ಚುನಾವಣಾ ಆಯೋಗವನ್ನೇ ಜೈಲಿಗೆ ಹಾಕುತ್ತೇವೆ ಎಂದಿದ್ದ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಎಫ್ಐಆರ್ ದಾಖಲು

ಚುನಾವಣಾ ಆಯೋಗವನ್ನೇ ಜೈಲಿಗೆ ಹಾಕುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ಪ್ರಕಾಶ್‌ ಅಂಬೇಡ್ಕರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. 

Last Updated : Apr 5, 2019, 06:40 AM IST
ಚುನಾವಣಾ ಆಯೋಗವನ್ನೇ ಜೈಲಿಗೆ ಹಾಕುತ್ತೇವೆ ಎಂದಿದ್ದ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಎಫ್ಐಆರ್ ದಾಖಲು title=

ನವದೆಹಲಿ: ಚುನಾವಣಾ ಆಯೋಗವನ್ನೇ ಜೈಲಿಗೆ ಹಾಕುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ದಲಿತ ನಾಯಕ ಮತ್ತು ಮೂರು ಬಾರಿ ಸಂಸದರಾಗಿರುವ ಪ್ರಕಾಶ್‌ ಅಂಬೇಡ್ಕರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಮಹಾರಾಷ್ಟ್ರದ ಯವತ್ಮಲ್ ನಲ್ಲಿ ಗುರುವಾರ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ,  ಪುಲ್ವಾಮ ಭಯೋತ್ಪಾದಕ ದಾಳಿ ಬಗ್ಗೆ ಮಾತನಾಡಲು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಅವಕಾಶ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪುಲ್ವಾಮ ದಾಳಿಯಲ್ಲಿ 40 ಯೋಧರನ್ನು ನಾವು ಕಳೆದುಕೊಂಡೆವು. ಆದರೆ ಸುಮ್ಮನೆ ಕುಳಿತಿದ್ದೇವೆ. ಪುಲ್ವಾಮ ದಾಳಿ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣಾ ಆಯೋಗ ನಮ್ಮನ್ನು ಹೇಗೆ ಕಟ್ಟುಹಾಕುವುದಕ್ಕೆ ಸಾಧ್ಯ? ಸಂವಿಧಾನ ನಮಗೆ ಮಾತನಾಡುವ ಹಕ್ಕು ನೀಡಿದೆ. ನಾನು ಬಿಜೆಪಿಯಲ್ಲ. ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ 2 ದಿನ ಜೈಲಿಗೆ ಕಳಿಸುತ್ತೇನೆ ಎಂದು ಹೇಳಿದ್ದರು. ಈ ಸಂಬಂಧ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಎಫ್ಐಆರ್ ದಾಖಲಿಸಿದೆ. 

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗನಾಗಿರುವ ಪ್ರಕಾಶ್‌ ಅವರು ಭಾರಿಪ್‌ ಬಹುಜನ್‌ ಮಹಾಸಂಘ ಮತ್ತು ಅಸಾದುದದ್ದೀನ್‌ ಓವೈಸಿ ಅವರ ಎಐಎಂಐಎಂ ಪಕ್ಷದ ಮೈತ್ರಿಯಲ್ಲಿ ರಚಿತವಾಗಿರುವ ವಂಚಿತ್‌ ಬಹುಜನ್‌ ಅಘಾಡಿ (ವಿಬಿಎ) ಪಕ್ಷದ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಿಬಿಎ ಮಹಾರಾಷ್ಟ್ರದ ಎಲ್ಲ 48 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
 

Trending News