ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ : ಶಿವಲಿಂಗೇಗೌಡ - ಹೆಚ್‌ಡಿಕೆ ನಡುವೆ ವಾಗ್ವಾದ

ಬಿಜೆಪಿ ಸದಸ್ಯರ ಮುಂದುವರೆದ ಧರಣಿ ನಡುವೆಯೇ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಆಕ್ರೋಶಭರಿತ ವಾಗ್ವಾದ ನಡೆಯಿತು

Written by - RACHAPPA SUTTUR | Edited by - Krishna N K | Last Updated : Jul 4, 2023, 04:20 PM IST
  • ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ.
  • ಶಿವಲಿಂಗೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವೆ ಆಕ್ರೋಶಭರಿತ ವಾಗ್ವಾದ.
  • ಬಿಜೆಪಿ ಸದಸ್ಯರ ಮುಂದುವರೆದ ಧರಣಿ ನಡುವೆಯೇ ಶೂನ್ಯವೇಳೆಯಲ್ಲಿ ಪ್ರಸಂಗ.
 ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ : ಶಿವಲಿಂಗೇಗೌಡ - ಹೆಚ್‌ಡಿಕೆ ನಡುವೆ ವಾಗ್ವಾದ title=

ಬೆಂಗಳೂರು : ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ ಕುರಿತು ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಆಕ್ರೋಶಭರಿತ ವಾಗ್ವಾದ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ಬಿಜೆಪಿ ಸದಸ್ಯರ ಮುಂದುವರೆದ ಧರಣಿ ನಡುವೆಯೇ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ, ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಬ್ಬರಿಗೆ ಸೂಕ್ತ ರೀತಿಯಲ್ಲಿ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು. 

ಇದನ್ನೂ ಓದಿ: ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೊಬ್ಬರಿಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಸ್ಥಗಿತಗೊಳಿಸಿದೆ. ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೆಂಗು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರ ನೆರವಿಗೆ ಬಾರದ ಬಿಜೆಪಿ ಸದಸ್ಯರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಈ ಹಂತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎದ್ದುನಿಂತು, ಶಿವಲಿಂಗೇಗೌಡರ ವಿರುದ್ಧ ತಿರುಗಿ ಬಿದ್ದರು.  ಬಿಜೆಪಿ ವಿರುದ್ಧ ಶಿವಲಿಂಗೇಗೌಡರ ಆರೋಪವನ್ನು ತಳ್ಳಿಹಾಕುವ ಮೂಲಕ ಬಿಜೆಪಿ ಪರ ನಿಂತರು. 
ಮಾತು ಮುಂದುವರಿಸಿದ ಹೆಚ್ ಡಿಕೆ, ಶಿವಲಿಂಗೇಗೌಡರಿಗೆ ಏಕಾಏಕಿ ತೆಂಗು ಬೆಳೆಗಾರರ ಬಗ್ಗೆ ಅನುಕಂಪ ಬಂದಿದೆ. ಕಾಂಗ್ರೆಸ್ ನಾಯಕರೇ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 15 ಸಾವಿರ ರೂ. ನೀಡಿ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರಲ್ಲದೆ, ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಸದನಲ್ಲಿ ಪ್ರದರ್ಶಿಸಿದರು. ಕುಮಾರಸ್ವಾಮಿ ಅವರ ಬೆಂಬಲಕ್ಕೆ ಅವರ ಸಹೋದರ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಧ್ವನಿಗೂಡಿಸಿದರು. 

ಇದನ್ನೂ ಓದಿ: 23 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಶಿಕ್ಷಕ

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿವಲಿಂಗೇಗೌಡ ಮತ್ತು ಕುಮಾರಸ್ವಾಮಿ ಅವರ ನಡುವೆ ಬಹಳ ಸಮಯ ನೇರ ನೇರ ಮಾತಿನ ಚಕಮಕಿ ನಡೆಯಿತು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ರೈತರ ಸಮಸ್ಯೆಗಳ ಗಂಭೀರ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳ ಸದಸ್ಯರು ಧರಣಿ ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಮಾಡಿದ ಮನವಿ ಫಲ ನೀಡಲಿಲ್ಲ. 

ಜೆಡಿಎಸ್ ಸದಸ್ಯರ ಧರಣಿ : ಇತ್ತ ಜೆಡಿಎಸ್ ಸದಸ್ಯರು ತೆಂಗು ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ನಾವು ಸಹ ರೈತರ ಸಮಸ್ಯೆ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಕಳುಹಿಸಿದ್ದೇವೆ. ನಮಗೂ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿ ಸಭಾಧ್ಯಕ್ಷದ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. 

ಇದನ್ನೂ ಓದಿ: ಸದನದಲ್ಲಿ ಕಾಂಗ್ರೆಸ್‌-ಬಿಜೆಪಿ ಸದಸ್ಯರ ನಡುವೆ ಗ್ಯಾರಂಟಿ ಗುದ್ದಾಟ

ನಮಗೂ ಧೋಖಾ, ನಿಮಗೂ ಧೋಖಾ : ಈ ಮಧ್ಯೆ ಬಿಜೆಪಿ ಸದಸ್ಯರು ಸದನ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿ, ನಮಗೂ ಧೋಖಾ, ನಿಮಗೂ ಧೋಖಾ ಎಂದು ಘೋಷಣೆ ಕೂಗಿದರು.  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಡಿಎನ್‌ಎ ದಲ್ಲಿಯೇ  ದೋಖಾ ಇದೆ. ಸ್ಪೀಕರ್ ಅವರೇ ನಿಮಗೂ ಧೋಖಾ ಮಾಡಿದ್ದಾರೆ. ಅದಕ್ಕೆ ನಿಮ್ಮನ್ನು ಮೇಲೆ ಕೂರಿಸಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಕೂಗಿದರು.  
ಪ್ರತ್ಯೇಕ ವಿಚಾರಗಳಿಗೆ ಸಂಬಂಧಿಸಿದಂತೆ  ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ಮುಂದುವರಿಸಿ ಗದ್ದಲ ಎಬ್ಬಿಸಿದ್ದರಿಂದ ಉಂಟಾದ ಗೊಂದಲದ ನಡುವೆ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News