ಬಿಜೆಪಿಯ "ಜನತಾ ಪ್ರಣಾಳಿಕೆ" ಬಗ್ಗೆ ಸಿದ್ದರಾಮಯ್ಯ ಕಿಡಿ

ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ‘’ಜನತಾ ಪ್ರಣಾಳಿಕೆ’’ ಎಂದು ಕರೆದಿರುವುದು  ಅರ್ಥಪೂರ್ಣವಾಗಿದೆ.ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ ಎನ್ನುವದೇ ಇದರ ಅರ್ಥವಾಗಿದೆ.

Written by - Prashobh Devanahalli | Edited by - Manjunath N | Last Updated : May 1, 2023, 06:40 PM IST
  • ಪಡಿತರ ಚೀಟಿ ಮೂಲಕ ನೀಡಲಾಗುತ್ತಿದ್ದ 7 ಕಿಲೋ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿ ಅನ್ನವನ್ನು ಕಸಿದುಕೊಂಡಿದೆ
  • ರಾಜ್ಯದಲ್ಲಿ 10.12 ಲಕ್ಷ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡುವ ಮೂಲಕ ಅಕ್ಷರವನ್ನು ಕಸಿದುಕೊಂಡಿದೆ
  • ಕೊರೊನಾ ರೋಗ ನಿರ್ವಹಣೆಯಲ್ಲಿನ ನಿರ್ಲಕ್ಷ ಮತ್ತು ಭ್ರಷ್ಟಾಚಾರದಿಂದಾಗಿ ಜನತೆಯ ಆರೋಗ್ಯವನ್ನು ಕಸಿದುಕೊಂಡಿದೆ
ಬಿಜೆಪಿಯ "ಜನತಾ ಪ್ರಣಾಳಿಕೆ" ಬಗ್ಗೆ ಸಿದ್ದರಾಮಯ್ಯ ಕಿಡಿ title=
file photo

ಬೆಂಗಳೂರು: ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ‘’ಜನತಾ ಪ್ರಣಾಳಿಕೆ’’ ಎಂದು ಕರೆದಿರುವುದು  ಅರ್ಥಪೂರ್ಣವಾಗಿದೆ.ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ ಎನ್ನುವದೇ ಇದರ ಅರ್ಥವಾಗಿದೆ.ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ  ಅನ್ನ, ಅಭಯ, ಅಕ್ಷರ, ಅಭಿವೃದ್ದಿ ಮತ್ತು ಆದಾಯಗಳ ಭರವಸೆಗಳನ್ನು ನೀಡಿದೆ. ಕಳೆದ ಮೂರು ವರೆ ವರ್ಷಗಳ ಅವಧಿಯ ರಾಜ್ಯದ ಬಿಜೆಪಿ ಸರ್ಕಾರ ಈ ಐದು ಭರವಸೆಗಳನ್ನು ಜನರಿಂದ ಕಸಿದುಕೊಂಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಪಡಿತರ ಚೀಟಿ ಮೂಲಕ ನೀಡಲಾಗುತ್ತಿದ್ದ 7 ಕಿಲೋ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿ ಅನ್ನವನ್ನು ಕಸಿದುಕೊಂಡಿದೆ.ರಾಜ್ಯದಲ್ಲಿ 10.12 ಲಕ್ಷ ಮಕ್ಕಳು ಶಾಲೆಯನ್ನು ತೊರೆಯುವಂತೆ ಮಾಡುವ ಮೂಲಕ ಅಕ್ಷರವನ್ನು ಕಸಿದುಕೊಂಡಿದೆ.ಕೊರೊನಾ ರೋಗ ನಿರ್ವಹಣೆಯಲ್ಲಿನ ನಿರ್ಲಕ್ಷ ಮತ್ತು ಭ್ರಷ್ಟಾಚಾರದಿಂದಾಗಿ ಜನತೆಯ ಆರೋಗ್ಯವನ್ನು ಕಸಿದುಕೊಂಡಿದೆ.ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ 40% ಕಮಿಷನ್ ಹಾವಳಿಯ ಮೂಲಕ ಅಭಿವೃದ್ದಿಯನ್ನು ಕಸಿದುಕೊಂಡಿದೆ.ರಾಜ್ಯದ ಗೃಹಸಚಿವರ ಅದಕ್ಷತೆ ಮತ್ತು ಭ್ರಷ್ಟತೆಯಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಮಾತ್ರವಲ್ಲ ರೌಡಿ-ಗೂಂಡಾಗಳೆಲ್ಲ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಪಡೆದಿರುವ ಕಾರಣ ಜನತೆಯ ಭದ್ರತೆಯ ಅಭಯವನ್ನೂ ಕಸಿದುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ- ನಮ್ಮ ಸರ್ಕಾರದ ಯೋಜನೆಗಳನ್ನೇ ಕಾಂಗ್ರೆಸ್ ಕಾಪಿ ಮಾಡಿದೆ – ಸಿಎಂ ಬೊಮ್ಮಾಯಿ

ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು  ರೂ.410 ರಿಂದ  ರೂ.1105ಕ್ಕೆ ಏರಿಸಿರುವ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿರುವ  ಬಿಜೆಪಿ ಈಗ ಅಡುಗೆ ಅನಿಲದ ಮೂರು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವುದಾಗಿ  ಭರವಸೆ ನೀಡುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಟ್ಟಿದೆ.ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯಲ್ಲಿ  ರಾಜ್ಯದಾದ್ಯಂತ ಪ್ರಾರಂಭಿಸಿದ್ದ 600 ಇಂದಿರಾ ಕ್ಯಾಂಟೀನ್ ಗಳನ್ನು ರಾಜಕೀಯ ದ್ವೇಷಾಸೂಯೆಯಿಂದ ಮುಚ್ಚಿರುವ ಬಿಜೆಪಿ ಈಗ ಅಟಲ್ ಆಹಾರ ಕೇಂದ್ರಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿರುವುದೇ  ಹಾಸ್ಯಾಸ್ಪದ ಎಂದು ಅವರು ಟೀಕಿಸಿದರು.

