ಲಾಥೂರ್: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಭಾಷೆಯಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಲಾಥೂರ್ ನಲ್ಲಿ ಏರ್ಪಡಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ ರದ್ದತಿ ಬಗ್ಗೆ ಪ್ರಸ್ತಾಪಿಸಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್ಸಿಗೆ ನಮ್ಮ ದೇಶದ ವೀರ ಯೋಧರ ಬಗ್ಗೆ ಗೌರವವಿಲ್ಲ. ಯಾವಾಗಲೂ ಪಾಕಿಸ್ತಾನದ ಭಾಷೆಯಲ್ಲಿಯೇ ಮಾತನಾಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯ ಭಾಷೆಯೂ, ಪಾಕಿಸ್ತಾನದ ಭಾಷೆಯಂತೆಯೇ ಇದೆ ಎಂದು ಟೀಕಿಸಿದರು.
ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ರಾಷ್ಟ್ರ ಹಾಗೂ ಪ್ರಧಾನಿಯ ಬೇಡಿಕೆ ಇಟ್ಟಿರುವವರನ್ನೇ ಹಿಂದೊಮ್ಮೆ ಇಡೀ ದೇಶವೇ ನಂಬಿತ್ತು. ಅವರ ನೈಜ ಆಲೋಚನೆಗಳು ಇದೀಗ ಹೊರಬರುತ್ತಿವೆ.
ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡಕ್ಕೂ, ನಮ್ಮ ಸೈನಿಕರಿಗೆ ಸಂಪೂರ್ಣ ಬಲ ನೀಡುವುದು ಇಷ್ಟವಿಲ್ಲ. ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ಭಯೋತ್ಪಾದನೆಯನ್ನು ಹರಡುತ್ತಿವೆ, ಭಾರತವನ್ನು ವಿಭಜಿಸುವ ಉದ್ದೇಶ ಹೊಂದಿವೆ. ಭಾರತದ ಭದ್ರತೆಯ ವೈಫಲ್ಯಗಳ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುತ್ತದೆಂದರೆ ಅದು ನಾಚಿಕೆಗೇಡಿನ ವಿಷಯ ಎಂದು ಮೋದಿ ವಾಗ್ದಾಳಿ ನಡೆಸಿದರು.