LIVE: Karnataka CM Siddaramaiah: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ . ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಲ್ಲಿ ಮುಂದಿನ ಸಿಎಂ ಎಂಬ ರಾಜಕೀಯ ಬಿಕ್ಕಟ್ಟು ಶಮನಗೊಳಿಸಲು ಬುಧವಾರ ತಡರಾತ್ರಿಯವರೆಗೆ ಮಾತುಕತೆ ನಡೆಸಿದ್ದಾರೆ. ಕಡೆಗೂ ಒಮ್ಮತ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮೇ 20 ರಂದು ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

Written by - Bhavishya Shetty | Last Updated : May 18, 2023, 09:16 PM IST
  • CM Decision LIVE Updates:​ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ. ಮೇ 20 ರಂದು ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
LIVE: Karnataka CM Siddaramaiah: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ
Live Blog

CM Decision LIVE Updates: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ . ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಲ್ಲಿ ಮುಂದಿನ ಸಿಎಂ ಎಂಬ ರಾಜಕೀಯ ಬಿಕ್ಕಟ್ಟು ಶಮನಗೊಳಿಸಲು ಬುಧವಾರ ತಡರಾತ್ರಿಯವರೆಗೆ ಮಾತುಕತೆ ನಡೆಸಿದ್ದಾರೆ. ಕಡೆಗೂ ಒಮ್ಮತ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮೇ 20 ರಂದು ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

 

 

 

18 May, 2023

  • 21:16 PM

    ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಅವರಿಗೆ ಶುಭ ಕೋರಿದ ಬಿಎಸ್‌ವೈ

    ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳಲಿರುವ ಸಿದ್ದರಾಮಯ್ಯ ನವರಿಗೆ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ಟೀಟ್‌ ಮೂಲಕ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರು ಶುಭ ಕೋರಿದ್ದಾರೆ.
     

  • 21:10 PM

    ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸಿಎಲ್‌ಪಿ ಲೀಡರ್‌ ಸಿದ್ದರಾಮಯ್ಯ

     

    ಸಿಎಲ್‌ಪಿ ಸಭೆ ಮುಕ್ತಾಯವಾಗಿದ್ದು, ಇದೀಗ ಕಾಂಗ್ರೆಸ್‌ ನಾಯಕರು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಈ ವೇಳೆ ಉಪಸ್ಥಿತರಿದ್ದರು.

     

     

     

     

     

     

  • 21:03 PM

    ಸಿಎಂ, ಡಿಸಿಎಂಗೆ ಶುಭ ಕೋರಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ

    ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ನೀವು ಕರ್ನಾಟಕದ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
     

     

     

     

     

  • 20:30 PM

    ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವಿರೋಧ ಆಯ್ಕೆ..!

    ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿರುವ ಇಂದಿರಾ ಭವನದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರು. ಸದ್ಯ ಮರು ಆಯ್ಕೆಯಾಗಿದ್ದಾರೆ.
     

  • 20:18 PM

    ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ

    ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಕೆಪಿಸಿಸಿ ಕಚೇರಿಯಲ್ಲಿರುವ ಇಂದಿರಾ ಭವನದಲ್ಲಿ ಸಿಎಲ್‌ಪಿ ಸಭೆ ನಡೆಯುತ್ತಿದೆ. ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್​ ಶಿಂಧೆ, ಜಿತೇಂದ್ರ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ನಿಯೋಜಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದಾರೆ.

  • 19:53 PM

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾತ್ರಿ 8.30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದೇವೆ. ಈಗಾಗಲೇ ಅವರ ಭೇಟಿ ಮಾಡಲು ಸಮಯ ಪಡೆದಿದ್ದೇವೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಪಕ್ಷದ ಇತರ ನಾಯಕರು ಸೇರಿದಂತೆ ಒಟ್ಟು 20 ಸದಸ್ಯರ ನಿಯೋಗದೊಂದಿಗೆ ಹೋಗಲಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಹೇಳಿದರು.

  • 19:32 PM

    ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್‌ ಅವರು ಸದಾಶಿವನಗರದಲ್ಲಿರುವ ತಮ್ಮ ಮನೆ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು, ಕೆಲವೇ ಹೊತ್ತಿನಲ್ಲಿ ಶಾಸಕಾಂಗ ಸಭೆಗೆ ಹೋಗುತ್ತೇವೆ. ಸಿಎಲ್‌ಪಿ ಸಭೆ ಬಳಿಕ ರಾಜ್ಯಪಾಲರನ್ನು ಬೇಟಿಯಾಗಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತೇವೆ ಎಂದು ತಿಳಿಸಿದರು.

