ಬೆಂಗಳೂರು: ದಿಣ್ಣೂರು ಮುಖ್ಯರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಇಂದು ಉಪಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದರು.
ನಿತ್ಯ ವಾಹನ ದಟ್ಟಣೆ ಅಧಿಕವಾಗಿರುವ ದಿಣ್ಣೂರು ಮುಖ್ಯರಸ್ತೆ ಕಡಿದಾದ್ದರಿಂದ ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಲು ಯೋಜಿಸಲಾಗಿತ್ತು. ರಸ್ತೆಯ ಎರಡೂ ಭಾಗದಲ್ಲಿ 80 ಅಡಿ ಸ್ಥಳ ಒಡೆಯಲು ಅಂದಾಜಸಲಾಗಿತ್ತು. ಆದರೆ ಇಲ್ಲಿನ ಸ್ಥಳೀಯರು ಅಂಗಡಿ, ಮನೆ ಒಡೆಯದಂತೆ ಮನವಿ ಮಾಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ 40 ಅಡಿ ಯಷ್ಟು ಅಗಲೀಕರಣ ಮಾಡುವ ಬಗ್ಗೆ ಅಂದಾಜಿಸಲಾಗಿದೆ.
ಸ್ಥಳೀಯರು 10 ಅಡಿ ಅಗಲೀಕರಣ ಮಾಡಿ ಎಂದಿದ್ದಾರೆ. ಎಲ್ಲವನ್ನೂ ಪರಿಶೀಲಿಸಲಾಗುವುದು. ದಿಣ್ಣೂರು ರಸ್ತೆ ಅಗಲೀಕರಣಕ್ಕೆ ಈಗಾಗಲೇ ನಕ್ಷೆ ಸಿದ್ಧಪಡಿಸಿ ಹಣ ಕೂಡ ಮಂಜೂರು ಮಾಡಲಾಗಿದೆ ಎಂದರು.
ದಿಣ್ಣೂರು ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್ ರಾಜಕಾಲುವೆಯನ್ನೂ ಸಹ ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಕೂಡಲೇ ಆ ತಡೆಯಾಜ್ಞೆ ತೆರವುಗೊಳಿಸಿ ಒತ್ತುವರಿ ತೆರವು ಮಾಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಪರಮೇಶ್ವರ್ ತಿಳಿಸಿದರು.
ನಗರದ ನಾಲ್ಕು ದಿಕ್ಕಿನಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಪಾರ್ಕ್ ಹಾಗೂ ಕಂಠೀರವ ಸ್ಟೇಡಿಯಂ ಮಾದರಿಯಲ್ಲಿ ಮೈದಾನ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಈ ಸಂಬಂಧ ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸಲು ತೀರ್ಮಾನ ಮಾಡಲಾಗಿದೆ. ಈ ಮೂಲಸೌಕರ್ಯಕ್ಕಾಗಿ ಜಾಗ ಗುರುತಿಸಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಹೆಬ್ಬಾಳ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ಗ್ರಂಥಾಲಯ ಮರು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳೀಯ ಶಾಸಕರಿಗೆ ತಿಳಿಸಿದರು.