ಇಂದಿನಿಂದ ಬೆಳಗಾವಿ ಅಧಿವೇಶನ

ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. 

Last Updated : Dec 10, 2018, 08:52 AM IST
ಇಂದಿನಿಂದ ಬೆಳಗಾವಿ ಅಧಿವೇಶನ title=

ಬೆಳಗಾವಿ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ ರೈತರ ಸಮಸ್ಯೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದ್ದು, ಅಧಿವೇಶನಕ್ಕೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ.

ಕಬ್ಬು ಬೆಳೆಗಾರರ ಪ್ರತಿಭಟನೆ, ರೈತರ ಸಾಲ ಮನ್ನಾ, ಬರ ಪರಿಹಾರ ಹಾಗೂ ನೀರಾವರಿ ಸಂಬಂಧಿತ ವಿಷಯಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳು ಸದನದಲ್ಲಿ ಕಾವೇರಲಿವೆ.

ನೂತನ ಸರ್ಕಾರ ಸ್ಥಾಪನೆಯಾದ ಬಳಿಕ ಬೆಳಗಾವಿಯಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನದ ಭದ್ರತೆಗಾಗಿ 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ:
ಅಧಿವೇಶನದ ವೆಚ್ಚಕ್ಕೆ ಕಡಿವಾಣ ಹಾಕಲು ನಿಯಮ ಬಾಹಿರವಾಗಿ ವಿಶೇಷ ಅಧಿಕಾರಿ ನೇಮಕ ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಆಯುಕ್ತ ಉಜ್ವಲ್‌ಕುಮಾರ್ ಘೋಷ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅಧಿವೇಶನದಲ್ಲಿ ಭಾಗವಹಿಸುವ ಶಾಸಕರಿಗೆ ಈ ಬಾರಿ ಕೇವಲ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಉಪಹಾರ ಮತ್ತು ರಾತ್ರಿ ಊಟವನ್ನು ಶಾಸಕರು ತಮಗೆ ಸಿಗುವ ಭತ್ಯೆಯಲ್ಲಿಯೇ ಸೇವಿಸಬೇಕು. ತಮ್ಮ ಪಿಎ, ಗನ್‌ಮ್ಯಾನ್, ಡ್ರೈವರ್‌ಗಳ ಊಟಕ್ಕೆ ಶಾಸಕರೇ ವೆಚ್ಚ ಭರಿಸಬೇಕು. ಶಾಸಕರಿಗೆ ಮಾತ್ರ ರೂಂ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಟನೆ ಬಿಸಿ:
ಒಂದೆಡೆ ಬಿಜೆಪಿಯವರು ರೈತರ ಸಮಾವೇಶ ಹಮ್ಮಿಕೊಂಡಿದ್ದರೆ, ಮತ್ತೂಂದೆಡೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಬ್ಬು ಬೆಳೆಗಾರರು ಬಾಕಿ ಪಾವತಿಗಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಹೀಗಾಗಿ, ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆಯ ಬಿಸಿ ಕಾವೇರಲಿದೆ.
 

Trending News