'ಚಂಪಾ' ಇನ್ನಿಲ್ಲ: ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ನಿಧನ, ಸಿಎಂ ಸಂತಾಪ

Champa:ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (Chandrashekar Patil) ಇಂದು ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. 

Edited by - Chetana Devarmani | Last Updated : Jan 10, 2022, 09:17 AM IST
  • ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ನಿಧನ
  • "ಚಂಪಾ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಂದ್ರಶೇಖರ ಪಾಟೀಲರು
  • ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದವರು ಚಂಪಾ
'ಚಂಪಾ' ಇನ್ನಿಲ್ಲ: ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ನಿಧನ, ಸಿಎಂ ಸಂತಾಪ   title=
ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ

ಬೆಂಗಳೂರು: ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (Chandrashekar Patil) ಇಂದು ಬೆಳಿಗ್ಗೆ 6.30 ಕ್ಕೆ ನಿಧನರಾಗಿದ್ದಾರೆ. 

ಮೂಲತಃ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರಾದ ಚಂದ್ರಶೇಖರ ಪಾಟೀಲರು, ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ, ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಕೊಡುಗೆ ಅಪಾರ. 

"ಚಂಪಾ" (Champa) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಂದ್ರಶೇಖರ ಪಾಟೀಲ, ಒಬ್ಬ ಭಾರತೀಯ ಕವಿ, ನಾಟಕಕಾರರು. ಅವರನ್ನು ಬಂಡಾಯ ಚಳವಳಿಯ ಪ್ರಮುಖ ಧ್ವನಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 

ಗೋಕಾಕ್ ಚಳವಳಿ ( Gokak agitation) ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದವರು ಚಂಪಾ.  

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ( Karnatak University Dharwad) ಇಂಗ್ಲಿಷ್ ವಿಭಾಗದಲ್ಲಿ ಅವರು ಪ್ರಾಧ್ಯಾಪಕರಾಗಿ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಕ್ರಮಣ (Sankramana) ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.  

1964ರಲ್ಲಿ ತಮ್ಮ ಇಬ್ಬರು ಗೆಳೆಯರಾದ ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜ್ ಅವರೊಂದಿಗೆ ಆರಂಭವಾದ 'ಸಂಕ್ರಮಣ' ಎಂಬ ಪ್ರಭಾವಿ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಚಂಪಾ ಅವರು ಗೋಕಾಕ್ ಚಳವಳಿ, ಬಂಡಾಯ ಚಳವಳಿ, ತುರ್ತುಪರಿಸ್ಥಿತಿ ವಿರೋಧಿ ಆಂದೋಲನ, ಮಂಡಲ್ ವರದಿ ಅನುಷ್ಠಾನ, ರೈತ ಚಳವಳಿ ಅಂತಹ ಅನೇಕ ಸಾಮಾಜಿಕ ಮತ್ತು ಸಾಹಿತ್ಯಿಕ ಚಳವಳಿಗಳನ್ನು ಮುನ್ನಡೆಸಿದ್ದಾರೆ. 

ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆ: ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಜ್ವರ, ಆತಂಕ ವ್ಯಕ್ತಪಡಿಸಿದ ಸಚಿವ ಕಾರಜೋಳ

ಪಾಟೀಲರು ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ( Kannada Sahitya Parishat) ಅಧ್ಯಕ್ಷರಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ( Kannada Development Authority) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 

ಕನ್ನಡ ನಾಡು-ನುಡಿ, ಸಂಸ್ಕೃತಿ ಯ ರಕ್ಷಣೆಗಾಗಿ ಹೋರಾಡುತ್ತಾ ಬಂದಿರುವ ಚಂಪಾ. ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನೇ ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದವರು. ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನೂ ಉತ್ತೇಜಿಸಲು 'ಪುಸ್ತಕ ಸಂತೆ' ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪರಿಷತ್ತಿಗೆ ತನ್ನದೇ ಆದ ವೆಬ್‌ಸೈಟ್‌, ಇ-ಮೇಲ್ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಡೆಸಿದವರು ಚಂಪಾ.

ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದರು. ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದರು. ತಮ್ಮ ಗೆಳೆಯ ಹಾಗೂ ವಚನ ವಿದ್ವಾಂಸರಾದ ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಪ್ರತಿಭಟಿಸಿ ಇತ್ತೀಚೆಗೆ ಕರ್ನಾಟಕ ಸರ್ಕಾರದ ಅತ್ಯುನ್ನತ ಸಾಹಿತ್ಯ ಗೌರವವಾದ ಪಂಪ ಪ್ರಶಸ್ತಿಯನ್ನು ಹಿಂದಿರುಗಿಸಿದರು. 

ಬಾನುಲಿ, ಮಧ್ಯಬಿಂದು, ಗಾಂಧಿ ಸ್ಮರಣೆ ಎಂಬ ಕವನಗಳನ್ನು ರಚಿಸಿದ್ದಾರೆ. ಇವರ ಅರ್ಧ ಸತ್ಯದ ಹುಡುಗಿ ಎಂಬ ಕವನಕ್ಕೆ 1989 ರ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಪ್ಪ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲ ರಾತ್ರಿ ಸೇರಿದಂತೆ ಅನೇಕ ನಾಟಕಗಳನ್ನು ಬರೆದಿದ್ದಾರೆ. 

ಚಂಪಾ ನಿಧನಕ್ಕೆ ಸಿಎಂ ಸಂತಾಪ:

ಚಂಪಾ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿ ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಕೋರಿದ್ದಾರೆ.

ಕನ್ನಡ ಸಾಹಿತ್ಯ ಲೋಕದ ಹಿರಿಯರು, ಗಣ್ಯರು, ಅಭಿಮಾನಿಗಳು ಸೇರಿದಂತೆ ರಾಜಕೀಯ ಹಿರಿಯ ನಾಯಕರು ಚಂಪಾ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. 

ಇದನ್ನೂ ಓದಿ: "ಬಸವರಾಜ ಬೊಮ್ಮಾಯಿ ಅವರೇ ನಿಮಗೆ ನಮ್ಮನ್ನು ಮತ್ತೆ ಜೈಲಲ್ಲಿ ನೋಡುವ ಆಸೆ ಇದೆ, ನಮ್ಮನ್ನು ಜೈಲಿಗೆ ಹಾಕಿ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News