  • 19:23 PM

    ಚುನಾವಣಾ ಫಲಿತಾಂಶದ ಆರು ದಿನಗಳ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.‌ ಶಿವಕುಮಾರ್ ಆಯ್ಕೆ ಆಗಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದ ತೀರ್ಪು ಒಪ್ಪಿಕೊಳ್ಳಬೇಕಾಗುತ್ತದೆ. ರಾಜಕಾರಣದಲ್ಲಿ ಪಾತ್ರಗಳನ್ನು ತೀರ್ಮಾನಿಸುವುದು ಜನ. ನಮಗೆ ವಿಪಕ್ಷವಾಗಿ ಜನ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಮೇಲೆ ಜನ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ಗ್ಯಾರಂಟಿಗಳ ಮೇಲೆ ಜನರಿಗೆ ದೊಡ್ಡ ವಿಶ್ವಾಸ ಇದೆ. ಅದನ್ನು ಅವರು ಪೂರೈಸಬೇಕಾಗಿದೆ. ಪೂರೈಸುವ ವೇಳೆ ರಾಜ್ಯದ ಆರ್ಥಿಕ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳುವುದು ಕೂಡ ಅವರ ಜವಾಬ್ದಾರಿ. ಯಾವ ರೀತಿ ನಿಭಾಯಿಸುತ್ತಾರೆ ಅಂತಾ ಕಾದು ನೋಡೋಣ. ವಿಪಕ್ಷವಾಗಿ ನಾವು ಜವಾಬ್ದಾರಿಯಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ನೆಲ-ಜಲ ವಿಚಾರದಲ್ಲಿ ರಾಜಕೀಯ ಬೆರೆಸದೇ ಕೆಲಸ ಮಾಡಬೇಕು. ಜನರಿಗೆ ಅನ್ಯಾಯ ಆದಾಗ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇವೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

  • 18:59 PM

    ಕೆಪಿಸಿಸಿ ಕಚೇರಿಯತ್ತ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ತೆರಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನಿಂತಿದ್ದು, ಹೂ ಮಳೆ ಸುರಿಸಿ ಇರ್ವರೂ ನಾಯಕರನ್ನು ಸ್ವಾಗತಿಸುತ್ತಿದ್ದಾರೆ. ಸಿಎಲ್‌ಪಿ ಸಭೆ ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಲಿದ್ದು, ಖುದ್ದು ಬೈರತಿ ಸುರೇಶ್‌ ಸಿದ್ದರಾಮಯ್ಯರಿರುವ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದಾರೆ.

     

     

  • 18:44 PM

    ರಾಜಧಾನಿಗೆ ನಿಯೋಜಿತ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಮಿಸಿದ್ದಾರೆ. ದಾರಿಯುದ್ದಕ್ಕೂ ಕಾರ್ಯಕರ್ತರು ಜಯಘೋಷ ಕೂಗಿ ಹೂ ಮಳೆ ಸುರಿಸಿ ತಮ್ಮ ನೆಚ್ಚಿನ ನಾಯಕರನ್ನು ಬರಮಾಡಿಕೊಂಡರು.

     

     

     

     

  • 18:34 PM

    ಕರ್ನಾಟಕ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸಮಾರಂಭ ಕಾರ್ಯಕ್ರಮಕೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿಮಾಚಲ ಪ್ರದೇಶ ಸುಖವಿಂದರ್ ಸಿಂಗ್ ಸುಖು, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್‌ಸಿಪಿ ಮಾಜಿ ಮುಖ್ಯಸ್ಥ ಶರದ್ ಪವಾರ್. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನೂ ಆಹ್ವಾನಿಸಲಾಗಿದೆ.

     

     

  • 17:15 PM

    ಕೆಲವೇ ಹೊತ್ತಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಹಿನ್ನೆಲೆ ಬಾಂಬ್‌ ಸ್ಕ್ವಾಡ್‌, ಹಾಗೂ ಶ್ವಾನದಳ ಸಿಬ್ಬಂದಿ ಭದ್ರತೆ ಪರಿಶೀಲನೆ ನಡೆಸುತ್ತಿದ್ದಾರೆ. ಸಂಜೆ 7 ಗಂಟೆಗೆ ಸಿಎಲ್‌ಪಿ ಸಭೆ ನಡೆಯಲಿದೆ.

  • 17:08 PM

    ದೆಹಲಿಯಿಂದ ಸಿದ್ದರಾಮಯ್ಯ ಹಾಗೂ ಡಿ‌.ಕೆ. ಶಿವಕುಮಾರ್ ಅವರು ಒಟ್ಟಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಕಾತುರದಿಂದ ಕಾಯುತ್ತಿದ್ದಾರೆ. ಕಂಸಾಳೆ, ತಮಟೆ, ಡೊಳ್ಳು ಕುಣಿತದೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ತಯಾರಿ ನಡೆಸಲಾಗಿದೆ. ಇಬ್ಬರು ನಾಯಕರ ಮೇಲೆ ಹೂಮಳೆಗೈಯಲು ಸಿದ್ದತೆ ಕೈಗೊಳ್ಳಲಾಗಿದೆ. 

  • 15:58 PM

    ಇಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ರಾಜ ಭವನಕ್ಕೆ ತೆರಳಿ ಸನ್ಮಾನ್ಯ ಶ್ರೀ ರಾಜ್ಯಪಾಲರನ್ನು ಭೇಟಿ ಮಾಡಿದರು. ಈ ವೇಳೆ ಅವರು 2023ರ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಭರ್ಜರಿ ಗೆಲುವು ಕಂಡಿರುವ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸುವ ಬಗ್ಗೆ ಮಾಹಿತಿ ನೀಡಿದರು

     

     

     

  • 15:25 PM

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 20 ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರನ್ನು ಆಹ್ವಾನಿಸಿದ್ದಾರೆ. ಈಗಾಗಲೇ ಗೊಂದಲ ಬಗೆಹರಿದ ಹಿನ್ನಲೆ ನಿಯೋಜಿತ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಹ ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಭಾಗವಹಿಸಲಿದ್ದಾರೆ.

     

     

     

     

  • 14:21 PM

    ‘ಜನರು ಇಷ್ಟು ದೊಡ್ಡ ಜನಾದೇಶ ಕೊಟ್ಟಾಗ ಖಂಡಿತಾ ಖುಷಿ ಪಡಬೇಕು ಮತ್ತು ಭರವಸೆಗಳನ್ನು ಈಡೇರಿಸಬೇಕು, ಅದೇ ನಮ್ಮ ಮುಖ್ಯ ಧ್ಯೇಯ, ಅಜೆಂಡಾ” ಎಂದು ಕರ್ನಾಟಕ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

     

     

     

  • 14:18 PM

    ಡಿಸಿಎಂ ಸ್ಥಾನ ನೀಡಿರುವುದು ನಿಮಗೆ ಸಂತೋಷವಾಗಿದೆಯೇ ಎಂದು ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, "ನಾನೇಕೆ ಅಸಮಾಧಾನಗೊಳ್ಳಬೇಕು? ಬಹುದೂರ ಸಾಗಬೇಕಿದೆ" ಎಂದು ಹೇಳಿದ್ದಾರೆ.

     

     

     

  • 13:35 PM

    ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮೇ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ನೂತನ ಕರ್ನಾಟಕ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದೆ.

     

     

     

  • 13:20 PM

    ನೂತನ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ:

