ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ, ಮೊದಲ ದಿನದಾಟದಲ್ಲಿ 89 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲೆರಡು ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಮುರಳಿ ವಿಜಯ್ ಮತ್ತು ಕೆ.ಎಲ್. ರಾಹುಲ್ ಬದಲು ಹನುಮ ವಿಹಾರಿ ಮತ್ತು ಮಯಾಂಕ್ ಅಗರ್ವಾಲ್ರನ್ನು ಆರಂಭಿಕರಾಗಿ ಕಣಕ್ಕಿಳಿಸಿತು.
ಮೂರನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (76), ಚೇತೇಶ್ವರ್ ಪೂಜಾರ (68) ಮತ್ತು ನಾಯಕ ವಿರಾಟ್ ಕೊಹ್ಲಿ (47) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿದೆ. ಪ್ರಾರಂಭದಲ್ಲಿ ಮಾಯಾಂಕ್ ಅಗರವಾಲ್ ರನ್ನು ತಂಡದಿಂದ ಕೈಬಿಡಲಾಗಿತ್ತಾದರೂ ಉದಯೋನ್ಮುಖ ಪೃಥ್ವಿ ಶಾ ಗಾಯಗೊಂಡ ಹಿನ್ನೆಲೆಯಲ್ಲಿ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗಾಗಿ ಮಾಯಾಂಕ್ ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
Fifty on Test debut for @mayankcricket 👏👏 👏 #TeamIndia #AUSvIND pic.twitter.com/zpJijgerzT
— BCCI (@BCCI) December 26, 2018
ಕರ್ನಾಟಕದ ಮಾಯಾಂಕ್ ಅಗರ್ವಾಲ್ ಚೊಚ್ಚಲ ಪಂದ್ಯದಲ್ಲೇ 76 ರನ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಆಸೀಸ್ ನೆಲದಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.