ಬೆಂಗಳೂರು: ನಾಡಹಬ್ಬ ದಸರಾ ಉತ್ಸವ ಪಕ್ಷ ಮೀರಿ ನಡೆಯುತ್ತದೆ. ಈ ಉತ್ಸವದಲ್ಲಿ ಗಣ್ಯರ ಆಹ್ವಾನಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಮಿತಿ ಮಾಡಿಲ್ಲವೆಂಬುದು ಗಮನಕ್ಕೆ ಬಂದಿದೆ. ಆದರೆ, ಎಲ್ಲ ಗಣ್ಯರನ್ನು ಕರೆ ಹಾಗೂ ಆಹ್ವಾನ ಪತ್ರಿಕೆ ನೀಡಿ ಕರೆಯಲಾಗಿದೆ ಎಂದು ಜಿ.ಟಿ. ದೇವೇಗೌಡರು ಹೇಳಿದ್ದರು. ಸಮಿತಿ ರಚಿಸದೇ ಇರುವುದರಿಂದ ಕಾಂಗ್ರೆಸ್‌ನ ಕೆಲ ಮುಖಂಡರಲ್ಲಿ ಬೇಸರವಿದ್ದರೂ ಅದನ್ನು ಸರಿ ಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಉಪಚುನಾವಣೆಯಲ್ಲಿನ ಗೆಲುವು ಮೈತ್ರಿ ಸುಭದ್ರತೆಯ ಸಂದೇಶ ರವಾನೆ:
ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಒಮ್ಮತದಿಂದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಉಪಚುನಾವಣೆಯಲ್ಲಿನ ಗೆಲುವು ಮೈತ್ರಿ ಸುಭದ್ರತೆಯ ಸಂದೇಶ ರವಾನೆ ಮಾಡಲಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಈ ಐದೂ ಕ್ಷೇತ್ರಗಳಲ್ಲೂ ಎರಡೂ ಪಕ್ಷದವರ ಬೆಂಬಲ ಇದ್ದೇ ಇರಲಿದೆ. ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಜೆಡಿಎಸ್‌ನ ಬೆಂಬಲ ಚೆನ್ನಾಗಿಯೇ ಇದೆ. ನಮ್ಮ ಒಮ್ಮತದ ಬಗ್ಗೆ ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ಅವರ ವಿಶ್ಲೇಷಣೆ ನಮಗೆ ಬೇಕಾಗಿಲ್ಲ ಎಂದರು.
ಇಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಉಪಚುನಾವಣೆಯಿಂದ ಐದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ನಮ್ಮ ಸಮ್ಮಿಶ್ರ ಸರಕಾರ ಇನ್ನೂ ಬಲವಾಗಲಿದೆ ಎಂಬ ಸಂದೇಶ ರವಾನಿಸಲಿದ್ದೇವೆ. ಇದರಿಂದ ಬಿಜೆಪಿ ಅವರ ಮುಖಭಂಗವಾಗಲಿದೆ ಎಂದರು.
ಬಳ್ಳಾರಿ ಕ್ಷೇತ್ರ ಮೀಸಲು ಕ್ಷೇತ್ರವಾದ್ದರಿಂದ ಉಗ್ರಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ. ಅದಕ್ಕಿಂತ ಮುಖ್ಯವಾಗಿ ನಮ್ಮ ಪಕ್ಷದ ಹಿರಿಯ ಮುಖಂಡರು. ಇಲ್ಲಿ ಜಾತಿವಾದ ಯಾವುದೂ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.