    • ಸಿದ್ದರಾಮಯ್ಯ( ಕುರುಬ)
    • ಡಿಕೆ ಶಿವಕುಮಾರ್ ( ಒಕ್ಕಲಿಗ)
    • ಬಿ.ಕೆ ಹರಿಪ್ರಸಾದ್ ( ಬಿಲ್ಲವ)
    • ಜಮೀರ್ ಅಹ್ಮದ್ ಖಾನ್ ( ಮುಸ್ಲಿಂ)
    • ಯು.ಟಿ ಖಾದರ್ ( ಮುಸ್ಲಿಂ)
    • ದಿನೇಶ್ ಗುಂಡೂರಾವ್ ( ಬ್ರಾಹ್ಮಣ)
    • ಕೆಜೆ ಜಾರ್ಜ್ ( ಕ್ರೈಸ್ತ)
    • ಜಗದೀಶ್ ಶೆಟ್ಟರ್ ( ಲಿಂಗಾಯತ)
    • ರಾಮಲಿಂಗಾ ರೆಡ್ಡಿ ( ಒಕ್ಕಲಿಗ ರೆಡ್ಡಿ)
    • ಎಂ.ಬಿ ಪಾಟೀಲ್ ( ಲಿಂಗಾಯತ)
    •  ಡಾ. ಜಿ ಪರಮೇಶ್ವರ ( ಎಸ್ ಸಿ)
    • ಕೃಷ್ಣ ಬೈರೇಗೌಡ ( ಒಕ್ಕಲಿಗ)
    • ಪ್ರಿಯಾಂಕ್ ಖರ್ಗೆ ( ಎಸ್ ಸಿ)
    • ಲಕ್ಷ್ಮೀ ಹೆಬ್ಬಾಳ್ಕರ್ ( ಲಿಂಗಾಯತ)
    • ತುಕರಾಮ್ ( ಎಸ್ ಟಿ)
    • ನಾಗೇಂದ್ರ ( ಎಸ್ ಟಿ)
    • ಲಕ್ಷಣ ಸವದಿ ( ಲಿಂಗಾಯತ)
    • ರಾಘವೇಂದ್ರ ಹಿಟ್ನಾಳ್ ( ಕುರುಬ)
    • ಪುಟ್ಟರಂಗ ಶೆಟ್ಟಿ ( ಉಪ್ಪಾರ )
    • ಸಂತೋಷ್ ಲಾಡ್( ಮರಾಠಿ)
    •  ಎಚ್ ಕೆ ಪಾಟೀಲ್ ( ರೆಡ್ಡಿ ಲಿಂಗಾಯತ)
    •  ಶಿವಲಿಂಗೇಗೌಡ ( ಒಕ್ಕಲಿಗ)
    • ಮಧು ಬಂಗಾರಪ್ಪ ( ಈಡಿಗ)
    • ಟಿ.ಬಿ ಜಯಚಂದ್ರ ( ಒಕ್ಕಲಿಗ)
    • ರಾಮಲಿಂಗಾ ರೆಡ್ಡಿ ( ರೆಡ್ಡಿ)
    • ಕೆ. ಎಚ್ ಮುನಿಯಪ್ಪ/ ರೂಪಾ ಶಶಿಧರ್ ( ಎಸ್ ಸಿ)
    • ಶಿವಾನಂದ ಪಾಟೀಲ್ ( ಲಿಂಗಾಯತ)
    • ಈಶ್ವರ್ ಖಂಡ್ರೆ ( ಲಿಂಗಾಯತ)
    • ಟಿಡಿ ರಾಜೇಗೌಡ ( ಒಕ್ಕಲಿಗ)
    • ವಿನಯ್ ಕುಲಕರ್ಣಿ( ಲಿಂಗಾಯತ)
    • ಎಂ ಕೃಷ್ಣಪ್ಪ ( ಒಕ್ಕಲಿಗ)
    • ಶಿವರಾಜ್ ತಂಗಡಗಿ ( ಭೋವಿ)
    • ಅಜಯ್ ಧರ್ಮಸಿಂಗ್ ( ರಜಪೂತ)
    • ಸತೀಶ್ ಜಾರಕಿಹೊಳಿ ( ಎಸ್ ಟಿ)
  • 13:01 PM

    ರಣದೀಪ್ ಸಿಂಗ್ ಸುರ್ಜೇವಾಲಾ: 

    "ನಮ್ಮ ಏಕೈಕ ಸೂತ್ರವೆಂದರೆ ಜನಸೇವೆ. ಜನರ ಸೇವೆಯನ್ನು ಯಾರು ಬೇಕಾದರೂ ಮಾಡಬಹುದು. ನಮ್ಮ ಎಲ್ಲಾ ಮಿತ್ರರನ್ನು (ಪ್ರಮಾಣ ವಚನ ಸಮಾರಂಭಕ್ಕೆ) ಆಹ್ವಾನಿಸಲಾಗುತ್ತದೆ. ಇದು ಆಚರಣೆ ಅಲ್ಲ… ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್‌ನ ಸಮರ್ಪಣೆ. ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು ಮತ್ತು ಸಂವಿಧಾನವನ್ನು ಉಳಿಸಲು ಬಯಸುವವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು” ಎಂದು ಕರ್ನಾಟಕದ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ

     

     

     

  • 12:49 PM

    Karnataka CM Siddaramaiah Tweet: ಮುಖ್ಯಮಂತ್ರಿ ಸ್ಥಾನ ಪಕ್ಕಾ ಆಗುತ್ತಿದ್ದಂತೆ ಟ್ವೀಟ್ ಮಾಡಿದ ಸಿದ್ದರಾಮಯ್ಯ, “ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ” ಎಂದು ಭರವಸೆ ನೀಡಿದ್ದಾರೆ.

     

     

  • 12:32 PM

    ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಘೋಷಿಸಿದ್ದಾರೆ

     

     

     

     

  • 11:34 AM

    CM Decision LIVE Updates: ಕರ್ನಾಟಕ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಇಂದು ಮುಂಜಾನೆ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ನಿವಾಸದಲ್ಲಿ ಉಪಹಾರ ಸಭೆ ನಡೆಸಿದರು.

     

     

     

  • 11:12 AM

    CM Decision LIVE Updates: ದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಟ್ಟಿಗೆ ಆಗಮಿಸಿದ್ದಾರೆ.

     

     

     

  • 10:11 AM

    CM Decision LIVE Updates: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಸುದ್ದಿಯಲ್ಲಿರುವ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿರುವ ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಅವರ ನಿವಾಸಕ್ಕೆ ತೆರಳಿದ್ದಾರೆ.

     

     

  • 10:04 AM

    CM Decision LIVE Updates: ”ನನಗೆ ಪೂರ್ಣ ಸಂತೋಷವಿಲ್ಲ ಆದರೆ ಕರ್ನಾಟಕದ ಹಿತದೃಷ್ಟಿಯಿಂದ ನಾವು ನಮ್ಮ ಬದ್ಧತೆಯನ್ನು ಪೂರೈಸಲು ಬಯಸಿದ್ದೇವೆ. ಅದಕ್ಕಾಗಿಯೇ ಡಿಕೆ ಶಿವಕುಮಾರ್ ಈ ಒಪ್ಪಂದವನ್ನು ಒಪ್ಪಿಕೊಳ್ಳಬೇಕಾಯಿತು. ಮುಂದಿನ ದಿನಗಳಲ್ಲಿ ಸಾಗಲು ಬಹಳ ದೂರವಿದೆ. ಡಿ.ಕೆ.ಶಿವಕುಮಾರ್ ಗೆ ಸಿಎಂ ಹುದ್ದೆ ಸಿಗಬೇಕೆಂದು ನನ್ನ ಹಾರೈಕೆಯಾಗಿತ್ತು. ಆದರೆ ಆಗಲಿಲ್ಲ, ಕಾದು ನೋಡೋಣ” ಎಂದು ಕಾಂಗ್ರೆಸ್ ಸಂಸದ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ.

     

     

     

  • 09:50 AM

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಸುದ್ದಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರತಿಪಕ್ಷ ನಾಯಕರನ್ನು ಆಹ್ವಾನಿಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಗಾಂಧಿ ಕುಟುಂಬ, ಕಾಂಗ್ರೆಸ್ ಸಿಎಂಗಳು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ

     

     

     

  • 09:07 AM

    ಡಿಸಿಎಂ ಪಟ್ಟ ಅಲಂಕರಿಸಲಿರುವ ಡಿಕೆ ಶಿವಕುಮಾರ್ ಯಾರು?: 

    ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲು ಕಾರಣರಾದವರಲ್ಲಿ 60ರ ಹರೆಯದ ರಾಜ್ಯ ಪಕ್ಷದ ಮುಖ್ಯಸ್ಥ ಡಿ ಕೆ ಶಿವಕುಮಾರ್ ಕೂಡ ಒಬ್ಬರು. 2020 ರಲ್ಲಿ ಕೆಪಿಸಿಸಿ ಮುಖ್ಯಸ್ಥರಾಗಿ ನೇಮಕಗೊಂಡ ಡಿಕೆ ಶಿವಕುಮಾರ್ ಮೇಲೆ ಅನೇಕ ಆರೋಪಗಳಿವೆ. ಇನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಒಂದು ವರ್ಷದ ಹಿಂದೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದರೂ ಸಹ, ಪಕ್ಷವನ್ನು ಅಧಿಕಾರದ ಸ್ಥಾನಕ್ಕೆ ತರಲು ಸುದೀರ್ಘ ಹೋರಾಟ ನಡೆಸಿದ್ದಾರೆ ಡಿಕೆ ಶಿವಕುಮಾರ್.  

  • 08:53 AM

    CM Decision LIVE Updates: ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದಂತೆ ನಿವಾಸದ ಮುಂದೆ ಹೈ ಅಲರ್ಟ್ ಘೋಷಿಸಲಾಗಿದೆ. ಕಳೆದ ದಿನದಿಂದಲೇ ಅಭಿಮಾನಿಗಳು ಸಿದ್ದರಾಮಯ್ಯ ಮನೆ ಮುಂದೆ ದೌಡಾಯಿಸಿದ್ದು, ಫ್ಲೆಕ್ಸ್ ಗಳಿಗೆ ಹಾಲಿನಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

     

     

     

Trending News