ಹೊರ ಹೋಗುತ್ತಾರೆ. ಅವರು ಸಂತೋಷದಿಂದ ಇರುತ್ತಾರೆ ಎಂದು ಈ ಕಲ್ಯಾಣದ ನಂಬಿಕೆ.  

ಏನಿದು ಆತ್ಮಗಳ ಮದುವೆ:
ದಕ್ಷಿಣ ಕನ್ನಡ ಎಂದಾಕ್ಷಣ ನೆನಪಾಗುವುದು ಭೂತಾರಾಧನೆ, ದೈವಾರಾಧನೆ, ಪ್ರೇತ ಭೂತಗಳ ಮೇಲಿನ ಅಪಾರ ನಂಬಿಕೆ ಹೊಂದಿರುವ ಜನರು. ಇಲ್ಲಿನ ಪದ್ಧತಿ ಇತರರಿಗೆ ಹೋಲಿಸಿದರೆ ಕೊಂಚ ವಿಭಿನ್ನವಾಗಿರುತ್ತದೆ. ಈ ಭಾಗದಲ್ಲಿ ಮೃತಪಟ್ಟವರ ಆತ್ಮಕ್ಕೆ ಮೋಕ್ಷ ಕಲ್ಪಿಸುವ ಸಲುವಾಗಿ ಪ್ರೇತ ಕಲ್ಯಾಣವನ್ನು ಮಾಡಲಾಗುತ್ತದೆ. ಮದುವೆಯಾಗದೇ ಸತ್ತವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಅವರು ಇತರ ಶುಭ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡುತ್ತಾರೆ. ಹೀಗಾಗಿ ಸಂಪ್ರದಾಯಬದ್ಧವಾಗಿ, ಇಲ್ಲಿನ ಜನರು ಪ್ರೇತಗಳಿಗೆ ವಿವಾಹ ಮಾಡುತ್ತಾರೆ. ಸಾಮಾನ್ಯವಾಗಿ ಮದುವೆಯಲ್ಲಿ ಯಾವೆಲ್ಲಾ ಪ್ರಕ್ರಿಯೆಗಳಿವೆಯೋ ಅವೆಲ್ಲವೂ ಆತ್ಮಗಳ ವಿವಾಹದಲ್ಲಿರುತ್ತದೆ. 

ಆತ್ಮಗಳ ಮದುವೆ ಸಂದರ್ಭದಲ್ಲಿ ಗಂಡು-ಹೆಣ್ಣು ಆತ್ಮಗಳನ್ನು ಹುಡುಕಿ, ಕುಲ ಗೋತ್ರ, ಜಾತಿಗಳನ್ನು ಪರಿಗಣಿಸಿ ಶಾಸ್ತ್ರ ಪ್ರಕಾರವಾಗಿ ಮದುವೆ ಮಾಡಿಸುತ್ತಾರೆ. ಎರಡು ಕುರ್ಚಿ ಅಥವಾ ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಮಾಡಲಾಗುತ್ತದೆ. 

ಇನ್ನು ಈ ಮದುವೆ ಶಾಸ್ತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಕೊಂಚ ವ್ಯತ್ಯಾಸವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಡುಗ ಅಥವಾ ಹುಡುಗಿ ಮನೆಯಲ್ಲಿ ಮದುವೆ ಮಾಡಿಸುತ್ತಾರೆ. ಕುಟುಂಬದ ಹಿರಿಯ ವ್ಯಕ್ತಿ (ಗುರಿಕ್ಕಾರ) ಈ ಮದುವೆಯನ್ನು ಮಾಡಿಸುತ್ತಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಎರಡು ಕುಟುಂಬಗಳು ಸೇರಿ ಕೂಡ್ಲು ತೀರ್ಥ ಎಂಬಲ್ಲಿಗೆ ತೆರಳಿ ಅಲ್ಲಿರುವ ಜಲಪಾತದ ಬಳಿ ಮದುವೆ ಮಾಡಿ ಬರುತ್ತಾರೆ. ಇನ್ನೂ ಕೆಲವರು ಗೋಕರ್ಣದಲ್ಲಿ ಮದುವೆ ಮಾಡಿಸುತ್ತಾರೆ. ಇನ್ನು ಮದುವೆಯಾದ ಬಳಿಕ ಎರಡೂ ಕುಟುಂಬಗಳು ಸಂಬಂಧವನ್ನೂ ಹಾಗೇ ಉಳಿಸಿಕೊಂಡು ಬರುತ್ತಾರೆ. ಇದು ಇಲ್ಲಿನ ಜನರ ನಂಬಿಕೆ. 

ಇದನ್ನೂ ಓದಿ: Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದಂದು ಭಾರತದ ವೇಳಾಪಟ್ಟಿ ಹೀಗಿದೆ

ಹೀಗೆ ಆತ್ಮಗಳಿಗೆ ಮದುವೆ ಮಾಡುವುದರಿಂದ ಪ್ರೇತಾತ್ಮಗಳು ಸಂಸಾರ ಕಟ್ಟಿಕೊಂಡು ಇತರರಿಗೆ ಸಮಸ್ಯೆ ನೀಡದೆ ಜೀವನ ನಡೆಸುತ್ತವೆ ಎಂಬುದು ಕರಾವಳಿ ಜನರ ಬಲವಾದ ನಂಬಿಕೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News