ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ಎದುರಿಸುವುದೇ ಒಳ್ಳೆಯದು ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಮತ್ತೆ ಚುನಾವಣೆ ಬಂದರೆ ಖಂಡಿತಾ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಇದು ಚುನಾವಣೆಗೆ ಹೋಗುವ ಸಮಯವಲ್ಲ. ಒಬ್ಬ ಶಾಸಕನಾಗಿ, ಸಚಿವನಾಗಿ ನಾನು ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಹಾಗಾಗಿ ಸರ್ಕಾರ ವಿಸರ್ಜಿಸುವ ಸಮಯ ಇದಲ್ಲ. ಒಂದು ವೇಳೆ ವಿಸರ್ಜನೆಯಾದರೆ ಚುನಾವಣೆಯನ್ನು ಎದುರಿಸಲೇಬೇಕಾಗುತ್ತದೆ ಎಂದು ಅವರು ಹೇಳಿದರು.
ಕಳೆದ ಒಂದು ತಿಂಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರ ಹಗ್ಗಜಗ್ಗಾಟ ಮುಂದುವರೆದಿದೆ. ಇದರಿಂದಾಗಿ ಅಧಿಕಾರಿಗಳೂ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದು ಹೀಗೆ ಮುಂದುವರೆದರೆ ಸರ್ಕಾರ ವಿಸರ್ಜಿಸುವುದೇ ಒಳ್ಳೆಯದು ಎಂದು ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದರು.