ಬಿಜೆಪಿಯ ಅಶ್ವಮೇಧ ಯಾಗದ ಕುದುರೆ ಕಟ್ಟಿಹಾಕುತ್ತೇವೆ: ರಾಮಲಿಂಗಾರೆಡ್ಡಿ

ಗೋ ವಧೆ ನಿಷೇಧವನ್ನು ವೈಯಕ್ತಿಕವಾಗಿ ನಾನು ಬೆಂಬಲಿಸುತ್ತೇನೆ. ಕೇವಲ ಗೋಹತ್ಯೆ ಮಾತ್ರವಲ್ಲ ಯಾವುದೇ ಪ್ರಾಣಿಯ ವಧೆಯನ್ನೂ ನಾನು ವಿರೋಧಿಸುತ್ತೇನೆ. ಆದರೆ ಗೋಹತ್ಯೆ ನಿಷೇಧಕ್ಕೂ ಮೊದಲು ನಮ್ಮ ದೇಶದಿಂದ ಗೋಮಾಂಸ ರಫ್ತು ಮಾಡುವುದನ್ನು ಯಾಕೆ ನಿಷೇಧ ಮಾಡಿಲ್ಲ- ರಾಮಲಿಂಗಾರೆಡ್ಡಿ

Last Updated : Mar 31, 2018, 06:54 PM IST
ಬಿಜೆಪಿಯ ಅಶ್ವಮೇಧ ಯಾಗದ ಕುದುರೆ ಕಟ್ಟಿಹಾಕುತ್ತೇವೆ: ರಾಮಲಿಂಗಾರೆಡ್ಡಿ title=

ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ಕರ್ನಾಟಕದಲ್ಲಿ ನಾವು ಕಟ್ಟಿಹಾಕುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ 12-13 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಇದು ಅದೃಷ್ಟವೋ, ದುರದೃಷ್ಟವೋ ಗೊತ್ತಿಲ್ಲ, ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ, ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ನಾವು ಕಟ್ಟಿಹಾಕುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಮಾಡುವ ಹೇಳಿಕೆಯನ್ನು ಅಮಿತ್ ಶಾ, ಯೋಗಿ ಆದಿತ್ಯನಾಥ್ ನೀಡಿದ್ದಾರೆ. ಗೋ ವಧೆ ನಿಷೇಧವನ್ನು ವೈಯಕ್ತಿಕವಾಗಿ ನಾನು ಬೆಂಬಲಿಸುತ್ತೇನೆ. ಕೇವಲ ಗೋಹತ್ಯೆ ಮಾತ್ರವಲ್ಲ ಯಾವುದೇ ಪ್ರಾಣಿಯ ವಧೆಯನ್ನೂ ನಾನು ವಿರೋಧಿಸುತ್ತೇನೆ. ಆದರೆ ಗೋಹತ್ಯೆ ನಿಷೇಧಕ್ಕೂ ಮೊದಲು ನಮ್ಮ ದೇಶದಿಂದ ಗೋಮಾಂಸ ರಫ್ತು ಮಾಡುವುದನ್ನು ಯಾಕೆ ನಿಷೇಧ ಮಾಡಿಲ್ಲ ಎಂದು ಪ್ರಶ್ನಿಸಿದರು.

ಕಳೆದ ನಾಲ್ಕು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ನೀವು ಗೋಮಾಂಸ ರಫ್ತು ನಿಷೇಧಿಸಿಲ್ಲ,ಬದಲಾಗಿ ಮೋದಿ‌ ಆಡಳಿತದಲ್ಲಿ ಗೋಮಾಂಸ ರಫ್ತು ಮಾಡುವಲ್ಲಿ ಇಂದು ಸ್ಥಾನ ಹೆಚ್ಚಳ‌ಕಂಡು ಎರಡನೇ ಸ್ಥಾನಕ್ಕೆ ಬಂದಿದೆ.2017 ರಲ್ಲಿ 1850 ಮೆಟ್ರಿಕ್ ಟನ್ ಗೋ ಮಾಂಸ ರಫ್ತು ಮಾಡಲಾಗಿದೆ.2015-16 ರಲ್ಲಿ 26682 ಕೋಟಿ ದೇಶಕ್ಕೆ ಆದಾಯ ಬಂದಿದೆ, ನಿಜವಾದ ಕಾಳಜಿ ಇದ್ದರೆ ಈ ಹಣದ ಆಸೆ ಬಿಟ್ಟು ಗೋ ಮಾಂಸ ರಫ್ತು ನಿಲ್ಲಿಸಿ ಎಂದು ಆಗ್ರಹಿಸಿದರು.