ಪಡಿತರ ಚೀಟಿಗಳಮೂಲಕ ನೀಡಲಾಗುತ್ತಿದ್ದ ಏಳು ಕಿಲೋ ಉಚಿತ ಅಕ್ಕಿಯನ್ನು ಐದು ಕಿಲೋಗಳಿಗೆ ಇಳಿಸಿದ್ದ ಬಿಜೆಪಿ ಐದು ಕಿಲೋ ಸಿರಿಧಾನ್ಯ ಕೊಡುತ್ತೇವೆ ಎಂದು ಹೇಳಿರುವುದು ಇನ್ನೊಂದು ವಿಪರ್ಯಾಸ.ಹತ್ತು ಲಕ್ಷ ನಿವೇಶನಗಳನ್ನು ವಿತರಿಸುವ ಭರವಸೆ ನೀಡಿರುವ ಇದೇ ಬಿಜೆಪಿ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದೇ ಒಂದು ಹೊಸಮನೆಯನ್ನು ನಿರ್ಮಾಣ ಮಾಡಿಲ್ಲ ಎಂದು ಅವರು ದೂರಿದರು.

ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವಧಿಯ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ಬಿಜೆಪಿ ಸರ್ಕಾರ ನಿರ್ಮಾಣ ಹಂತದಲ್ಲಿದ್ದ ನಮ್ಮ ಕಾಲದ ಮನೆಗಳನ್ನುಪೂರ್ಣಗೊಳಿಸಿ ಅದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಣ್ಣ ಕೈಗಾರಿಕೆಗಳು ಮತ್ತು ಐಟಿಐಗಳ ನಡುವೆ ಒಪ್ಪಂದ ಮಾಡಿಕೊಂಡು ಯುವ ಪ್ರತಿಭೆಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವ ‘ಸಮನ್ವಯ' ಯೋಜನೆಯ ಭರವಸೆಯನ್ನು ಬಿಜೆಪಿ ನೀಡಿದೆ. 2019-2022ರ ನಡುವಿನ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 22.9ರಷ್ಟು ಹೆಚ್ಚಾಗಿದೆ. 2021ರ ಅವಧಿಯಲ್ಲಿ ರಾಜ್ಯದಲ್ಲಿ ನಿರುದ್ಯೋಗದ ಕಾರಣದಿಂದಾಗಿ 1,129 ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ ಮೂರು ವರ್ಷಗಳಲ್ಲಿ 1258 ಕಂಪೆನಿಗಳು ರಾಜ್ಯದಲ್ಲಿ ಮುಚ್ಚಿ 60,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದ 13 ಉದ್ಯಮಗಳು ಮುಚ್ಚಿವೆ.ಈ ಅನಾಹುತಗಳಿಗೆಲ್ಲ ಕಾರಣವಾದ ಬಿಜೆಪಿ ಈಗ ಸಮನ್ವಯ ಎಂಬ ಹೊಸ ಯೋಜನೆಯ ಭರವಸೆಯನ್ನು ನೀಡಿದರೆ ನಂಬುವವರು ಯಾರು? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ- ಸತತ ಸುತ್ತಾಟ: ಲೋ ಬಿಪಿಯಿಂದ ಬಳಲಿದ ವರುಣಾ, ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ

ಐಎಎಸ್/ಕೆಎಎಸ್/ ಬ್ಯಾಂಕಿಂಗ್/ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಪರೀಕ್ಷಾ ತಯಾರಿಯ ಕೋಚಿಂಗ್ ಪಡೆಯಲು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ.ಕಳೆದ ಮೂರುವರೆ ವರ್ಷಗಳಲ್ಲಿ ಪಿಎಸ್‌ಐ, ಕೆಪಿಟಿಸಿಎಲ್ ನೇಮಕಾತಿ ಸೇರಿದಂತೆ ಉದ್ಯೋಗ ನೇಮಕಾತಿಯ ಎಲ್ಲ ನಿರ್ಧಾರಗಳು ಅಂತಿಮವಾಗಿ ಲಂಚ/ಕಮಿಷನ್ ಪಡೆದಿರುವ ಹಗರಣಗಳಾಗಿವೆ. ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ 400 ‘’ನಮ್ಮ ಕ್ಲಿನಿಕ್’’ ಗಳನ್ನು ತೆರೆಯಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಯೋಜನೆಯನ್ನು 2022-23ರ ಬಜೆಟ್ ನಲ್ಲಿ ಬಿಜೆಪಿ ಸರ್ಕಾರ ಘೋಷಿಸಲಾಗಿದ್ದರೂ ಇಲ್ಲಿಯ ವರೆಗೆ ನೂರು  “ನಮ್ಮ ಕ್ಲಿನಿಕ್” ಗಳನ್ನು ತೆರೆದಿಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ಪ್ರಣಾಳಿಕೆ ವಿಚಾರವಾಗಿ ಟೀಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News