ಮೇಕೆದಾಟು ಯೋಜನೆ: ಮತ್ತೆ ಕ್ಯಾತೆ ತೆಗೆದ ತಮಿಳುನಾಡು

ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಅನುಮತಿ ನೀಡದಂತೆ ಕೋರಿ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ.

Last Updated : Nov 28, 2018, 09:43 AM IST
ಮೇಕೆದಾಟು ಯೋಜನೆ: ಮತ್ತೆ ಕ್ಯಾತೆ ತೆಗೆದ ತಮಿಳುನಾಡು title=
File Image

ನವದೆಹಲಿ: ಮೇಕೆ ದಾಟು ಯೋಜನೆಗೆ ಕೇಂದ್ರ ಜಲ ಆಯೋಗವು (ಸಿಡಬ್ಲೂಸಿ) ಸಮಗ್ರ ಯೋಜನಾ ವರದಿ (ಡಿಪಿಆರ್‌) ಕೇಳಿರುವ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಯೋಜನೆಯನ್ನು ತಡೆಯುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡಿಗೆ ಅನ್ಯಾಯವಾಗುತ್ತದೆ. ಕರ್ನಾಟಕ ಈ ಯೋಜನೆಯನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೈಗೆತ್ತಿಕೊಂಡಿಲ್ಲ. ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶಕ್ಕೂ ಹಾನಿಯಾಗುತ್ತದೆ. ಇದಲ್ಲದೇ ಕಾವೇರಿ ನ್ಯಾಯಾಧೀಕರಣ ವಿರುದ್ಧದ ನಿಲುವಾಗಿದೆ. ಹೀಗಾಗಿ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಬೇಕೆಂದು ಎಂದು ತಮಿಳುನಾಡು ಸರ್ಕಾರ ಪತ್ರದಲ್ಲಿ ಉಲ್ಲೇಖಿಸಿದೆ.

ಕೇಂದ್ರ ಜಲ ಆಯೋಗ ಮಂಗಳವಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿತ್ತು. ಯೋಜನೆ ಕುರಿತು ವಿವರವಾದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಪ್ರಧಾನಿಯವರು ಮಧ್ಯ ಪ್ರವೇಶಿಸಬೇಕು ಹಾಗೂ ಯೋಜನೆಗೆ ತಡೆ ನೀಡಬೇಕೆಂದು ತಮಿಳುನಾಡು ಸಿಎಂ ಪತ್ರದಲ್ಲಿ ಕೋರಿದ್ದಾರೆ. ಈ ಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿದ್ದು, ಇಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
 

Trending News