'ಸಂಕಲ್ಪ ಪತ್ರ' ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಭಾರತದ ಅಭಿವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು - ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

Last Updated : Apr 8, 2019, 12:49 PM IST
'ಸಂಕಲ್ಪ ಪತ್ರ' ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ title=
Pic Courtesy: ANI

ನವದೆಹಲಿ: ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) 'ಸಂಕಲ್ಪ ಪತ್ರ' ಹೆಸರಿನಲ್ಲಿ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ದೇಶದಲ್ಲಿ ಮೂರು ದಶಕಗಳ ನಂತರ ಸಂಪೂರ್ಣ ಬಹುಮತದೊಂದಿಗೆ ಪಕ್ಷವೊಂದು ಅಧಿಕಾರಕ್ಕೆ ಬಂದಿದೆ. ಭಾರತದ ಅಭಿವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಹೇಳಿದರು.

ದೇಶದಲ್ಲಿ ಬಡತನ ನಿರ್ಮೂಲನೆ, ಮೂಲಸೌಕರ್ಯ, ಸ್ವಚ್ಚತೆ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ದೇಶದ ಆರ್ಥಿಕತೆಯ ಅಭಿವೃದ್ಧಿಯಿಂದಾಗಿ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುವಂತಾಗಿದೆ. ಪಾರದರ್ಶಕ ಆಡಳಿತಕ್ಕೆ ನಮ್ಮ ಸರ್ಕಾರ ಉದಾಹರಣೆಯಾಗಿದೆ ಎಂದು ಶಾ ತಿಳಿಸಿದರು..

ಪ್ರಧಾನಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ 48 ಪುಟಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ನಮ್ಮದು ವಾಸ್ತವಕ್ಕೆ ಹತ್ತಿರವಾದ ಪ್ರಣಾಳಿಕೆ. ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ವರ್ಗಗಳ ಜನತೆಯೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಸಂಗ್ರಹಿಸಿ ಈ ಸಂಕಲ್ಪ ಪತ್ರವನ್ನು ಸಿದ್ಧಗೊಳಿಸಲಾಗಿದೆ. ನವ ಭಾರತ ನಿರ್ಮಾಣಕ್ಕೆ ಈ ವಿಷನ್ ಡಾಕ್ಯುಮೆಂಟ್ ಬಗ್ಗೆ ಗೌರವವಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕುಸಿದಿದ್ದ ಆರ್ಥಿಕತೆಯನ್ನು ಈಗ ಹಳಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಭಯೋತ್ಪಾದನೆಯ ಸಹನೆ ಅಸಾಧ್ಯ ಎಂಬುದನ್ನು ನಮ್ಮ ಸರ್ಕಾರ ಸಾಬೀತು ಪಡಿಸಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಇಂದು ಬಿಡುಗಡೆ ಮಾಡಿರುವ ಸಂಕಲ್ಪ ಪತ್ರದಲ್ಲಿ ನವ ಭಾರತ ನಿರ್ಮಾಣದೊಂದಿಗೆ ದೇಶದ ಅಭಿವೃದ್ಧಿಯ ಉದ್ದೇಶವಿದೆ. ಬಡವರ ಏಳಿಗೆಯ ಕನಸಿದೆ. ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದರು ಮತ್ತು ನಾವು ಅದನ್ನು ಪೂರೈಸಲು ಹೆಚ್ಚು ಯಶಸ್ವಿಯಾಗಿದ್ದೇವೆ ಎಂದರು. 

'ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎಂಬ ಟ್ಯಾಗ್‌ಲೈನ್ ಜೊತೆಗೆ ಬಿಡುಗಡೆ ಮಾಡಲಾಗಿರುವ ಬಿಜೆಪಿ ಸಂಕಲ್ಪ ಪತ್ರದ ಪ್ರಮುಖ ಅಂಶಗಳು:

* 130 ಕೋಟಿ ಭಾರತೀಯರಿಗೆ ಸಂಕಲ್ಪ ಪತ್ರ (ಅಥವಾ ಮ್ಯಾನಿಫೆಸ್ಟೋ) ವಿಷನ್ ದಾಖಲೆಯಾಗಿ ಪ್ರಸ್ತುತಪಡಿಸಲಾಗುತ್ತಿದೆ
* ರಾಮಮಂದಿರ ನಿರ್ಮಾಣಕ್ಕೆ ಬದ್ಧ
* ರಾಷ್ಟ್ರೀಯ ಭದ್ರತೆ, ಸುರಕ್ಷತೆಗೆ ಆದ್ಯತೆ
* ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ 25 ಲಕ್ಷ ಕೋಟಿ ರೂ.
* ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಎಲ್ಲಾ ರೈತರಿಗೆ 6,000 ವಾರ್ಷಿಕ ಆದಾಯ ಬೆಂಬಲ.
* ಕೃಷಿ ಕ್ಷೇತ್ರದಲ್ಲಿ 25 ಲಕ್ಷ ಹೂಡಿಕೆ. 60 ವರ್ಷ ದಾಟಿದ ರೈತರಿಗೆ ಪಿಂಚಣಿ ಯೋಜನೆ.
* ರೈತರಿಗೆ ಬಡ್ಡಿ ರಹಿತ ಸಾಲದ ಜೊತೆಗೆ ಕ್ರೆಡಿಟ್ ಕಾರ್ಡ್
* ರೈತರಿಗೆ ಅನುಕೂಲವಾಗುವಂತೆ ದೇಶಾದ್ಯಂತ ಕೃಷಿ ಉಗ್ರಾಣ ವ್ಯವಸ್ಥೆ
* ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ. ಹೂಡಿಕೆ
* ಸರ್ವರಿಗೂ ಶಿಕ್ಷಣ ಒದಗಿಸಲು ಕ್ರಮ
* ಜಿಎಸ್ ಟಿ ಸರಳೀಕರಣ
* ಪ್ರತಿ ಮನೆಗೂ ವಿದ್ಯುತ್. ಗ್ರಾಮ ಪಂಚಾಯಿತಿಗೆ ಹೈ ಸ್ಪೀಡ್ ಇಂಟರ್ನೆಟ್ ಭರವಸೆ
* ಸಣ್ಣ ವ್ಯಾಪಾರಸ್ಥರಿಗೆ ಪಿಂಚಣಿ ಯೋಜನೆ
* ಮಹಿಳೆಯರ ಅಭಿವೃದ್ಧಿಗೆ ಒತ್ತು

 

Trending News