ನವದೆಹಲಿ : 2002 ರಲ್ಲಿ ಗುಜರಾತ್ನ ಗೋದ್ರಾ ಗಲಭೆಯ ಬಳಿಕ ಹಾನಿಗೊಳಗಾಗಿದ್ದ ದೇವಾಲಯಗಳ ಪುನರ್ ನಿರ್ಮಾಣಕ್ಕೆ ಗುಜರಾತ್ ಸರ್ಕಾರ ಪರಿಹಾರ ನೀಡಬೇಕೆಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
2012 ರಲ್ಲಿ ಗುಜರಾತ್ ಹೈಕೋರ್ಟ್ 2002 ರ ಗೋಧ್ರಾ ದಂಗೆಯಿಂದ ಗುಜರಾತ್ ನಲ್ಲಿ ಹಾನಿಗೊಳಗಾಗಿದ್ದ 500 ಧಾರ್ಮಿಕ ಕಟ್ಟಡಗಳ ಮರುಸ್ಥಾಪನೆಗೆ ಗುಜರಾತ್ ಸರ್ಕಾರ ಪರಿಹಾರ ನೀಡುವಂತೆ ತೀರ್ಪುನೀಡಿತ್ತು. ಈ ಸಂಬಂಧ ಹೈಕೋರ್ಟ್ ಆದೇಶ ಪ್ರಶ್ನಿಸಿ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಪಿ.ಸಿ.ಪಂತ್ ಅವರ ಪೀಠವು ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯದ ಗಲಭೆಯ ಸಮಯದಲ್ಲಿ ಹಾನಿಗೊಳಗಾದ ಧಾರ್ಮಿಕ ಮಂದಿರಗಳ ಮರುಸ್ಥಾಪನೆಗೆ ಪರಿಹಾರ ನೀಡುವಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.
ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ, ಹತ್ಯಾಕಾಂಡದ ಸಂದರ್ಭದಲ್ಲಿ ಹಾನಿಗೊಳಗಾಗಿದ್ದ ಅಂಗಡಿಗಳು ಮತ್ತು ಮನೆಗಳ ದುರಸ್ಥಿ ಕಾರ್ಯಕ್ಕೆ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಯ ಪ್ರತಿಯನ್ನು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ನ್ಯಾಯವಾದಿ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.