ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಗೊಳ್ಳಲಿದೆ - ಅಧೀರ್ ರಂಜನ್ ಚೌಧರಿ

ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷ ಬಲಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಶನಿವಾರ ಹೇಳಿದ್ದಾರೆ.

Last Updated : Aug 18, 2019, 11:20 AM IST
ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಗೊಳ್ಳಲಿದೆ - ಅಧೀರ್ ರಂಜನ್ ಚೌಧರಿ  title=
Photo:PTI(file photo)

ನವದೆಹಲಿ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷ ಬಲಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಶನಿವಾರ ಹೇಳಿದ್ದಾರೆ.

"ಸ್ವಾತಂತ್ರ್ಯಕ್ಕೆ ಮುಂಚೆಯೇ ಕಾಂಗ್ರೆಸ್ ಪಕ್ಷವು ನೆಹರೂ-ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಭಾರತಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದ್ದರಿಂದ ಕಾಂಗ್ರೆಸ್ನಲ್ಲಿ ಎಲ್ಲರೂ ಈ ಕುಟುಂಬವನ್ನು ಗೌರವಿಸುತ್ತಾರೆ. ಅದಕ್ಕಾಗಿಯೇ ಪಕ್ಷವನ್ನು ನಡೆಸಲು ಈ ಕುಟುಂಬದಿಂದ ಒಬ್ಬ ನಾಯಕರನ್ನು ಆಯ್ಕೆ ಮಾಡಿದಾಗ, ಭಾರತದಾದ್ಯಂತದ ಪಕ್ಷದ ಕಾರ್ಯಕರ್ತರು ಹೆಚ್ಚು ಖುಷಿಪಟ್ಟಿದ್ದಾರೆ. ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಲಾಭದಾಯಕವಾಗಿದೆ ಎಂದು ಚೌಧರಿ ಎಎನ್‌ಐಗೆ ತಿಳಿಸಿದರು.

"ನಾವೆಲ್ಲರೂ ಈ ಹಿಂದೆ ಅವರ ಅಡಿಯಲ್ಲಿ ಕೆಲಸ ಮಾಡಿದ್ದೇವೆ. ಈಗ ನಾವು ಅವರ ಅಡಿಯಲ್ಲಿ ಸಂತೋಷದಿಂದ ಕೆಲಸ ಮಾಡುತ್ತೇವೆ. ಅಲ್ಲದೆ, ನೂತನ ಅಧ್ಯಕ್ಷರ ನೇಮಕಕ್ಕಾಗಿ ನಾವು ಕಾಯುತ್ತೇವೆ. ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತದೆ ಎಂಬ ನಂಬಿಕೆ ನಮಗಿದೆ" ಎಂದು ಅವರು ಹೇಳಿದರು.

ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಸೋನಿಯಾ ಗಾಂಧಿಯನ್ನು ಇತ್ತೀಚೆಗೆ ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಯಿತು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸೋನಿಯಾ ಗಾಂಧಿಯವರನ್ನು ಹಂಗಾಮಿ ಅಧ್ಯಕ್ಷೆಯನ್ನಾಗಿ ಕಾರ್ಯಕಾರಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

Trending News