ಮಹಾರಾಷ್ಟ್ರ,ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತವಿದೆ. ಇಲ್ಲಿಯೇ ಹೆಚ್ಚು ಗೋಮಾಂಸ ಸಂಸ್ಕರಣ ಘಟಕಗಳು ಇವೆ, ಸಾಕಷ್ಟು ಕಂಪನಿಗೆ ಬಿಜೆಪಿ ನಾಯಕರೇ ಪಾಲುದಾರರು ಇದ್ದಾರೆ. ಗೋವಾದಲ್ಲೂ ಬಿಜೆಪಿ ಸರ್ಕಾರ ಇದೆ ಇಲ್ಲ ಪ್ರತಿದಿನ 30-50 ಟನ್  ಗೋ ಮಾಂಸ ಬಳಕೆಯಾಗುತ್ತಿದೆ.ಈಶಾನ್ಯ ರಾಜ್ಯಗಳಲ್ಲಿಯೂ ಬಿಜೆಪಿ‌ ಗೆಲುವು ಸಾಧಿಸಿದೆ, ಅಲ್ಲಿಯೂ ಕೂಡ ಗೋ ಮಾಂಸ ಹೆಚ್ಚು ಬಳಕೆ ಮಾಡಲಾಗುತ್ತಿದ, ಅಲ್ಲಿ ಯಾಕೆ ನಿಲ್ಲಿಸುವುದಿಲ್ಲ, ಬರೀ ಕರ್ನಾಟಕದಲ್ಲಿ ಯಾಕೆ ಗೋಹತ್ಯೆ ನಿಷೇಧದ ಭರವಸೆ ಕೊಡುತ್ತಾರೆ?ಗೋವಧ ನಿಲ್ಲಿಸುವ ನಾಟಕ ಬಿಟ್ಟು ಎಲ್ಲಾ ಪ್ರಾಣಿವಧೆ ನಿಷೇಧಿಸಿ ಎಂದು ಆಗ್ರಹಿಸಿದರು.

ಮೋದಿ‌ ಸರ್ಕಾರ ಬಂದ ಬಳಿಕ ಪ್ರತಿ ವರ್ಷ ಶೇ.14 ರಷ್ಟು ಗೋ ಮಾಂಸ ರಫ್ತು ಹೆಚ್ಚಾಗುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯಾ ಡೆಟಾ ದಿಂದ ಮಾಹಿತಿ ಬಂದಿದೆ. ಇದರಿಂದಲೇ ಗೊತ್ತಾಗುತ್ತದೆ ಬಿಜೆಪಿಯವರು ಗೋ ಮಾಂಸ ವಿಚಾರದಲ್ಲಿ ಎಷ್ಟು ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಕಾಲೆಳೆದರು.

ಅಮಿತ್ ಶಾ ಚುನಾವಣಾ ಗಿಮಿಕ್
ಚಿತ್ರದುರ್ಗದ ಹೊಳಲ್ಕೆರೆಯಲ್ಲಿನ ಬಿಜೆಪಿ ಪರಿವರ್ತನಾ ಯಾತ್ರೆಗೆ ತುಮಕೂರು ಮಾರ್ಗದ ಮೂಲಕ ಹೋದರೂ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿಲ್ಲ, ಮೈಸೂರಿಗೆ ಹಿಂದೆ ಹಲವು ಬಾರಿ ಅಮಿತ್ ಶಾ ಭೇಟಿ ನೀಡಿದ್ದರೂ ಮಹಾರಾಜರು ನೆನಪಾಗಿರಲಿಲ್ಲ, ಈಗ ಚುನಾವಣೆ ಘೋಷಣೆಯಾಗಿತ್ತಿದ್ದಂತೆ ಅವರಿಗೆ ಸಿದ್ದಗಂಗಾ ಶ್ರೀಗಳು, ಮೈಸೂರು ಮಹಾರಾಜರ ನೆನಪಾಗಿದೆ, ಇದೆಲ್ಲಾ ಕೇವಲ ಚುನಾವಣಾ ಗಿಮಿಕ್ ಮಾತ್ರ ಎಂದು ಟೀಕಿಸಿದರು. 

Trending News